ಅಕ್ರಮ ಮರಳು ಸಾಗಣೆ: ಮೂವರ ಬಂಧನ
ಕೊಡಗು

ಅಕ್ರಮ ಮರಳು ಸಾಗಣೆ: ಮೂವರ ಬಂಧನ

December 15, 2018

ಗೋಣಿಕೊಪ್ಪಲು:  ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿರುವ ಗೋಣಿಕೊಪ್ಪ ಪೊಲೀಸರು, 2 ಟಿಪ್ಪರ್ ಲಾರಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಂಜಾನೆ 3 ಗಂಟೆ ಸುಮಾರಿಗೆ ಹಾತೂರು ರಸ್ತೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಸಾಗಣೆ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಲಾಗಿದೆ. ಎರಡು ಟಿಪ್ಪರ್‍ಗಳಲ್ಲಿ ಮರಳನ್ನು ವಶಕ್ಕೆ ಪಡೆಯಲಾಗಿದೆ.

ಲಾರಿ ಚಾಲಕರುಗಳಾದ ವಿರಾಜಪೇಟೆಯ ಫಾರುಕ್ (37), ಸಜನ್ (36), ಮರಳು ಸಂಗ್ರಹಿಸಿದ್ದ ಆರೋಪದಡೀ ಕೊಳ್ತೋಡು ಗ್ರಾಮದ ಮುತ್ತಪ್ಪ (52) ಅವರನ್ನು ಬಂಧಿಸಿ ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಲಾರಿ ಮಾಲೀಕ ಮಂದಣ್ಣ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ಶ್ರೀಧರ್, ಎಎಸ್‍ಐ ಮಾದಯ್ಯ, ಸಿಬ್ಬಂದಿ ಪೂವಣ್ಣ, ಮಂಜು, ಶೇಖರ್ ಹಾಗೂ ಮೋಹನ್ ಪಾಲ್ಗೊಂಡಿದ್ದರು.

ಕಾಡುಹಂದಿ ಬೇಟೆ: ಆರೋಪಿಗಳು ಪರಾರಿ
ಸೋಮವಾರಪೇಟೆ:  ಅರಣ್ಯದಲ್ಲಿ ವನ್ಯಜೀವಿಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 25 ಕೆ.ಜಿ. ಕಾಡುಹಂದಿ ಹಾಗೂ ಒಂದು ಕಾಡು ಮೊಲವನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಸಂದರ್ಭ ಈರ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ಕಾಡು ಹಂದಿ ಮತ್ತು ಕಾಡು ಮೊಲವನ್ನು ಬೇಟೆಯಾಡಿ, ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಅಧಿಕಾರಿಗಳು ದಾಳಿ ನಡೆಸಿದ್ದು, ಯಡೂರು ಸಮೀಪ ಆರೋಪಿಗಳಾದ ಅರೆಯೂರು ಗ್ರಾಮದ ಶಾಂತಪ್ಪ ಅವರ ಪುತ್ರ ನವೀನ್ ಹಾಗೂ ನೇರಳೆ ಗ್ರಾಮದ ನಂಜಪ್ಪ ಅವರ ಪುತ್ರ ಸುರೇಶ್ ಪರಾರಿಯಾಗಿದ್ದಾರೆ.
ವನ್ಯ ಜೀವಿಗಳ ಮಾಂಸ ಮಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಡಿಆರ್‍ಎಫ್‍ಓ ಮಹದೇವ ನಾಯಕ, ಅರಣ್ಯ ರಕ್ಷಕರಾದ ಭರಮಪ್ಪ, ಅರಣ್ಯ ವೀಕ್ಷಕ ಶ್ರೀಕಾಂತ್, ಚಾಲಕ ಸಂದೀಪ್ ಭಾಗವಹಿಸಿದ್ದರು.

ದೇವಸ್ಥಾನ ಹುಂಡಿ ಕಳವು: ಆರೋಪಿ ಬಂಧನ
ವಿರಾಜಪೇಟೆ: ವಿರಾಜಪೇಟೆ ಸಮೀಪದ ಕುಂಜಿಲಗೇರಿ ಗ್ರಾಮದಲ್ಲಿರುವ ಶ್ರೀ ಮಹಾ ವಿಷ್ಣು ದೇವಾಲಯದಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ್ದ ಆರೋಪಿ ಯನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.12 ರಂದು ಶ್ರೀ ಮಹಾವಿಷ್ಣು ದೇವಾಲಯದ ಕಾಣಿಕೆ ಹುಂಡಿ ಕಾಣೆಯಾಗಿದ್ದು, ಈ ಸಂಬಂಧ ದೇವಾಲಯದ ಅಧ್ಯಕ್ಷ ಮುಕ್ಕಟ್ಟಿರ ಸೋಮಣ್ಣ ಅವರು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ಅದೇ ಗ್ರಾಮದ ಹೆಚ್.ಎನ್.ಸುರೇಶ್ ಎಂಬಾತನನ್ನು ಡಿ.14 ರಂದು ವಿಚಾರಣೆಗೆ ಒಳಪಡಿಸಿದಾಗ ಕಾಣಿಕೆ ಹುಂಡಿಯಲ್ಲಿ ಹೆಚ್ಚು ಹಣವಿರ ಬಹುದೆಂದು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಅರೋಪಿ ಹೆಚ್.ಎನ್. ಸುರೇಶ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದಾಗ ನ್ಯಾಯಾಧೀಶರು ಆರೋಪಿ ಯನ್ನು ನ್ಯಾಯಾಂಗ ಬಂಧನದಲ್ಲಿರಿಸುವಂತೆ ಆದೇಶಿಸಿದ್ದಾರೆ. ಡಿವೈಎಸ್‍ಪಿ ನಾಗಪ್ಪ ಅವರ ಅದೇಶದಂತೆ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಎಎಸ್‍ಐ ಚಂದ್ರಪ್ಪ, ಸಿಬ್ಬಂದಿಗಳಾದ ದೇವಯ್ಯ, ರಾಮಪ್ಪ, ಚಂದ್ರಶೇಖರ್, ಗಿರೀಶ್, ಕೆ.ಎಂ.ಧರ್ಮ, ಗೋಪಿನಾಥ್, ನವೀನ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »