ಎಂಸಿಡಿಸಿಸಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಸ್ಥಗಿತ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಸ್ಥಗಿತ

November 8, 2018

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್ ಚುನಾವಣಾ ಪ್ರಕ್ರಿಯೆಯನ್ನು ಸಹ ಕಾರ ಚುನಾವಣಾ ಆಯೋಗವು ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಎಂಸಿಡಿಸಿಸಿ ಬ್ಯಾಂಕ್‍ಗೆ ನ.12ರಂದು ಚುನಾವಣೆ ನಡೆಯಬೇಕಾಗಿತ್ತು. ಅದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಈಗಾ ಗಲೇ ಆರಂಭವಾಗಿದ್ದು, ನಾಮಪತ್ರ ಹಿಂಪಡೆಯುವ ದಿನಾಂಕವೂ ನ.6ಕ್ಕೆ ಮುಕ್ತಾಯಗೊಂಡಿದೆ. ಈಗಾಗಲೇ ಎಂಸಿಡಿಸಿಸಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ. ಹರೀಶ್‍ಗೌಡ ಮತ್ತು ಯಳಂದೂರಿನ ಜಯರಾಮ್ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ನ.12ರಂದು
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಚುನಾವಣೆ ನಡೆಯಬೇಕಾಗಿತ್ತು.

ಸ್ಥಗಿತಕ್ಕೆ ಕಾರಣ: ಎಂಸಿಡಿಸಿಸಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆಗಳನ್ನು ಜಿಲ್ಲಾಧಿಕಾರಿಗಳು ಸೆ.1ರಂದೇ ಆರಂಭಿಸಿದ್ದರು. ಈ ನಡುವೆ ಬ್ಯಾಂಕ್‍ನ ಹುಣಸೂರು ಶಾಖೆಯಲ್ಲಿ ನಡೆದಿದ್ದ ಅವ್ಯವಹಾರದ ಹಿನ್ನೆಲೆಯಲ್ಲಿ ಬ್ಯಾಂಕ್‍ನ ಎಂಡಿ ಲಿಂಗಣ್ಣಯ್ಯ ಅವರನ್ನು ಆಡಳಿತ ಮಂಡಳಿ ಅವರ ಸ್ಥಾನದಿಂದ ಬಿಡುಗಡೆ ಮಾಡಿತ್ತು. ಅದಕ್ಕೆ ಕೆಲ ನಿರ್ದೇಶಕರು ಸಹಕಾರ ಸಂಘಗಳ ಜಂಟಿ ನಿಬಂಧಕರಿಂದ ತಡೆಯಾಜ್ಞೆ ತಂದು ಲಿಂಗಣ್ಣಯ್ಯ ಅವರು ಕರ್ತವ್ಯದಲ್ಲಿ ಮುಂದುವರೆಯುವಂತೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಜಂಟಿ ನಿಬಂಧಕರ ಆದೇಶ ಮತ್ತು ಚುನಾವಣಾ ಪ್ರಕ್ರಿಯೆಗೆ ತಡೆ ಕೋರಿ ಮತ್ತೆ ಕೆಲವು ನಿರ್ದೇಶಕರು ಹೈಕೋರ್ಟ್ ಮೊರೆ ಹೋಗಿದ್ದರು. ಜಂಟಿ ನಿಬಂಧಕರ ಆದೇಶವನ್ನು ವಜಾ ಮಾಡಿದ್ದ ಹೈಕೋರ್ಟ್ ಚುನಾವಣಾ ಪ್ರಕ್ರಿಯೆಗೂ ತಡೆಯಾಜ್ಞೆ ನೀಡಿತ್ತು. ಆದರೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿ, ಪ್ರಕ್ರಿಯೆಗಳು ಆರಂಭವಾಗಿಬಿಟ್ಟಿದ್ದವು. ಈ ನಡುವೆ ಕೆಲ ನಿರ್ದೇಶಕರು ಸಹಕಾರ ಸಂಘಗಳ ವಕೀಲರನ್ನು ಸಂಪರ್ಕಿಸಿ ವಿಷಯ ತಿಳಿಸಿದ ಮೇರೆಗೆ ಅವರ ಸೂಚನೆಯಂತೆ ಸಹಕಾರ ಇಲಾಖೆಯು ಸಹಕಾರ ಚುನಾವಣಾ ಆಯೋಗದ ನಿರ್ದೇಶನವನ್ನು ಕೋರಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಹೈಕೋರ್ಟ್‍ನ ತಡೆಯಾಜ್ಞೆ ಇರುವ ಕಾರಣ ತಕ್ಷಣದಿಂದಲೇ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆಯೂ ತಡೆಯಾಜ್ಞೆ ತೆರವಾದ ನಂತರ ಯಾವ ಹಂತದಲ್ಲಿ ಪ್ರಕ್ರಿಯೆಗಳು ಸ್ಥಗಿತಗೊಂಡಿವೆಯೋ ಅಲ್ಲಿಂದ ಮುಂದುವರೆಯು ವಂತೆಯೂ ಸಹಕಾರ ಚುನಾವಣಾ ಆಯೋಗವು ಆದೇಶಿಸಿದೆ.

Translate »