ಇಂಜಿನಿಯರಿಂಗ್ ಕಾಲೇಜಿನಲ್ಲಿ 1.50 ಲಕ್ಷ ಮೌಲ್ಯದ ವಸ್ತುಗಳ ಕಳವು
ಮೈಸೂರು

ಇಂಜಿನಿಯರಿಂಗ್ ಕಾಲೇಜಿನಲ್ಲಿ 1.50 ಲಕ್ಷ ಮೌಲ್ಯದ ವಸ್ತುಗಳ ಕಳವು

January 8, 2020

ಮೈಸೂರು, ಜ.7(ಎಸ್‍ಬಿಡಿ)- ಕಾಲೇಜಿನ ಹಿಂಭಾಗದ ಗೇಟ್ ಬೀಗ ಮುರಿದು, ಬೈಕ್, ದಾಖಲೆಗಳು ಸೇರಿದಂತೆ ಸುಮಾರು 1.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಳ್ಳಿಯಲ್ಲಿರುವ ಮೈಸೆಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಹಿಂಭಾಗದ ಗೇಟ್ ಬೀಗ ಮುರಿದು ಒಳನುಗ್ಗಿರುವ ಖದೀಮರು, ಸಿಸಿಟಿವಿ ಕ್ಯಾಮರಾಗಳನ್ನು ಜಖಂ ಮಾಡಿ, ಸರ್ವರ್ ರೂಂ, ಅಕೌಂಟ್ ವಿಭಾಗ, ಕಾಲೇಜು ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಕೊಠಡಿ ಹಾಗೂ ಕಚೇರಿಯ ಲಾಕ್‍ಗಳನ್ನೂ ಮುರಿದು, ಮೌಲ್ಯಯುತ ವಸ್ತುಗಳು ಹಾಗೂ ದಾಖಲೆಗಳ ಜೊತೆಗೆ ಆವರಣದಲ್ಲಿದ್ದ ಕಾಲೇಜಿಗೆ ಸೇರಿದ ಸಿಟಿ-100 ಬೈಕ್(ಕೆಎ-55, ಇಎ-6083) ಅನ್ನೂ ಕದ್ದೊಯ್ದಿದ್ದಾರೆ. ಸರ್ವರ್ ರೂಂನಲ್ಲಿದ್ದ 2 ಡಿವಿಆರ್, ಹಾರ್ಡ್ ಡಿಸ್ಕ್, ಅಕೌಂಟ್ ಸೆಕ್ಷನ್‍ನಲ್ಲಿದ್ದ ಗೋಲಕದ ಹಣ, ದಾಖಲೆಗಳು ಹಾಗೂ ಬೈಕ್ ಸೇರಿದಂತೆ 1.50 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಜ.5ರಂದು ರಾತ್ರಿ ಭದ್ರತಾ ಸಿಬ್ಬಂದಿ ಪಿ.ಜಯರಾಜ್, ಕಾಲೇಜಿನ ಗೇಟ್‍ಗಳಿಗೆ ಬೀಗ ಹಾಕಿ, ಕಾವಲಿದ್ದರು. ಮರುದಿನ ಮುಂಜಾನೆ 5.30ರ ವೇಳೆಗೆ ಕರೆ ಮಾಡಿ, ಕಾಲೇಜಿನಲ್ಲಿ ಕಳ್ಳತನವಾಗಿರುವ ಬಗ್ಗೆ ತಿಳಿಸಿದರೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ರವೀಂದ್ರನಾಥ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಆಲನಹಳ್ಳಿ ಠಾಣೆ ಪೊಲೀಸರು, ಡಿವಿಆರ್‍ಗಳನ್ನು ಕಾಲೇಜು ಹಿಂಭಾಗದಲ್ಲಿ ಬಿಸಾಡಿ, ಹೊಸ ಬೈಕ್ ಕದ್ದೊಯ್ದಿದ್ದು, ಕಳ್ಳರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Translate »