ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ 10 ಕೋಟಿ ಅನುದಾನ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್
ಚಾಮರಾಜನಗರ

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ 10 ಕೋಟಿ ಅನುದಾನ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್

November 21, 2018

ಚಾಮರಾಜನಗರ: ಜಿಲ್ಲೆಯ ಪ್ರವಾಸಿ ತಾಣಗಳ ಅಭಿ ವೃದ್ಧಿಗಾಗಿ ಕಳೆದ ನಾಲ್ಕು ತಿಂಗಳಿನಲ್ಲಿ 10 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಸಂಜೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಲು ಸಿದ್ಧನಿದ್ದೇನೆ. ಆದರೆ, ಅನುದಾನ ಸದ್ಬಳಕೆ ಆಗಬೇಕು ಎಂಬುದು ನನ್ನ ಆಶಯ ಎಂದರು.

ಕಳೆದ 2013ರಿಂದ 2018ರವರೆಗೆ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 6.15 ಕೋಟಿ ರೂ. ಬಿಡುಗಡೆ ಆಗಿತ್ತು. ಆದರೆ ಈಗಿನ ಸರ್ಕಾರ ಕೇವಲ 4 ತಿಂಗಳಿನಲ್ಲಿ ಜಿಲ್ಲೆಯ ಪ್ರವಾ ಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಸೂಚನೆ ಪಾಲಿಸಿ: ಜಿಲ್ಲೆಯ ಭರಚುಕ್ಕಿ ಜಲಪಾತದ ಸೊಬಗನ್ನು ಮೇಲೆ ಭಾಗ ದಲ್ಲಿಯೇ ನಿಂತು ವೀಕ್ಷಿಸಬೇಕಾಗಿತ್ತು. ನಾನು ಸ್ಥಳಕ್ಕೆ ಭೇಟಿ ನೀಡಿದಾಗ ಪ್ರವಾಸಿಗರು ಮಧ್ಯ ಭಾಗದವರೆಗೆ ತೆರಳಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದನ್ನು ಜಾರಿಗೊಳಿಸುವಂತೆ ಸೂಚನೆ ನೀಡಿದ್ದೇನೆ. ಆದರೆ, ಇದು ಜಾರಿ ಆಗಿಲ್ಲ ಎಂದು ದೂರು ಬಂದಿದೆ. 2ನೇ ಮೇಲಿನ ಮಧ್ಯ ಭಾಗದವರೆಗೆ ಪ್ರವಾಸಿಗರು ತೆರಳಲು ಅವಕಾಶ ಮಾಡಿಕೊಡುವಂತೆ ಅಧಿ ಕಾರಿಗಳಿಗೆ ಸೂಚಿಸಿದರು.

ಏಜೆನ್ಸಿ ಬದಲಾವಣೆ: ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಕಾಮಗಾರಿಯನ್ನು ಕೆ.ಆರ್.ಐ.ಡಿ.ಎಲ್‍ಗೆ ವಹಿಸಲಾಗಿದೆ. ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇದು ಹೀಗೆಯೇ ಮುಂದು ವರೆದರೆ ಕಾಮಗಾರಿಯನ್ನು ಬೇರೆ ಏಜೆನ್ಸಿಗೆ ಬದಲಾಯಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಸಚಿವರು, ಇನ್ನು ಮುಂದಾದರೂ ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

ಧೋರಣೆ ಬದಲಾಯಿಸಿ: ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಸಹಕರಿಸುತ್ತಿಲ್ಲ ಎಂಬ ದೂರು ಗಳಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿವೃದ್ಧಿಗೆ ಸಹಕರಿಸಬೇಕು. ನಮಗೂ ಕಾಡಿನ ಬಗ್ಗೆ ಅರಿವು ಇದೆ. ಮನುಷ್ಯರೇ ಇಲ್ಲದ ಮೇಲೆ ಕಾಡನ್ನು ಇಟ್ಟುಕೊಂಡು ನೀವು ಏನು ಮಾಡುತ್ತೀರಿ? ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಮೂಲ ಸೌಲಭ್ಯ ಕಲ್ಪಿಸಿ: ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಇರುವಷ್ಟು ಬೇರೆ ಯಾವುದೇ ಜಿಲ್ಲೆಯಲ್ಲಿ ಇಲ್ಲ, ಮತ್ತಷ್ಟು ಅಭಿವೃದ್ಧಿ ಆಗಬೇಕಾದರೆ, ಪ್ರವಾಸಿ ತಾಣಗಳು ಅಭಿವೃದ್ಧಿ ಹೊಂದ ಬೇಕಾಗಿವೆ. ಪ್ರವಾಸಿ ತಾಣಗಳಲ್ಲಿ ಕುಡಿ ಯುವ ನೀರು, ಶೌಚಾಲಯದ ಸೌಲಭ್ಯ ಕಲ್ಪಿಸಬೇಕು. ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಭದ್ರತೆ ಒದಗಿಸಲು ಎಲ್ಲಾ ರೀತಿಯ ಕ್ರಮ ಗಳನ್ನು ಕೈಗೊಳ್ಳುವ ಅಗತ್ಯ ಇದೆ ಎಂದರು.

ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು ನಾಶಪಡಿಸುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ ಎಂದ ಅವರು, ಕಾಡಂ ಚಿನ ಪ್ರದೇಶದಲ್ಲಿ ರೈಲ್ವೆ ಹಳಿ ಬಳಸಿ ಕೊಂಡು ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣ ಅಭಿವೃದ್ಧಿಗೆ 60 ಕೋಟಿ ವೆಚ್ಚದಡಿ ಯೋಜನೆ ಸಿದ್ಧಪಡಿಸಲಾಗಿದೆ. ಇದನ್ನು ರಾಜ್ಯ ಸರ್ಕಾರ ದಿಂದ ಕೇಂದ್ರಕ್ಕೆ ಸಲ್ಲಿಸಿದರೆ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗು ವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತ ನಾಡಿ, ಜಿಲ್ಲೆಯ 12 ಕಡೆ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿ ಇದೆ ಎಂದು ಮಾಹಿತಿ ನೀಡಿ ದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಶಾಸಕ ಎನ್.ಮಹೇಶ್, ಜಿಪಂ ಅಧ್ಯಕ್ಷೆ ಶಿವಮ್ಮ, ಪ್ರವಾಸೋದ್ಯಮ ಇಲಾಖೆಯ ಬಿ.ರಾಮು, ಜಿಪಂ ಸಿಇಒ ಡಾ.ಕೆ.ಹರೀಶ್‍ಕುಮಾರ್, ಎಸ್‍ಪಿ ಧರ್ಮೇಂದ್ರ ಕುಮಾರ್ ಮೀನಾ, ಪ್ರವಾಸೋ ದ್ಯಮ ಇಲಾಖೆಯ ನಿರ್ದೇಶಕ ಜನಾ ರ್ಧನ್ ಇತರರು ಹಾಜರಿದ್ದರು.

50 ಕೋಟಿ ವೆಚ್ಚದಡಿ ಕೇಬಲ್ ಕಾರು

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಾಶಯದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕೇಬಲ್ ಕಾರು ಅಳವಡಿಸಲು ಯೋಜನೆ ಸಿದ್ಧಪಡಿ ಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ತಿಳಿಸಿದರು.

ಇಂದಿಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಪ್ರಮಾಣದಲ್ಲಿ ನೀರು ಧುಮ್ಮಿಕ್ಕುವಾಗ ಮಾತ್ರ ಪ್ರವಾಸಿಗರು ಭರಚುಕ್ಕಿಗೆ ಭೇಟಿ ನೀಡುತ್ತಿದ್ದಾರೆ. ವರ್ಷದ ಎಲ್ಲಾ ದಿನವು ಭರಚುಕ್ಕಿಗೆ ಪ್ರವಾಸಿಗರನ್ನು ಆಕರ್ಷಿಸಲು ಕ್ರಮಕೈಗೊಳ್ಳಲಾಗಿದೆ. 50 ಕೋಟಿ ರೂ. ವೆಚ್ಚದಲ್ಲಿ ಕೇಬಲ್ ಕಾರು ಅಳವಡಿಸಲು ಪ್ರಾಜೆಕ್ಟ್ ರಿಪೋರ್ಟ್ ತಯಾರಾಗಿದೆ ಎಂದರು. ವೆಸ್ಲಿ ಸೇತುವೆ ನವೀಕರಣಕ್ಕೂ ಹಣ ನೀಡಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಬಂಡೀಪುರ ಸಫಾರಿ ಸ್ಥಳ ಸ್ಥಳಾಂತರಕ್ಕೆ ಚಿಂತನೆ
ಚಾಮರಾಜನಗರ, ನ.20- ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಫಾರಿಗೆ ಹೊರಡುವ ಸ್ಥಳವನ್ನು ಮೇಲು ಕಾಮನಹಳ್ಳಿ ಬಳಿಗೆ ಸ್ಥಳಾಂತರಿಸುವ ಬಗ್ಗೆ ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಚಿವ ಸಾರಾ ಮಹೇಶ್ ಸೂಚಿಸಿದರು.

ಇಂದಿಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಬಂಡೀಪುರದಲ್ಲಿ ವಾಹನಗಳ ನಿಲುಗಡೆಗೆ ಜಾಗದ ಕೊರತೆ ಎದುರಾಗಿದೆ. ಸಫಾರಿಗೆ ಹೊರಡುವ ಸ್ಥಳವನ್ನು ಬೇರೆಡೆಗೆ ವರ್ಗಾಯಿಸುವುದು ಸೂಕ್ತ ಎಂದಾದರೆ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಸಿದರು.

ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವನ್ ಮಾತನಾಡಿ, ಸಫಾರಿ ಸ್ಥಳವನ್ನು ಸ್ಥಳಾಂತರಿಸುವ ಬಗ್ಗೆ 8 ಕೋಟಿ ರೂ. ವೆಚ್ಚದ ಯೋಜನೆಯನ್ನು ಸಿದ್ಧ ಪಡಿಸಲಾಗುತ್ತಿದೆ. ಇನ್ನು 15 ದಿನದೊಳಗೆ ವರದಿ ಸಿದ್ಧಗೊ ಳ್ಳಲಿದೆ. ಇದಕ್ಕಾಗಿ ತಕ್ಷಣವೇ 2 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸಚಿವ ಸಾರಾ ಮಹೇಶ್ ಒಪ್ಪಿಗೆ ಸೂಚಿಸಿದರು.

Translate »