ಬಸ್ ಪ್ರಯಾಣಿಕರಿಗೆ ಸಂಕ್ರಾಂತಿ  ಕೊಡುಗೆ: ಶೇ.10 ರಿಯಾಯಿತಿ
ಮೈಸೂರು

ಬಸ್ ಪ್ರಯಾಣಿಕರಿಗೆ ಸಂಕ್ರಾಂತಿ ಕೊಡುಗೆ: ಶೇ.10 ರಿಯಾಯಿತಿ

January 12, 2019

ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆಂದು ಕೆಎಸ್‌ಆರ್‌ಟಿಸಿ ತನ್ನ ಪ್ರಯಾಣಿಕರಿಗೆ ವಿಶೇಷ ಕೊಡುಗೆ ನೀಡಿದ್ದು, ಟಿಕೆಟ್ ದರದಲ್ಲಿ ಶೇ.10 ರಿಯಾಯಿತಿ ನೀಡುವುದಾಗಿ ಘೋಷಿಸಿದೆ.

ಹಬ್ಬದ ಸಂದರ್ಭದಲ್ಲಿ ಬೇರೆ ಊರುಗಳಿಗೆ ಹೋಗಿ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಸುಖಕರ ಪ್ರಯಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜನವರಿ 11 ಹಾಗೂ 12 ರಿಂದಲೇ ವಿವಿಧ ಮಾರ್ಗಗಳಿಗೆ 500 ಹೆಚ್ಚುವರಿ ಬಸ್‍ಗಳನ್ನು ಸಂಚಾರಕ್ಕೆ ಬಿಡಲಿದೆ. ನಾಲ್ಕಕ್ಕಿಂತ ಹೆಚ್ಚು ಮಂದಿ ಟಿಕೆಟ್ ಬುಕಿಂಗ್ ಮಾಡಿದರೆ ಶೇ.5 ಮತ್ತು ಹೋಗಿ-ಬರುವ ಎರಡೂ ಟಿಕೆಟ್‍ಗಳನ್ನು ಒಟ್ಟಿಗೇ ಬುಕ್ ಮಾಡಿದರೆ ಶೇ.10ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಾ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ ಕಡೆಗೆ ಈ ವಿಶೇಷ ಬಸ್‍ಗಳು ಸಂಚಾರ ಮಾಡಲಿವೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾ ಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಸಂಚರಿಸಲಿವೆ.

ತಮಿಳುನಾಡು, ಆಂಧ್ರಪ್ರದೇಶ ಅಥವಾ ತೆಲಂಗಾಣ ಕಡೆಗೆ ಅಂದರೆ ಮಧುರೈ, ಕುಂಭಕೋಣಂ, ತಿರುಚ್ಚಿ, ಚೆನ್ನೈ, ಕೊಯಮತ್ತೂರು, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಹೋಗುವ ಸಂಸ್ಥೆಯ ಬಸ್‍ಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಕೇಂದ್ರ ಘಟಕ-4 ಮತ್ತು ಘಟಕ-2 ರ ಮುಂಭಾಗದಿಂದ ವಿಶೇಷ ಕಾರ್ಯಾಚರಣೆ ಮೂಲಕ ಬಿಡಲಾಗುವುದು.

ಬೆಂಗಳೂರು ನಗರದ ಶ್ರೀ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್, ಮಲ್ಲೇಶ್ವರಂ 18ನೇ ಅಡ್ಡ ರಸ್ತೆ, ಬನಶಂಕರಿ, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ ಮುಂತಾದ ಸ್ಥಳಗಳಿಂದ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮುಂತಾದ ಮಾರ್ಗಗಳಿಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Translate »