ಹೆಬ್ಬಾಳದ ಜ್ಞಾನೇಶ್ವರಿ ವಿದ್ಯಾಲಯಕ್ಕೆ 10 ಲಕ್ಷ ರೂ. ಅನುದಾನ: ಚಾಮರಾಜ ಶಾಸಕ ಎಲ್.ನಾಗೇಂದ್ರ ಭರವಸೆ
ಮೈಸೂರು

ಹೆಬ್ಬಾಳದ ಜ್ಞಾನೇಶ್ವರಿ ವಿದ್ಯಾಲಯಕ್ಕೆ 10 ಲಕ್ಷ ರೂ. ಅನುದಾನ: ಚಾಮರಾಜ ಶಾಸಕ ಎಲ್.ನಾಗೇಂದ್ರ ಭರವಸೆ

September 10, 2018

ಭಾವಸಾರ ಕ್ಷತ್ರಿಯ ನವ ಪದವೀಧರರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಮೈಸೂರು: ಹೆಬ್ಬಾಳದ ಜ್ಞಾನೇಶ್ವರಿ ವಿದ್ಯಾಸಂಸ್ಥೆಯ ಅಭಿವೃದ್ಧಿಗಾಗಿ ತಮ್ಮ ಶಾಸಕರ ನಿಧಿಯಿಂದ 10 ಲಕ್ಷಕ್ಕೂ ಹೆಚ್ಚಿನ ಅನುದಾನ ನೀಡುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು.

ಮೈಸೂರು ಜಿಲ್ಲಾ ಭಾವಸಾರ ಕ್ಷತ್ರಿಯ ಪದವೀಧರ ಸಂಘ ಮತ್ತು ವಿಠಲ ರುಕ್ಮಿಣಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ವಿಜಯನಗರ 3ನೆ ಹಂತದ ವಿಠಲ ರುಕ್ಮಿಣಿ ಕನ್ವೆನ್ಷನ್ ಹಾಲ್‍ನಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಲೆಯ ಎದುರಿನಲ್ಲಿರುವ ಮೈದಾನವನ್ನು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗಾಗಿ ಮಂಜೂರು ಮಾಡುವಂತೆ ಕೋರಿರುವ ಶಾಲೆಯ ಬೇಡಿಕೆಯನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು.

ಒಂದು ಕಾಲದಲ್ಲಿ ಕೇವಲ ಟೈಲರಿಂಗ್ ವೃತ್ತಿ, ಬಟ್ಟೆ ವ್ಯಾಪಾರವನ್ನೇ ಅವಲಂಭಿಸಿದ್ದ ಹಿಂದುಳಿದ ಭಾವಸಾರ ಕ್ಷತ್ರಿಯ ಸಮಾಜದವರು ಇಂದು ಉತ್ತಮ ಹುದ್ದೆಗಳಲ್ಲಿ ಅಧಿಕಾರ ಹೊಂದಿದ್ದು, ಇದು ಈ ಸಮಾಜದ ಅಭಿವೃದ್ದಿಯ ಸಂಕೇತವಾಗಿದೆ ಎಂದರು.

ನವ ಪದವೀದರರಿಗೆ ಸನ್ಮಾನಿಸುವ ಇಂತಹ ಕಾರ್ಯಕ್ರಮ ನಿಜಕ್ಕೂ ಉತ್ತಮವಾದದ್ದು. ಸನ್ಮಾನ ಪಡೆದ ನವ ಪದವೀಧರರಿಗೆ ಸಮಾಜವನ್ನು ಉತ್ತಮ ರೀತಿಯನ್ನು ಮುನ್ನಡೆಸುವ ಹೆಚ್ಚಿನ ಜವಾಬ್ಧಾರಿ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಿತಿ ವತಿಯಿಂದ ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ನವ ಪದವೀಧರ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಿಪ್ಲೊಮಾ, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ವಿತರಿಸಲಾಯಿತು.

ಅಲ್ಲದೆ, ಸಮಾಜ ಉನ್ನತಿಗೆ ಶ್ರಮಿಸಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದಿಂದ ಸಮಾಜ ಭೂಷಣ ಪ್ರಶಸ್ತಿ ಪುರಸ್ಕøತ ನಾಲ್ಕು ಮಂದಿಗೆ, ಜೀವನ್ ಗೌರವ್ ಪ್ರಶಸ್ತಿ ಪುರಸ್ಕøತರಾದ 9 ಮಂದಿಯನ್ನು ಸಹ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮೈಸೂರು ಜಿಲ್ಲಾ ಭಾವಸಾರ ಕ್ಷತ್ರಿಯ ಪದವೀಧರ ಸಂಘದ ಅಧ್ಯಕ್ಷ ಕೆ.ಪಿ.ಕುಮಾರ್ ಕುತ್ನೀಕರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಶಂಕರ್‍ರಾವ್ ಅಂಚಳ್‍ಕರ್, ಮುಖಂಡರಾದ ಜಯರಾಮ್‍ರಾವ್ ಲಾಳಿಗೆ, ನಾರಾಯಣರಾವ್ ತೇಲ್ಕರ್, ವಿಠಲರಾವ್ ಲಾಳಿಗೆ, ಮಂಜುನಾಥ್ ಪತಂಗೆ, ವಿ.ನಾಗರಾಜು ಬಗರೆ, ಬೆಂಗಳೂರಿನ ಡೆಪ್ಯೂಟಿ ರಿಜಿಸ್ಟ್ರಾರ್ ಹಿಂಗುಲಾಂಬಿಕಾ, ಶ್ರೀನಿವಾಸರಾವ್ ಪಿಸ್ಸೆ, ರಾಜೇಂದ್ರಪ್ರಸಾದ್ (ಪಾಪಣ್ಣಿ), ಡಿ.ಕೃಷ್ಣ ಬಗರೆ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »