ಬೆಂಗಳೂರು, ಮಾ. 6(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಮಂಗಡ ಪತ್ರದಲ್ಲಿ ಹಳೆಯ ಮೈಸೂರು ಪ್ರಾಂತ್ಯ ಹಾಗೂ ಕಲ್ಯಾಣ ಕರ್ನಾಟಕವನ್ನು ಕಡೆಗಾಣಿಸಿದ್ದಾರೆ ಎಂಬ ದೂರಿನ ಬೆನ್ನಲ್ಲೇ ಮುಂಬೈ ಕರ್ನಾಟಕಕ್ಕೆ ಇಂದು ಮತ್ತೊಂದು ಬಂಪರ್ ಕೊಡುಗೆ ನೀಡಿದ್ದಾರೆ.
ಸಂವಿಧಾನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಂದರ್ಭದಲ್ಲೇ ಮಧ್ಯೆ ಪ್ರವೇಶಿಸಿ, ಹೇಳಿಕೆ ನೀಡಿದ ಮುಖ್ಯಮಂತ್ರಿಯವರು, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಾಗಿ, ಪ್ರಸಕ್ತ ಮುಂಗಡ ಪತ್ರದಲ್ಲಿ ಹತ್ತು ಸಾವಿರ ಕೋಟಿ ರೂ. ಒದಗಿಸುವುದಾಗಿ ಘೋಷಿಸಿದರು. ಅಷ್ಟೇ ಅಲ್ಲ ಮೂರನೇ ಹಂತದ ಕಾಮಗಾರಿ ಹಾಗೂ ಪುನರ್ ವಸತಿಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ಸಭೆಗೆ ನೀಡಿದರು. ಯೋಜನೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ಮುಳುಗಡೆಯಾಗುತ್ತಿರುವ 20 ಗ್ರಾಮಗಳ ಪುನರ್ ನಿರ್ಮಾಣ, ಪುನರ್ ವಸತಿ ಕಲ್ಪಿಸುವುದಲ್ಲದೆ, ನಮ್ಮ ಪಾಲಿನ ನೀರನ್ನು ನಿಗದಿತ ವೇಳೆಯಲ್ಲಿ ಬಳಕೆ ಮಾಡಿಕೊಳ್ಳಲು ಯುದ್ಧೋಪಾದಿಯಲ್ಲಿ ಕಾಮಗಾರಿ ನಡೆಸಲಾಗುವುದು. ಅಷ್ಟೇ ಅಲ್ಲದೆ, ಯುಕೆಪಿ ಯೋಜನೆಯಡಿ ಪ್ರಸಕ್ತ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಆರ್ಥಿಕ ನೆರವು ನೀಡುವ ಭರವಸೆಯಿತ್ತಿದ್ದಾರೆ. ದೆಹಲಿಗೆ ತೆರಳಿ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು, ನಿನ್ನೆ ಬಜೆಟ್ ಮಂಡನೆ ಮಾಡಿದ್ದಾರೆ. ಅದರಲ್ಲಿ ಕೃಷ್ಣ ಮೇಲ್ದಂಡೆ 3ನೇ ಹಂತದ ಕಾಮಗಾರಿಗಳ ಬಗ್ಗೆ ಪ್ರಸ್ತಾಪ ಇಲ್ಲ. ಈಗ ಎಲ್ಲರಿಂದ ಒತ್ತಡ ಬಂದಿದೆ ಎಂಬ ಕಾರಣ ಕ್ಕಾಗಿ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಹಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಣ ಕೊಡುವುದಾದರೆ ನನಗೆ ಸ್ವಾಗತವಿದೆ. ಸಂತೋಷದಿಂದ ಒಪ್ಪಿಕೊಳ್ಳುತ್ತೇವೆ. ಆದರೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ದುಡ್ಡೇ ಇಲ್ಲ. ಕೇವಲ ಮೂಗಿಗೆ ತುಪ್ಪ ಹಚ್ಚಿ ಆ ಭಾಗದ ಜನರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.