ಮೈಸೂರು,ಮಾ.6(ಎಂಟಿವೈ)- ಮೈಸೂ ರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ `ಫಿಲಂ ಸಿಟಿ’ಯನ್ನು ಬೆಂಗಳೂರಿಗೆ ಸ್ಥಳಾಂತರಿಸಿ ರುವ ರಾಜ್ಯ ಸರ್ಕಾರದ ಕ್ರಮವನ್ನು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ತೀವ್ರ ವಾಗಿ ಖಂಡಿಸಿದ್ದು, ಮುಂದಿನ ಎರಡು ದಿನದಲ್ಲಿ ಉಗ್ರ ಹೋರಾಟ ನಡೆಸಲು ರೂಪುರೇಷೆ ಸಿದ್ಧಪಡಿಸಲಿದೆ.
ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಕಚೇರಿ ಆವರಣದಲ್ಲಿ ಅಧ್ಯಕ್ಷ ಸಿ.ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಶುಕ್ರವಾರ ತುರ್ತುಸಭೆ ನಡೆಸಿ, ಫಿಲಂ ಸಿಟಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸರ್ಕಾರದ ಕ್ರಮ ವನ್ನು ಖಂಡಿಸಿದರು. ಅಲ್ಲದೇ, ಕನ್ನಡಪರ ಮತ್ತು ವಿವಿಧ ಸಂಘಟನೆಗಳು, ಪ್ರವಾಸೋ ದ್ಯಮವನ್ನೇ ಅವಲಂಬಿಸಿರುವ ಉದ್ಯಮ ಗಳು, ವ್ಯಾಪಾರಿಗಳು, ಕೈಗಾರಿಕೋದ್ಯಮಿ ಗಳು ಮತ್ತು ಜನಪ್ರತಿನಿಧಿಗಳ ಸಹಕಾರ ಪಡೆದು ಹೋರಾಟ ನಡೆಸುವುದಕ್ಕೆ ಒಕ್ಕೊ ರಲಿನಿಂದ ನಿರ್ಧರಿಸಲಾಯಿತು. ಹೋರಾ ಟದ ರೂಪುರೇಷೆಯನ್ನು 2 ದಿನದಲ್ಲಿ ಸಿದ್ದಪಡಿಸಲು ಒಪ್ಪಿಗೆ ಸೂಚಿಸಲಾಯಿತು.
ಅಧ್ಯಕ್ಷ ಸಿ.ನಾರಾಯಣಗೌಡ ಮಾತ ನಾಡಿ, ನಗರ ಮತ್ತು ಪ್ರವಾಸೋದ್ಯಮ ಅಭಿ ವೃದ್ಧಿಗೆ ಫಿಲಂಸಿಟಿ ಸಹಕಾರಿ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಮೈಸೂರಿಗೆ ಫಿಲಂ ಸಿಟಿ ಮಂಜೂರು ಮಾಡಿ, ಬಜೆಟ್‍ನಲ್ಲಿ ಹಣವನ್ನೂ ಮೀಸಲಿಟ್ಟಿದ್ದರು. ನಂಜನ ಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ 100 ಎಕರೆ ಭೂಮಿಯನ್ನೂ ಮಂಜೂರು ಮಾಡಲಾಗಿತ್ತು. ಇಲ್ಲಿ ಫಿಲಂಸಿಟಿ ನಿರ್ಮಾಣ ವಾಗಿದ್ದರೆ ಮೈಸೂರು ಜಿಲ್ಲೆಯ ಸಮಗ್ರ ಅಭಿ ವೃದ್ಧಿಗೆ ಸಹಕಾರಿಯಾಗುತ್ತಿತ್ತು. ಆದರೆ ಈಗ ಬೆಂಗಳೂರಿಗೆ ಸ್ಥಳಾಂತರಿಸುತ್ತಿರು ವುದು ಮೈಸೂರಿಗೆ ಭಾರೀ ನಷ್ಟವಾಗಿದೆ. ಯೋಜನೆಯನ್ನು ಮೈಸೂರಲ್ಲೇ ಜಾರಿಗೊ ಳಿಸಬೇಕು ಎಂದು ಒತ್ತಾಯಿಸಿದರು.
ಹೋಟೆಲ್ ಮಾಲೀಕರ ಸಂಘವು ಇದು ವರೆಗೂ ತಮಗಾಗಿ ಹೋರಾಟ ಮಾಡದೆ ಇತರರಿಗಾಗಿ ಹೋರಾಡುತ್ತಿತ್ತು. ಈಗ ಹೋಟೆಲ್ ಉದ್ಯಮದ ಉಳಿವಿಗೆ ಹೋರಾಡಲೇಬೇಕಾ ಗಿದೆ. ಸದಸ್ಯರ ಒಪ್ಪಿಗೆ ಪಡೆದು ಹೋರಾಟ ದಲ್ಲಿ ಪಾಲ್ಗೊಳ್ಳುವಂತೆ ವಿವಿಧ ಸಂಘಟನೆ ಗಳ ಮುಖಂಡರನ್ನು ಆಹ್ವಾನಿಸುವೆ ಎಂದರು.
ಹೋಟೆಲ್ ಮಾಲೀಕರ ಧರ್ಮದತ್ತಿ ಸಂಸ್ಥೆಯ ಅಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ಮೈಸೂರಿನಲ್ಲಿ ರಾಕ್ ಗಾರ್ಡನ್, ಚಾಮುಂಡಿ ಬೆಟ್ಟಕ್ಕೆ ರೋಪ್ ವೇ, ಕೆಆರ್‍ಎಸ್‍ನಲ್ಲಿ ಡಿಸ್ನಿ ಲ್ಯಾಂಡ್ ಯೋಜನೆಗಳನ್ನು ವಿವಿಧ ಕಾರಣ ಗಳಿಂದ ಕೈಬಿಡಲಾಗಿದೆ. ಇವನ್ನು ಜಾರಿಗೆ ತಂದಿದ್ದರೆ ಮೈಸೂರಿನ ಪ್ರವಾಸೋದÀ್ಯಮ ವೇಗವಾಗಿ ಅಭಿವೃದ್ಧಿಯಾಗುತ್ತಿತ್ತು ಎಂದರು.
ಹಿಂದೆ ಹೈದರಾಬಾದ್‍ಗೆ ಪ್ರವಾಸಿಗರು ಹೋಗುತ್ತಿರಲಿಲ್ಲ. ರಾಮೋಜಿರಾವ್ ಫಿಲಂ ಸಿಟಿ ಸ್ಥಾಪನೆ ಬಳಿಕ ಹೈದರಾಬಾದ್ ಚಿತ್ರ ಣವೇ ಬದಲಾಯಿತು. ಪ್ರವಾಸಿಗಳು 1 ದಿನ ಪೂರ್ಣ ರಾಮೋಜಿರಾವ್ ಫಿಲಂಸಿಟಿಯಲ್ಲಿ ಕಾಲ ಕಳೆಯುವಂಥ ವಾತಾವರಣವಿದೆ. ಅದೇ ಮಾದರಿಯಲ್ಲಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸಿದ್ದರೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿತ್ತು. ಮೈಸೂರಲ್ಲಿ ಫಿಲಂಸಿಟಿ ಉಳಿಸಿ ಕೊಳ್ಳಲು ರಾಜಕಾರಣಿಗಳು ಪಕ್ಷಾತೀತವಾಗಿ ಶ್ರಮಿಸಬೇಕು. ಸರ್ಕಾರದ ವಿರುದ್ಧ ಮಾತ ನಾಡಿದರೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂಬ ಮನೋಭಾವವನ್ನು ಬಿಜೆಪಿ ಶಾಸ ಕರು, ಸಂಸದರು ಕೈಬಿಟ್ಟು, ಮೈಸೂರಿನಲ್ಲೇ ಫಿಲಂಸಿಟಿ ಸ್ಥಾಪನೆಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಮೈಸೂರಿನ ಶೇ.65ರಷ್ಟು ಜನತೆ ಪ್ರತ್ಯಕ್ಷ -ಪರೋಕ್ಷವಾಗಿ ಪ್ರವಾಸೋದ್ಯಮವನ್ನೇ ಅವಲಂಬಿಸಿದ್ದಾರೆ. ಫಿಲಂಸಿಟಿ ಸ್ಥಾಪನೆಗೆ ಕಠಿಣ ಹೋರಾಟ ನಡೆಯದಿದ್ದರೆ ಮುಂದೆ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆಯಾಗ ಲಿದೆ. ಅರಮನೆ, ಮೃಗಾಲಯ, ಕೆಆರ್‍ಎಸ್ ನೋಡುವುದಕ್ಕೆ ಬರಲೂ ಪ್ರವಾಸಿಗರು ಹಿಂದೇಟು ಹಾಕುತ್ತಾರೆ. ಹೋಟೆಲ್ ಉದ್ಯಮಿ ಗಳು ನಷ್ಟಕ್ಕೀಡಾಗಿ ಹೋಟೆಲ್ ಮುಚ್ಚಿ ಕಡ್ಲೆ ಕಾಯಿ ಮಾರುವ ಸ್ಥಿತಿಗೆ ಬರಬಹುದು. ಹಾಗಾಗಿ ಹೋಟೆಲ್ ಮಾಲೀಕರು, ಟ್ರಾವೆಲ್ಸ್ ಅಸೋ ಸಿಯೇಷನ್, ಕೈಗಾರಿಕೆಗಳ ಸಂಘದ ಪದಾ ಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಹೋರಾಟ ನಡೆಸಲೇಬೇಕಿದೆ ಎಂದರು.
ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿಸಲಾಗಿತ್ತು. ಆದರೆ ಇದೀಗ ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನೇ ಕೇಂದ್ರ ಸರ್ಕಾರ ನೀಡು ತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಫಿಲಂಸಿಟಿಯನ್ನು ಮತ್ತೆ ಮೈಸೂರಿಗೆ ತರದಿದ್ದರೆ, ಇನ್ಯಾವುದೇ ಯೋಜನೆ ಮಂಜೂ ರಾದರೂ ಮೈಸೂರು ಅಭಿವೃದ್ಧಿಯಾಗು ವುದಿಲ್ಲ. ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ನೇತೃತ್ವದಲ್ಲಿ ಟೂರಿಸಂ ಟಾಸ್ಕ್‍ಫೋರ್ಸ್ ರಚಿಸಿ, 500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದರಿಂದ ಲಾದರೂ ಮೈಸೂರಿಗೆ ಯಾವುದಾದರೂ ಯೋಜನೆ ಜಾರಿಯಾಗಬಹುದೆಂಬ ನಿರೀಕ್ಷೆ ಯಿದೆ ಎಂದರು. ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳಾದ ಎನ್.ಎಸ್. ಗೋಪಾಲಕೃಷ್ಣ, ಭಾಸ್ಕರ್ ಶೆಟ್ಟಿ, ಪಿ.ಎನ್. ಕುಂದರ್ ಮುರಳಿ, ರಾಜೀವ್, ಹರ್ಷ, ಕೃಷ್ಣ ತಂತ್ರಿ, ಸುಬ್ರಹ್ಮಣ್ಯ ತಂತ್ರಿ, ಸುರೇಶ್ ಉಗ್ರಯ್ಯ, ಮಹೇಶ್ ಕಾಮತ್, ಆನಂದ್ ಶೆಟ್ಟಿ ಮತ್ತಿತರರು ಸಭೆಯಲ್ಲಿದ್ದರು.