11 ಹಸು, ತೆಂಗಿನ ಕಾಯಿ ರಾಶಿ ಕಳವು ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು, ಎಸ್ಪಿಗೆ ದೂರು
ಮಂಡ್ಯ

11 ಹಸು, ತೆಂಗಿನ ಕಾಯಿ ರಾಶಿ ಕಳವು ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು, ಎಸ್ಪಿಗೆ ದೂರು

June 17, 2018

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬಿ.ಬಿ.ಕಾವಲು ಬಳಿಯ ತೋಟದ ಮನೆಗೆ ಗುಂಪೊಂದು ದಾಳಿ ನಡೆಸಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 5ಲಕ್ಷ ರೂ. ಮೌಲ್ಯದ 11 ಹಸುಗಳು ಹಾಗೂ 50ಸಾವಿರ ರೂ. ಮೌಲ್ಯದ ತೆಂಗಿನ ಕಾಯಿ ರಾಶಿಯನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಬಿ.ಬಿ.ಕಾವಲಿನ ವೆಂಕಟೇಗೌಡ ಮತ್ತು ಸುಬ್ಬೇಗೌಡರಿಗೆ ಸೇರಿದ ತೋಟದ ಮನೆಯಲ್ಲಿ ಅವರ ಸೋದರ ಸಂಬಂಧಿ ಪ್ರವೀಣ್ ಮತ್ತು ಧರ್ಮಪ್ಪ ಮಲಗಿರುವಾಗ ಜೂ.14ರಂದು ರಾತ್ರಿ ಸುಮಾರು 11ಗಂಟೆ ವೇಳೆ ಪಟ್ಟಣದ ದೀಪಕ್ ಎಂಬಾತ ಏಳೆಂಟು ಮಂದಿಯೊಂದಿಗೆ ತೋಟದ ಮನೆಗೆ ಆಗಮಿಸಿ ದನದ ಕೊಟ್ಟಿಗೆ ಬಾಗಿಲನ್ನು ಧ್ವಂಸಗೊಳಿಸಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 5ಲಕ್ಷ ರೂ. ಮೌಲ್ಯದ 11 ಹಸುಗಳು ಹಾಗೂ ತೆಂಗಿನಕಾಯಿ ರಾಶಿಯನ್ನು ಕಳ್ಳತನ ಮಾಡಿದ್ದಾರೆ. ಇದಲ್ಲದೆ ಮನೆಯಲ್ಲಿದ್ದ ವಿವಿಧ ಕೃಷಿ ಉಪಕರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಕಳ್ಳತನಕ್ಕೆ ಆಗಮಿಸಿದ್ದ ಗುಂಪು ಮಾರಕಾಸ್ತ್ರ ಹಿಡಿದಿದ್ದರಿಂದ ತೋಟದ ಮನೆ ಪಕ್ಕದ ಮತ್ತೊಂದು ಹೆಂಚಿನ ಮನೆಯಲ್ಲಿ ಮಲಗಿದ್ದ ಪ್ರವೀಣ್ ಮತ್ತು ಧರ್ಮಪ್ಪ ಅವರು ಹೆದರಿ ಹಿಂಬಾಗಿಲ ಮೂಲಕ ಓಡಿ ಹೋಗಿ ಬೆಳಿಗ್ಗೆವರೆಗೂ ಸಮೀಪದ ಅರಣ್ಯ ಪ್ರದೇಶದಲ್ಲಿ ಅವಿತು ಕುಳಿತಿದ್ದರು. ನಂತರ ಈ ಸಂಬಂಧ ಪ್ರವೀಣ್ ಶುಕ್ರವಾರ ಬೆಳಿಗ್ಗೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದುವರೆಗೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಪ್ರವೀಣ್ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ದರೋಡೆ ನಡೆಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.

Translate »