ದಲಿತ ಮುಖಂಡ ಶಿವಣ್ಣಗೆ ಭಾವಪೂರ್ಣ ಶ್ರದ್ಧಾಂಜಲಿ
ಮಂಡ್ಯ

ದಲಿತ ಮುಖಂಡ ಶಿವಣ್ಣಗೆ ಭಾವಪೂರ್ಣ ಶ್ರದ್ಧಾಂಜಲಿ

June 17, 2018

ಪಾಂಡವಪುರ: ನಮ್ಮ ಕುಟುಂಬದೊಂದಿಗೆ ದಲಿತ ಮುಖಂಡ ದಿವಂಗತ ಶಿವಣ್ಣ ಅವರು ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದರು ಎಂದು ಜಿಪಂ ಸದಸ್ಯ ಸಿ.ಅಶೋಕ್ ತಿಳಿಸಿದರು.

ಪಟ್ಟಣದ ಕಸಾಪ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಮುಖಂಡ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಸಣಬ ಶಿವಣ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಶಿವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಶಿವಣ್ಣ ಅವರ ಅಕಾಲಿಕ ನಿಧನ ನಮ್ಮ ಇಡೀ ಕುಟುಂಬಕ್ಕೆ ಅತೀವ ನೋವುಂಟು ಮಾಡಿದೆ. ಶಿವಣ್ಣ ಅವರ ಕುಟುಂಬಕ್ಕೆ ನಮ್ಮ ಕುಟುಂಬ ಸದಾ ಬೆಂಬಲವಾಗಿ ನಿಲ್ಲಲಿದೆ. ಶಿವಣ್ಣ ಅವರ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಮ್ಮ ಚಿಕ್ಕಪ್ಪನವರಾದ ಸಚಿವ ಸಿ.ಎಸ್.ಪುಟ್ಟರಾಜು ಅವರು ಈಗಾಗಲೇ ವಹಿಸಿಕೊಂಡಿದ್ದಾರೆ.

ಶಿವಣ್ಣನವರ ಕುಟುಂಬದೊಂದಿಗೆ ದಲಿತ ಸಂಘರ್ಷ ಸಮಿತಿ ಮುಖಂಡರು ಮುಂದಿನ ದಿನಗಳಲ್ಲಿ ಬೆಂಬಲವಾಗಿ ನಿಲ್ಲಬೇಕು ಎಂದರು.ದಸಂಸ ರಾಜ್ಯ ಸಂಚಾಲಕ ಎಂ.ಬಿ.ಶ್ರೀನಿವಾಸ್ ಮಾತನಾಡಿ, ಸ್ವಾಭಿಮಾನಿ ಜೀವನ ನಡೆಸುತ್ತಿದ್ದ ಶಿವಣ್ಣನವರು ತಾಲೂಕಿನ ಹಳ್ಳಿ ಹಳ್ಳಿಗಳನ್ನು ಸುತ್ತಾಡಿ ಸಮುದಾಯ ಸಂಘಟಿಸಿದ್ದರು. 1991ರಲ್ಲಿ ದಲಿತ ಚಳವಳಿಗೆ ಪಾದರ್ಪಣೆ ಮಾಡಿದ ಅವರು ತಮ್ಮ ಗ್ರಾಮದಲ್ಲೇ ಚಳವಳಿಯ ಗ್ರಾಮ ಘಟಕ ಪ್ರಾರಂಭಿಸಿ ಗ್ರಾಮದ ಜನರಿಗೆ ಅಂಬೇಡ್ಕರ್ ಚಿಂತನೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು. ದಲಿತರನ್ನು ಶೋಷಣೆಯಿಂದ ಹೊರತರಲು ಸಾಕಷ್ಟು ಹೋರಾಟ ನಡೆಸಿದರು. ಅವರ ಸಾವು ನಮಗೆ ತೀವ್ರ ನೋವುಂಟಾಗಿದೆ. ಮುಂದೆ ಅವರ ಕುಟುಂಬದ ಜೊತೆಗೆ ನಾವೆಲ್ಲರೂ ಇದ್ದು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಪೂರ್ಣಿಮಾ , ಜೆಡಿಎಸ್ ತಾಲೂಕು ಅಧ್ಯಕ್ಷ ಧರ್ಮರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ರಾಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್, ಜೆಡಿಎಸ್ ಎಸ್‍ಸಿ/ಎಸ್‍ಟಿ ಘಟಕದ ತಾಲೂಕು ಅಧ್ಯಕ್ಷ ಬೊಮ್ಮರಾಜು, ಬಿಎಸ್‍ಪಿ ಮುಖಂಡ ಬೊಮ್ಮರಾಜು, ಹನುಮಂತಯ್ಯ, ಕಸಾಪ ಅಧ್ಯಕ್ಷ ಎಂ.ರಮೇಶ್, ಯೋಗೇಶ್, ಎಂ.ಎ.ಮಂಜು, ಪ್ರಶಾಂತ್ ಸೇರಿದಂತೆ ಹಲವರಿದ್ದರು.

Translate »