ನವದೆಹಲಿ, ಅ.4-ನೆರೆ ಪರಿಹಾರ ಬಿಡುಗಡೆ ಮಾಡದ್ದಕ್ಕೆ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‍ಡಿಆರ್‍ಎಫ್) ಕರ್ನಾಟಕಕ್ಕೆ 1,200 ಕೋಟಿ ರೂ. ಮತ್ತು ಬಿಹಾರಕ್ಕೆ 400 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.
ಗುರುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆದಿತ್ತು. ಕ್ಯಾಬಿನೆಟ್ ಸಭೆಗೂ ಮುನ್ನ ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ಸದಾನಂದಗೌಡ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.
ನೆರೆ ಪರಿಹಾರ ವಿಳಂಬಕ್ಕಾಗಿ ಜನರು ಪ್ರಶ್ನೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳು ಈ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿವೆ. ಆದಷ್ಟು ಬೇಗ ಪರಿಹಾರ ನೀಡುವಂತೆ ಸಚಿವರು ಮನವಿ ಮಾಡಿದ್ದರು. ಕರ್ನಾಟಕದ ಬಿಜೆಪಿ ನಾಯಕರನ್ನು ಜನ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತ್ತು. ಗುರುವಾರ ಕಂದಾಯ ಇಲಾಖೆ ಕಾರ್ಯ ದರ್ಶಿ ಟಿ.ಕೆ. ಅನಿಲ್‍ಕುಮಾರ್ ನೇತೃತ್ವದ ನಿಯೋಗ ದೆಹಲಿಗೆ ಆಗಮಿಸಿ ಗೃಹ ಇಲಾಖೆಗೆ ಹಾನಿಯ ಬಗ್ಗೆ ಸ್ಪಷ್ಟೀಕರಣವನ್ನು ನೀಡಿತ್ತು.
ಬಿಎಸ್‍ವೈ ಟ್ವೀಟ್: ಕೊನೆಗೂ ಕೇಂದ್ರದ ನೆರೆ ಪರಿಹಾರ ನಿಧಿ ರಾಜ್ಯಕ್ಕೆ ಸಿಕ್ಕಿದೆ. ಕೇಂದ್ರ ಸರ್ಕಾರ 1200 ಕೋಟಿ ರೂ. ನೆರೆ ಪರಿಹಾರ ನಿಧಿಯನ್ನು ಕರ್ನಾಟಕಕ್ಕೆ ನೀಡಿದೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ ದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮುಂಗಡವಾಗಿ ಹಣ ಸಿಕ್ಕಿದೆ ಎಂದು ಯಡಿಯೂರಪ್ಪ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿ ದ್ದಾರೆ. ಪರಿಹಾರ ಹಣ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯದ ಜನತೆಯ ಪರವಾಗಿ ಸಿಎಂ ಯಡಿಯೂರಪ್ಪ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಆಗಸ್ಟ್‍ನಲ್ಲಿ ಅರ್ಧ ರಾಜ್ಯ ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. ಸಾವು ನೋವು ಸಂಭವಿಸಿತ್ತು. ಮನೆ, ಬೆಳೆ, ಜಾನುವಾರುಗಳನ್ನು ಕಳೆದುಕೊಂಡು ಜನರು ಇಂದಿಗೂ ಸಂಕಷ್ಟದಲ್ಲೇ ದಿನ ದೂಡುತ್ತಿದ್ದಾರೆ. ರಾಜ್ಯ ಸರ್ಕಾರ ಆರಂಭದಲ್ಲಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ನೀಡಿತ್ತು. ಕೇಂದ್ರದ ಪರಿಹಾರ ನಿಧಿಗಾಗಿ ಕಳೆದ 2 ತಿಂಗಳುಗಳಿಂದ ಕಾದು ಕುಳಿತಿತ್ತು. ರಾಜ್ಯ ಸರ್ಕಾರದ ಇತರ ಇಲಾಖೆಗಳ ಹೆಚ್ಚುವರಿ ಅನುದಾನವನ್ನೂ ಪ್ರವಾಹ ಪರಿಹಾರಕ್ಕೆ ಬಳಸಲು ಮುಂದಾಗಿತ್ತು. ಈ ಮೂಲಕ, ರಾಜ್ಯದ ಖಜಾನೆ ಖಾಲಿಯಾಗಿದೆ ಅನ್ನೋ ಗುಸುಗುಸು ಕೂಡಾ ಶುರುವಾಗಿತ್ತು. ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ನಿಧಿ ನೀಡಲು 2 ತಿಂಗಳ ಕಾಲ ತಡ ಮಾಡಿದ್ದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದವು. ರಾಜ್ಯದ ಸಂಸದರ ವಿರುದ್ಧ ಜನರು ಮುಗಿಬಿದ್ದಿದ್ದರು. ಬಿಜೆಪಿಯ 25 ಸಂಸದರನ್ನು ಆಯ್ಕೆ ಮಾಡಿದ್ದರೂ ಪ್ರವಾಹ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದು ರಾಜಕಾರಣಿಗಳು ಹಾಗೂ ಜನ ಸಾಮಾನ್ಯರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಇದೀಗ 1200 ಕೋಟಿ ರೂ. ಪ್ರವಾಹ ಪರಿಹಾರ ನಿಧಿ ರಾಜ್ಯಕ್ಕೆ ಸಿಕ್ಕಿದೆ. ಈ ನಿಧಿಯನ್ನು ನೆರೆಯಿಂದ ನೊಂದ ಜನರಿಗೆ ಆದಷ್ಟು ಬೇಗ ತಲುಪಿಸುವ ಕೆಲಸವನ್ನು ಯಡಿಯೂರಪ್ಪ ಸರ್ಕಾರ ಮಾಡಬೇಕಿದೆ.