ವಕೀಲನ ಮೇಲೆ ದೌರ್ಜನ್ಯ ಆರೋಪ ತಪ್ಪೆಸಗಿರುವ ಪೊಲೀಸ್ ಅಧಿಕಾರಿಗಳ  ಅಮಾನತ್ತಿಗೆ 2 ದಿನ ಗಡುವು
ಚಾಮರಾಜನಗರ

ವಕೀಲನ ಮೇಲೆ ದೌರ್ಜನ್ಯ ಆರೋಪ ತಪ್ಪೆಸಗಿರುವ ಪೊಲೀಸ್ ಅಧಿಕಾರಿಗಳ ಅಮಾನತ್ತಿಗೆ 2 ದಿನ ಗಡುವು

February 10, 2019

ಚಾಮರಾಜನಗರ: ಜಿಲ್ಲಾ ವಕೀಲರ ಸಂಘದ ಸದಸ್ಯ ಹಾಗೂ ಗುಂಡ್ಲುಪೇಟೆ ವಕೀಲ ರವಿ ಅವರನ್ನು ವಿನಾಕಾರಣ ಬಂಧಿಸಿದ ಗುಂಡ್ಲುಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಬಾಲಕೃಷ್ಣೇಗೌಡ, ಸಬ್‍ಇನ್ಸ್ ಪೆಕ್ಟರ್ ಲತೇಶ್ ಕುಮಾರ್‍ರನ್ನು ಇನ್ನೆರೆಡು ದಿನದಲ್ಲಿ ಅಮಾನತ್ತುಗೊಳಿಸದಿದ್ದರೆ, ರಾಜ್ಯಾದ್ಯಂತ ಹೋರಾಟ ವಿಸ್ತರಿಸುವುದಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರ ಇಂದುಶೇಖರ್ ಎಚ್ಚರಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲ ರವಿ ಅವರ ಮೇಲೆ ಎಫ್‍ಐಆರ್ ದಾಖಲಾಗಿರಲಿಲ್ಲ. ಅರೆಸ್ಟ್ ವಾರೆಂಟ್ ಸಹ ಜಾರಿ ಆಗಿರಲಿಲ್ಲ. ಅಲ್ಲದೆ ರವಿ ಅವರಿಗೆ ನಾಳೆ ಮದುವೆ ದಿನಾಂಕ ನಿಗದಿ ಆಗಿದೆ. ಈ ಬಗ್ಗೆ ತಿಳಿದಿದ್ದರೂ ಪೊಲೀಸರು ಅವರನ್ನು ಬಂಧಿಸಿ ಅಪಮಾನ ಮಾಡಿದ್ದಾರೆ. ಇದನ್ನು ಖಂಡಿಸಿ ಜಿಲ್ಲೆಯ ಎಲ್ಲಾ ವಕೀಲರು ಕಲಾಪದಿಂದ ದೂರ ಉಳಿದು ಮುಷ್ಕರ ನಡೆಸುತ್ತಿದ್ದೇವೆ. ಮುಷ್ಕರ ಶನಿವಾರಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೌಜನ್ಯಕ್ಕಾದ ವಕೀಲರೊಟ್ಟಿಗೆ ಚರ್ಚೆ ನಡೆಸಿಲ್ಲ ಎಂದು ಅವರು ದೂರಿದರು.

ತಪ್ಪೆಸಗಿರುವ ಸರ್ಕಲ್ ಇನ್ಸ್‍ಪೆಕ್ಟರ್ ಬಾಲಕೃಷ್ಣೇಗೌಡ ಮತ್ತು ಸಬ್‍ಇನ್ಸ್‍ಪೆಕ್ಟರ್ ಲತೇಶ್‍ಕುಮಾರ್ ಅವರನ್ನು ಇನ್ನೆರೆಡು ದಿನದೊಳಗೆ ಅಮಾನತ್ತುಗೊಳಿಸಬೇಕು. ಇಲ್ಲದಿದ್ದರೆ ರಾಜ್ಯ ವಕೀಲರ ಸಂಘ ಪದಾಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಹೋರಾಟವನ್ನು ರಾಜ್ಯಾದ್ಯಂದ ವಿಸ್ತರಿಸಲಾಗುವುದು. ರಾಜ್ಯದ ಎಲ್ಲಾ ವಕೀಲರು ನ್ಯಾಯಾ ಲಯದ ಕಲಾಪದಿಂದ ದೂರ ಉಳಿಯುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಗುಡುಗಿದರು.

ರೌಡಿಗಳು, ಭ್ರಷ್ಟಾಚಾರಿಗಳು, ಭ್ರಷ್ಟ ರಾಜಕಾರಣಿಗಳ ಮೇಲೆ ಕ್ರಮಕೈಗೊಳ್ಳಲು ಪೊಲೀಸರು ಮೀನಾಮೇಷ ಎಣಿಸುತ್ತಾರೆ. ಆದರೆ ತಪ್ಪೆಸಗದ ವಕೀಲನನ್ನು ವಿನಾಕಾರಣ ಬಂಧಿಸುತ್ತಾರೆ. ಇದನ್ನು ಜಿಲ್ಲಾ ವಕೀಲರ ಸಂಘ ತೀವ್ರವಾಗಿ ಖಂಡಿಸಿ ಮುಷ್ಕರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅರುಣ್‍ಕುಮಾರ್ ಮಾತನಾಡಿ, ತಪ್ಪೆಸಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರು ಹಾಗೂ ಗೃಹ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಇನ್ನೆರೆಡು ದಿನದವರೆಗೂ ಕಾದು ನೋಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಯಳಂದೂರು ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಶಶಿಧರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ಗಿರೀಶ್, ಬಿ.ವನಜಾಕ್ಷಿ ಹಾಜರಿದ್ದರು.

Translate »