ಮೇಕೇರಿ ಬಳಿ ಕಾಡಾನೆಗಳ ಆಟಾಟೋಪ
ಕೊಡಗು

ಮೇಕೇರಿ ಬಳಿ ಕಾಡಾನೆಗಳ ಆಟಾಟೋಪ

July 3, 2018

ಮಡಿಕೇರಿ: ನಗರಕ್ಕೆ ಹೊಂದಿಕೊಂಡಿರುವ ಮೇಕೇರಿ ವ್ಯಾಪ್ತಿಯಲ್ಲಿ 2 ಕಾಡಾನೆಗಳು ಕಾಫಿ ತೋಟಕ್ಕೆ ದಾಳಿ ಮಾಡಿದೆ. ಮೇಕೇರಿ ಪೈಸಾರಿಯಿಂದ ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಭಾನುವಾರ ರಾತ್ರಿ ವೇಳೆಯಲ್ಲಿ ಆಗಮಿಸಿದ ಕಾಡಾನೆಗಳು ಎದುರಿನಿಂದ ಬಂದ ಆಟೋ ರಿಕ್ಷಾವನ್ನು ಕಂಡು ಪಕ್ಷದಲ್ಲಿದ್ದ ಕಾಫಿ ತೋಟದೊಳಗೆ ಸೇರಿಕೊಂಡಿದೆ.

ಮಂಗಳಾದೇವಿ ನಗರದ ಕಡೆಯ ಅರಣ್ಯದಿಂದ ಆಗಮಿಸಿದ 2 ಕಾಡಾನೆಗಳನ್ನು ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಯತ್ನ ನಡೆಸಿದರಾದರೂ ಫಲ ಸಿಗಲಿಲ್ಲ. ಕಾಫಿ ತೋಟದ ಒಳಗೆ ಹಲಸಿನ ಹಣ್ಣು, ಬಿದಿರು ಯಥೇಚ್ಛವಾಗಿರುವುದ ರಿಂದ ಕಾಡಾನೆಗಳು ಮರಳಿ ಕಾಡಿನೆಡೆಗೆ ತೆರಳಲು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ.

ಕಾಡಾನೆ ಕಾರ್ಯಾಚರಣೆಯ ಸಂದರ್ಭ ಮಡಿಕೇರಿ-ಮೇಕೇರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಫಿ ತೋಟದ ಒಳಗಿದ್ದ 2 ಕಾಡಾನೆಗಳನ್ನು ರಸ್ತೆ ಬದಿಯವರೆಗೆ ಓಡಿಸಲು ಪ್ರಯತ್ನಿಸಿದ ಸಂದರ್ಭ, ರಸ್ತೆಯಲ್ಲಿ ಆಗಮಿಸಿದ ವಾಹನ ಶಬ್ಧಕ್ಕೆ ಬೆದರಿ ಮತ್ತೆ ಕಾಡಾನೆಗಳು ತೋಟದೊಳಗೆ ನುಸುಳಿಕೊಂಡವು. ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಗಳನ್ನೇ ಕಾಡಾನೆಗಳು ಬೆನ್ನಟ್ಟಿದ ಘಟನೆಯೂ ನಡೆಯಿತು.

ಕುಶಾಲನಗರ ವಲಯ ಉಪ ಅರಣ್ಯಾಧಿಕಾರಿ ಕನ್ನಂಡ ರಂಜನ್ ನೇತೃತ್ವದಲ್ಲಿ ಮಡಿಕೇರಿ ಅರಣ್ಯ ಸಿಬ್ಬಂದಿಗಳು ಮತ್ತು ರ್ಯಾಪಿಡ್ ರೆಸ್ಪಾನ್ಸ್ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಮಳೆ ಸುರಿದ ಹಿನ್ನಲೆಯಲ್ಲಿ ಕಾಡಾನೆ ಕಾರ್ಯಾಚರಣೆಗೆ ನಡೆಸಲು ಅಡ್ಡಿಯಾಯಿತು. ಕಾಫಿ, ಬಾಳೆ ಗಿಡಗಳನ್ನು ಕಾಡಾನೆಗಳು ನಾಶ ಪಡಿಸಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರು ಕಾಡಾನೆಗಳ ದಾಂಗುಡಿಗೆ ಭಯಭೀತರಾಗಿದ್ದಾರೆ. ಕಳೆದ 4 ವರ್ಷಗಳ ಹಿಂದೆ 3 ಕಾಡಾನೆಗಳು ಮರಿ ಸಹಿತ ಮಂಗಳಾದೇವಿನಗರ ಮತ್ತು ಮೇಕೇರಿ ಭಾಗಗಳಲ್ಲಿ ದಾಂಧಲೆ ನಡೆಸಿದ್ದವು. 4 ವರ್ಷದ ಬಳಿಕ ಇದೀಗ ಕಾಡಾನೆಗಳು ಈ ವ್ಯಾಪ್ತಿಯಲ್ಲಿ ಕಂಡು ಬಂದಿರುವುದಾಗಿ ಮೇಕೇರಿ ನಿವಾಸಿಗಳು ತಿಳಿಸಿದ್ದಾರೆ.

Translate »