- ಹುಲಿರಾಯನ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆ
ಕುಶಾಲನಗರ: ಸಮೀಪದ ನಂಜರಾಯಪಟ್ಟಣ ಗ್ರಾ.ಪಂ.ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಚಿಕ್ಲಿಹೊಳೆ ಅರಣ್ಯದಂಚಿನಲ್ಲಿ ಹುಲಿಯೊಂದು ದಾಳಿ ಮಾಡಿ ಹಸುವನ್ನು ಕೊಂಡು ಹಾಕಿರುವ ಘಟನೆ ನಡೆದಿದೆ.
ತಳೂರು ಗ್ರಾಮದ ರೈತ ನಾಗರಾಜು ಎಂಬುವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದ್ದು, ಇದರಿಂದ ರೈತನ ಕುಟುಂಬಕ್ಕೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಈಚೆಗೆ ಹುಲಿ ಕಾಟ ತೀವ್ರಗೊಂಡಿದ್ದು, ಮೊನ್ನೆ ಹಗಲಿನಲ್ಲಿಯೇ ಚಿಕ್ಲಿಹೊಳೆ ಕೆಳಭಾಗದ ಅರಣ್ಯದಂಚಿನಲ್ಲಿ ಹುಲ್ಲು ಮೇಯುತ್ತಿದ್ದ ಹಸುವಿನ ಮೇಲೆ ಏಕಾಏಕಿ ದಾಳಿ ಮಾಡಿದೆ. ಹಸು ಹುಲಿಯಿಂದ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದ ಸಂದರ್ಭ ನೀರಿನ ಹಳ್ಳದ ಬಳಿ ಜಾರಿ ಬಿದ್ದಿದೆ. ಕೂಡಲೇ ಮೈಮೇಲೆ ಎರಗಿದ ಹುಲಿರಾಯ ಕುತ್ತಿಗೆ ಭಾಗಕ್ಕೆ ಕಚ್ಚಿ ರಕ್ತ ಹೀರಿ ಕೊಂದು ಹಾಕಿದೆ. ಹಸು ಸಾವಿನ ಬಗ್ಗೆ ಅರಣ್ಯ ಇಲಾಖೆಗೆ ನಾಗರಾಜು ದೂರು ನೀಡಿದ ಮೇರೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಹುಲಿ ಹಸುವನ್ನು ಕೊಂದು ಹಾಕಿದ ಜಾಗದಲ್ಲಿಯೇ ಸಿಸಿ ಕ್ಯಾಮರಾ ಅಳ ವಡಿಸಿ ಹುಲಿಯ ಪತ್ತೆಗೆ ಕ್ರಮ ಕೈಗೊಂಡಿದ್ದರು.
ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ ಹಾಗೂ ಮೀನುಕೊಲ್ಲಿ ಮೀಸಲು ಅರಣ್ಯದ ಅಧಿಕಾರಿ ದಯಾನಂದ ನೇತೃತ್ವ ದಲ್ಲಿ ಸಿಬ್ಬಂದಿಗಳು ಕ್ಯಾಮರಾದ ಮೂಲಕ ಹುಲಿ ಜಾಡು ಹಿಡಿಯಲು ನಡೆಸಿದ ಯತ್ನ ಸಫಲವಾಗಿದೆ. ರಾತ್ರಿ ವೇಳೆ ಮತ್ತೆ ಹಸು ವನ್ನು ಕೊಂದಿದ್ದ ಸ್ಥಳಕ್ಕೆ ಬಂದ ಹುಲಿ ಹಸುವಿನ ಮಾಂಸವನ್ನು ಭಕ್ಷಿಸಿ ಹೊಟ್ಟೆ ತುಂಬ ತಿಂದ ನಂತರ ಸುತ್ತಲಿನ ಪ್ರದೇಶವನ್ನು ವೀಕ್ಷಿಸುತ್ತಿದ್ದ ದೃಶ್ಯಾವಳಿಗಳು ಕ್ಯಾಮರಾ ದಲ್ಲಿ ದಾಖಲಾಗಿವೆ. ಮೀನುಕೊಲ್ಲಿ ವ್ಯಾಪ್ತಿ ಯಲ್ಲಿ ಹುಲಿ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಇಲಾಖೆಯಿಂದ ಹೆಚ್ಚಿನ ಸಿಬ್ಬಂದಿ ಗಳನ್ನು ನೇಮಿಸಲಾಗಿದ್ದು, ಹುಲಿ ಸೆರೆ ಹಿಡಿ ಯುವ ಬಗ್ಗೆ ಡಿಎಫ್‍ಒ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ ‘ಮೈಸೂರುಮಿತ್ರ’ಗೆ ತಿಳಿಸಿದ್ದಾರೆ.