ಮೈಸೂರು, ಮಾ.28(ಎಂಟಿವೈ)- ಅಮ್ಮನಿಂದ ಬೇರ್ಪಟ್ಟ 2 ತಿಂಗಳ 3 ಹುಲಿ ಮರಿಗಳು ಭಾನುವಾರ ಮಧ್ಯಾಹ್ನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನುಗು ಜಲಾಶಯದ ಬಳಿ ಪತ್ತೆಯಾಗಿವೆ. ಆದರೆ, ಅದರಲ್ಲಿ 2 ಹೆಣ್ಣು ಹುಲಿಮರಿ ಮೃತಪಟ್ಟರೆ, ಗಂಡು ಹುಲಿ ಮರಿಯನ್ನು ಮೈಸೂರಿನ ಮೃಗಾ ಲಯಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿದೆ.
ವಾರದ ಹಿಂದೆ ಅರಣ್ಯ ಸಿಬ್ಬಂದಿ ಬಂಡೀಪುರ ಅಭಯಾರಣ್ಯದ ನುಗು ಜಲಾಶಯದ ವಲಯದಲ್ಲಿ ಗಸ್ತಿನಲ್ಲಿ ದ್ದಾಗ ಈ 3 ಹುಲಿ ಮರಿಗಳು ಕಾಣಿಸಿ ದವು. ತಾಯಿ ಹುಲಿ ಜತೆಗೆ ಇಲ್ಲದಿರು ವುದನ್ನು ಖಚಿತಪಡಿಸಿಕೊಂಡ ಅರಣ್ಯ ಸಿಬ್ಬಂದಿ, ಹುಲಿಮರಿಗಳು ಪತ್ತೆಯಾಗಿರು ವುದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆ ಪ್ರದೇಶದಲ್ಲಿ ವಾರ ದಿಂದ ಕೂಂಬಿಂಗ್ ನಡೆಸಲಾಗುತ್ತಿತ್ತು. ಆದರೆ, ತಾಯಿಹುಲಿ ಪತ್ತೆಯಾಗಿರಲಿಲ್ಲ.
ಭಾನುವಾರ ಮಧ್ಯಾಹ್ನ ಪೊದೆ ಬಳಿ ನಿತ್ರಾಣ ಸ್ಥಿತಿಯಲ್ಲಿ ಹುಲಿಮರಿಯೊಂದು ಬಿದ್ದಿರುವುದು ಗೋಚರಿಸಿದೆ. ಕೂಡಲೇ ಅರಣ್ಯ ಸಿಬ್ಬಂದಿ, ನೀರು ಕುಡಿಸಿ ಉಪ ಚರಿಸುತ್ತಿದ್ದಾಗಲೇ ಆ ಹೆಣ್ಣು ಹುಲಿಮರಿ ಮೃತಪಟ್ಟಿದೆ. ನಂತರ ಮತ್ತಷ್ಟು ದೂರ ಕ್ರಮಿ ಸಿದಾಗ ಇನ್ನೊಂದು ಪೊದೆ ಬಳಿ ಎರಡು ಹುಲಿಮರಿಗಳು ಹಸಿವಿನಿಂದ ಕಂಗೆಟ್ಟು ಕುಳಿತಿದ್ದವು. ಕೂಡಲೇ ಆ ಮರಿಗಳಿಗೂ ನೀರು ಕುಡಿಸಿ, ಉಪಚರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಮೈಸೂರು ಮೃಗಾಲಯಕ್ಕೆ ಸಂಜೆ ವೇಳೆಗೆ ಕರೆತರಲಾಯಿತು.
ಮೃಗಾಲಯದ ಪಶುವೈದ್ಯರು 2 ಮರಿ ಗಳಿಗೂ ತಕ್ಷಣ ಚಿಕಿತ್ಸೆ ಆರಂಭಿಸಿದರು. ಆದರೆ, ಮತ್ತೊಂದು ಹೆಣ್ಣು ಹುಲಿಮರಿಯೂ ಅಸುನೀಗಿತು. ಗಂಡು ಹುಲಿಮರಿ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರೆ ಭಾನುವಾರ ಮಧ್ಯರಾತ್ರಿ ಯಿಂದಲೇ ಗಿಣ್ಣುಹಾಲು ಮತ್ತು ಮಾಂಸ ವನ್ನು ಕೈಮಾ ಉಂಡೆ ಮಾಡಿ ನೀಡಲಾಗು ತÀ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಯಿ ಜತೆ ಮತ್ತೊಂದು ಮರಿ: 2 ತಿಂಗಳ ಹಿಂದೆಯಷ್ಟೇ ಹುಲಿಯೊಂದು 4 ಮರಿಗಳಿಗೆ ಜನ್ಮನೀಡಿದ್ದು ಕಂಡಿತ್ತು. ನಂತರ ಒಂದೂವರೆ ತಿಂಗಳವರೆಗೂ ಮರಿಗಳು ಲವಲವಿಕೆಯಿಂದಲೇ ಇದ್ದವು. ಆದರೆ, ಅದುಹೇಗೋ ತಾಯಿಯಿಂದ 3 ಹುಲಿಮರಿ ಬೇರ್ಪಟ್ಟಿವೆ. ಕೂಂಬಿಂಗ್ (ಕಾರ್ಯಾಚರಣೆ) ವೇಳೆ ತಾಯಿ ಹುಲಿ ಜತೆ ಒಂದು ಮರಿ ಹಿಂಬಾಲಿಸಿರುವುದು ಹೆಜ್ಜೆ ಗುರುತಿನಿಂದ ತಿಳಿದುಬಂದಿದೆ.
ಶಂಕೆ: ತಾಯಿಯಿಂದ ಹುಲಿಮರಿಗಳು ಬೇರ್ಪಟ್ಟಿರುವುದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇದೇ ಮೊದಲ ಘಟನೆ. 5 ವರ್ಷಗಳ ಹಿಂದೆ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ 3 ಹುಲಿಮರಿ ಬೇರ್ಪಟ್ಟಿದ್ದವು. ಅದರಲ್ಲಿ 2 ಸಾವನ್ನ ಪ್ಪಿದ್ದವು. ಮತ್ತೊಂದು ಮರಿ ನಿಗೂಢವಾಗಿ ಕಣ್ಮರೆಯಾಗಿತ್ತು. ಕಳೆದ ವರ್ಷ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಮೇಲುಕಾಮನಹಳ್ಳಿ-ಚೌಡಹಳ್ಳಿ ಬಳಿ ಹುಲಿ-ಮಾನವ ಸಂಘರ್ಷ ಏರ್ಪಟ್ಟು, ಬಳಿಕ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಈಗಿನ ಪ್ರಕರಣದಲ್ಲಿ 3 ಹುಲಿಮರಿಗಳು ತಾಯಿಯಿಂದ ಯಾವ ಕಾರಣಕ್ಕೆ ಬೇರ್ಪಟ್ಟಿವೆ ಎಂಬುದನ್ನು ಅರಿಯಲು ಅರಣ್ಯ ಇಲಾಖೆ ಹಲವು ಆಯಾಮಗಳಲ್ಲಿ ಪರಿಶೀಲಿಸುತ್ತಿದೆ. ಮೃಗಾಲಯಕ್ಕೆ ತಂದ 2 ಮರಿಗಳನ್ನು ಅಪಾರ ಸಂಖ್ಯೆಯ ಉಣ್ಣಿಗಳು ಕಚ್ಚಿಕೊಂಡಿದ್ದವು. ಇದರಿಂದಲೇ ಮರಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಇದನ್ನು ಮನಗಂಡ ತಾಯಿ ಹುಲಿ ಆರೋಗ್ಯವಂತ ಮರಿಯನ್ನು ಮಾತ್ರ ಜತೆಗೆ ಕರೆದೊಯ್ದಿರಬಹುದು ಎಂದು ವನ್ಯಜೀವಿ ತಜ್ಞರು ವಿಶ್ಲೇಷಿಸಿದ್ದಾರೆ.
ಈ ನಡುವೆ ತಾಯಿ ಹುಲಿ ಬೇಟೆಯಾಡುವ ಸಂದರ್ಭವೋ, ಬೇರೆ ಕಾರಣದಿಂದಲೋ ಗಾಯಗೊಂಡಿರಬಹುದು. ಬೇಟೆಯಾಡಲು ಶಕ್ತಿಯಿಲ್ಲದೆ ಮರಿಗಳಿಗೆ ಆಹಾರ ನೀಡಲು ಸಾಧ್ಯವಾಗಿಲ್ಲ. ಇದರಿಂದಲೂ ಹುಲಿಮರಿಗಳು ಹಸಿವಿನಿಂದ ನಿಶಕ್ತಿಗೊಳಗಾಗಿ ತಾಯಿಯಿಂದ ಬೇರ್ಪಟ್ಟಿರಬಹುದು ಎಂಬ ಶಂಕೆ ಅರಣ್ಯಾಧಿಕಾರಿಗಳಲ್ಲಿ ಮೂಡಿದೆ. ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕ ಎಸ್.ಆರ್.ನಟೇಶ್, ಹೆಡಿಯಾಲ ಎಸಿಎಫ್ ಎಂ.ಎಸ್.ರವಿಕುಮಾರ್, ವನ್ಯಜೀವಿ ಪರಿಪಾಲಕರಾದ ಕೃತಿಕಾ ಆಲನಹಳ್ಳಿ, ಪಶು ವೈದ್ಯಾಧಿಕಾರಿ ಡಾ.ಮುಜೀಬ್ ರೆಹಮಾನ್, ಎನ್‍ಟಿಸಿಎ ಪ್ರತಿನಿಧಿ ಆರ್.ರಘುರಾಮ್, ನುಗು ಜಲಾಶಯ ವಲಯದ ಆರ್‍ಎಫ್‍ಒ ಗೀತಾ ನಾಯಕ್ ಮತ್ತಿತರರು ಸ್ಥಳ ಪರಿಶೀಲಿಸಿದರು. ಎಸಿಎಫ್ ಸುಮಿತ್‍ಕುಮಾರ್, ಸುಭಾಷ್‍ರಾವ್ ಪಾಟೀಲ್, ಹೆಡಿಯಾಲ ಆರ್‍ಎಫ್‍ಒ ಮಂಜುನಾಥ್ ನೇತೃತ್ವದಲ್ಲಿ ಕೂಂಬಿಂಗ್ ಮುಂದುವರೆದಿದೆ.