ಕೆಆರ್‌ಎಸ್‌ ಜಲಾಶಯ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿ ಗಣಿಗಾರಿಕೆ ನಿಷಿದ್ಧ
ಮೈಸೂರು

ಕೆಆರ್‌ಎಸ್‌ ಜಲಾಶಯ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿ ಗಣಿಗಾರಿಕೆ ನಿಷಿದ್ಧ

September 28, 2018

ಮಂಡ್ಯ: ಕಳೆದ ಎರಡು ದಿನಗಳ ಹಿಂದೆ ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ ವರದಿ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಭದ್ರತೆಯ ದೃಷ್ಟಿಯಿಂದ ಕೆಆರ್‌ಎಸ್‌ ಜಲಾಶಯದ 20 ಕಿ.ಮೀ. ಸುತ್ತಳತೆಯಲ್ಲಿ ಗಣಿಗಾರಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಇಂದು ಆದೇಶ ಹೊರಡಿಸಿದ್ದಾರೆ.

ಕೆಎಸ್‍ಎನ್‍ಡಿಎಂ ಎಚ್ಚರಿಕೆ ವರದಿ: ಮೈಸೂರು ಮತ್ತು ಶ್ರೀರಂಗಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ.25ರಂದು ಮಧ್ಯಾಹ್ನ 2 ಸಲ ಭಾರೀ ಶಬ್ದ ಕೇಳಿ ಬಂದಿತ್ತು. ಈ ಸಂಬಂಧ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‍ಎನ್ ಡಿಎಂ)ದ ನಿರ್ದೇಶಕ ಜಿ.ಎಸ್.ಶ್ರೀನಿವಾಸ ರೆಡ್ಡಿ ಅವರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಸೆ.25 ರಂದು ಕೇಳಿ ಬಂದ ಭಾರೀ ಶಬ್ದವು ಕೆಆರ್‌ಎಸ್‌ ಜಲಾಶಯದಿಂದ 10.5 ಕಿ.ಮೀ. ದೂರದ ಬೇಬಿ ಬೆಟ್ಟ ಕಾವಲು ಪ್ರದೇಶದಲ್ಲಿ ಗಣಿಗಾರಿಕೆಗೆ ಬಳಸಿದ ಸ್ಫೋಟಕದಿಂದ ಬಂದಿದೆ ಎಂದು ತಿಳಿಸಿದ್ದರು.

ಇತ್ತೀಚೆಗೆ ಮಂಡ್ಯ ಹಾಗೂ ಮೈಸೂರು ಜನತೆಯನ್ನು ತಲ್ಲಣಗೊಳಿಸಿದ ಭಾರೀ ಸ್ಫೋಟಕ ಸದ್ದಿನ ಮೂಲ ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೆಆರ್‍ಎಸ್ ಜಲಾಶಯದ ಸುತ್ತಮುತ್ತ ಕಲ್ಲು ಗಣಿಗಾರಿಕೆ ಕ್ವಾರೆಗಳನ್ನು ಮುಚ್ಚಲು ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕೆಆರ್‌ಎಸ್‌ ಜಲಾಶಯವು 80 ವರ್ಷಗಳ ಪುರಾತನ ಜಲಾಶಯವಾಗಿದ್ದು, ಕರ್ನಾಟಕ ರಾಜ್ಯದ ಹಲವು ನಗರಗಳಿಗೆ ಕುಡಿಯುವ ನೀರಿನ ಮೂಲ ವಾಗಿ ಹಾಗೂ ಕರ್ನಾಟಕ-ತಮಿಳ್ನಾಡು ರಾಜ್ಯಗಳ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿ ಮೂಲ ವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಅಣೆಕಟ್ಟು ಗಳ ಭದ್ರತಾ ಸಮಿತಿಯು ಜಿಲ್ಲಾಡಳಿತದ ನೆರವಿನೊಂದಿಗೆ ಜಲಾಶಯದ 15-20 ಕಿ.ಮೀ. ವ್ಯಾಪ್ತಿಯಲ್ಲಿ ಜಲಾಶಯದ ಸುರಕ್ಷತೆಗೆ ಧಕ್ಕೆಯಾಗುವಂತಹ ಯಾವುದೇ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು.

ಕೆಆರ್‌ಎಸ್‌ ಜಲಾಶಯದ 20 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಸ್ಫೋಟಕಗಳನ್ನು ಬಳಸಿ ಗಣಿಗಾರಿಕೆ ನಡೆಸುತ್ತಿದ್ದು, ಇದರ ಕಂಪನದಿಂದ ಸುತ್ತಮುತ್ತಲಿನ ಪ್ರದೇಶದ ಮನೆಗಳು ಬಿರುಕು ಬಿಡುತ್ತವೆ. ಪರಿಸರ ಮಾಲಿನ್ಯಗೊಳ್ಳು ವುದರಿಂದ ಕುಡಿಯುವ ನೀರಿನ ಮೂಲ ಕಲುಷಿತಗೊಳ್ಳುತ್ತದೆ ಹಾಗೂ ಕೆಆರ್‌ಎಸ್‌ ಅಣೆಕಟ್ಟೆಗೆ ತೊಂದರೆಯಾಗುವ ಸಂಭವವಿರುವ ಹಿನ್ನೆಲೆಯಲ್ಲಿ ತಾವು 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶ ನೀಡುತ್ತಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕೆಆರ್‌ಎಸ್‌ ಜಲಾಶಯದ ಸುರಕ್ಷತೆಗಾಗಿ ರಾಜ್ಯದ ಅಣೆಕಟ್ಟುಗಳ ಸಮಿತಿಯು ಯಾವುದೇ ರೀತಿಯ ಅಧ್ಯಯನ ನಡೆಸಿದ್ದಲ್ಲಿ ಅದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಜಿಲ್ಲಾಧಿಕಾರಿಗಳು ಭಾರೀ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಅಲ್ಲದೇ ತಾಂತ್ರಿಕ ನೈಪುಣ್ಯತೆವುಳ್ಳ ಸಂಸ್ಥೆಯಿಂದ ಸಮಗ್ರ ಪರಿಶೀಲನೆ ನಡೆಸಿ ವರದಿ ಬರುವವರೆಗೆ ಕೆಆರ್‌ಎಸ್‌ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಈ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಹಾಗೂ ಗಣಿಗಾರಿಕೆಗಾಗಿ ಸ್ಫೋಟಕಗಳನ್ನು ಬಳಸುವುದು ಸೂಕ್ತವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Translate »