ತಂದೆಯ ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ
ಮಂಡ್ಯ, ಮೈಸೂರು

ತಂದೆಯ ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ

September 28, 2018

ಕೆ.ಆರ್.ಪೇಟೆ:  ತಂದೆ ಮತ್ತು ಮಗ ಒಂದೇ ದಿನ ಇಹಲೋಕ ತ್ಯಜಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇದರ ಹಿಂದಿರುವ ಕರುಣಾ ಜನಕ ಕತೆ ಕಲ್ಲು ಹೃದಯಿಗಳ ಕಣ್ಣಲ್ಲೂ ನೀರು ತರಿಸುವಂತಿದೆ.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ತಂದೆಯ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಲಾಗದೆ ಪುತ್ರ ಆತ್ಮಹತ್ಯೆ ಮಾಡಿ ಕೊಂಡರೆ, ಚಿಕಿತ್ಸೆ ಫಲಕಾರಿಯಾಗದೆ ತಂದೆಯೂ ಕೊನೆಯು ಸಿರೆಳೆದಿದ್ದಾರೆ. ಮಂಡ್ಯ ಜಿಲ್ಲೆ, ಕೃಷ್ಣರಾಜ ಪೇಟೆ ತಾಲೂಕು, ಬೂಕನಕೆರೆ ಗ್ರಾಮದ ಹಿರಣ್ಣಯ್ಯ(55) ಹಾಗೂ ಮಂಜು (23) ಒಂದೇ ದಿನ ಬದುಕಿನ ಪಯಣ ಮುಗಿಸಿದ್ದಾರೆ.

ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾದ ಹಿರಿಯಣ್ಣಯ್ಯ ಅವರನ್ನು ಗೌರಿ-ಗಣಪತಿ ಹಬ್ಬದ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಅನ್ನನಾಳ, ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆ ಇರುವುದಾಗಿ ತಿಳಿಸಿ, ಚಿಕಿತ್ಸೆ ಮುಂದುವರಿಸಿದ್ದರು. ಮೈಸೂರಿನಲ್ಲಿ ಕಾರು ಚಾಲಕನಾಗಿರುವ ಮಂಜು, ತನ್ನ ತಂದೆಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಸಾಲ ಮಾಡಿ ಸುಮಾರು 2 ಲಕ್ಷ ರೂ.ಗೂ ಹೆಚ್ಚು ಹಣವನ್ನು ಆಸ್ಪತ್ರೆಗೆ ಪಾವತಿಸಿದ್ದರು ಎನ್ನಲಾಗಿದೆ. ಹಿರಣ್ಣಯ್ಯ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಯಾವುದನ್ನೂ ಖಚಿತವಾಗಿ ಹೇಳಿರಲಿಲ್ಲ. ಇನ್ನು 80 ಸಾವಿರ ರೂ. ಹಣವನ್ನು ಪಾವತಿಸಿದರೆ ಮಾತ್ರ ಚಿಕಿತ್ಸೆ ಮುಂದುವರಿಸುತ್ತೇವೆ. ಇಲ್ಲವಾದರೆ ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿ ಎಂದು ತಿಳಿಸಿದ್ದರಂತೆ. ಆದರೆ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ ಎಂದು ಖಚಿತವಾಗಿ ಹೇಳಿರಲಿಲ್ಲ. ಈಗಾಗಲೇ ಸಾಲ ಮಾಡಿ ಹಣ ಹೊಂದಿಸಿದ್ದ ಮಂಜು, ಇನ್ನೂ ಹಣ ಬೇಕೆಂದಾಗ ಕಂಗಾಲಾಗಿ ಹೋಗಿದ್ದ. ಪರಿಚಿತರ ಬಳಿಯೆಲ್ಲಾ ಸಾಲ ಪಡೆದಿದ್ದರಿಂದ ಬೇರೆ ದಾರಿ ಕಾಣದೇ ಆತಂಕಕ್ಕೀಡಾಗಿದ್ದ. ಇದರಿಂದ ಮನನೊಂದು ಮೈಸೂರಿನ ವಿನಾಯಕ ನಗರದಲ್ಲಿದ್ದ ತನ್ನ ಬಾಡಿಗೆ ಕೊಠಡಿಯಲ್ಲಿ ಬುಧವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಸ್ಪತ್ರೆಯಲ್ಲಿ ಹಿರಣ್ಣಯ್ಯ ಅವರ ಆರೈಕೆ ಮಾಡುತ್ತಿದ್ದ ಸಂಬಂಧಿಕರು ಮಂಜು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಆಂಬುಲೆನ್ಸ್‍ನಲ್ಲಿ ಊರಿಗೆ ಕರೆದೊಯ್ಯುತ್ತಿದ್ದರು. ಆಂಬುಲೆನ್ಸ್‍ನಲ್ಲಿ ಮಾತನಾಡುತ್ತಿದ್ದವರಿಂದ ಮಗನ ಸಾವಿನ ವಿಷಯ ತಿಳಿದ ಹಿರಣ್ಣಯ್ಯ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ತಂದೆ-ಮಗ ಸಾವಿನಲ್ಲೂ ಒಂದಾದ ಘಟನೆ ತಿಳಿದ ಸಂಬಂಧಿಕರು, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು ತಂದೆ-ಮಗನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಹಿರಣ್ಣಯ್ಯನವರಿಗೆ ಪುತ್ರ ಮಂಜು ಸೇರಿದಂತೆ ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ವಿವಾಹ ಮಾಡಿದ್ದಾರೆ. ಸದ್ಯ ಬೂಕನಕೆರೆಯಲ್ಲಿ ಸೈಕಲ್ ಪಂಕ್ಚರ್ ಶಾಪ್ ಇಟ್ಟುಕೊಂಡಿದ್ದ ಹಿರಣ್ಣಯ್ಯ ತಮ್ಮ ಪತ್ನಿ ಕಮಲಮ್ಮ ಅವರೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಮೈಸೂರಿನಲ್ಲಿ ಕಾರು ಚಾಲಕನಾಗಿದ್ದ ಮಗ ಮಂಜು, ಆಗಾಗ್ಗೆ ಊರಿಗೆ ಬಂದು ಹೋಗುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಹಿರಣ್ಣಯ್ಯ ಅವರಿಗೆ ಅನಾರೋಗ್ಯ ಸಮಸ್ಯೆ ಉಲ್ಬಣಿಸಿದಾಗ ಇಡೀ ಕುಟುಂಬವೇ ಕಂಗಾಲಾಗಿ ಹೋಗಿತ್ತು. ಮಗ ಮಂಜು ಹೇಗಾದರೂ ಉಳಿಸಿಕೊಳ್ಳಬೇ ಕೆಂದು ಪ್ರಯತ್ನಿಸಿದ್ದ. ಆದರೂ ಕಡೆ ಕ್ಷಣದಲ್ಲಿ ಹಣ ಹೊಂದಿಸಲಾಗದೆ ಅಸಹಾಯಕತೆಯಿಂದ ಆತ್ಮಹತ್ಯೆ ಮಾಡಿಕೊಂಡ. ತನಗಾಗಿ ದುಡಿಯುತ್ತಿದ್ದ ಮಗನ ಅಗಲಿಕೆಯಿಂದ ತಂದೆಯೂ ಕೊನೆಯುಸಿರೆಳೆದರು. ಸರ್ಕಾರಗಳು ಸಾಕಷ್ಟು ಆರೋಗ್ಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ ಉದ್ದೇಶ ಸಾರ್ಥಕವಾಗಿಲ್ಲ. ಬಡವರ ರಕ್ತ ಹೀರುವ ಖಾಸಗಿ ಆಸ್ಪತ್ರೆಗಳ ಧನದಾಹ ಇನ್ನೂ ಹೆಚ್ಚಾಗಿದೆ ಎಂಬುದಕ್ಕೆ ತಂದೆ-ಮಗನ ಸಾವಿನ ಪ್ರಕರಣವೇ ಜೀವಂತ ಸಾಕ್ಷಿಯಾಗಿದೆ.

Translate »