ಮೈಸೂರಿನ ಆರ್.ಕೆ.ನಾರಾಯಣರ  ‘ಮಾಲ್ಗುಡಿ’ ಮನೆಗೆ ಸಾಹಿತ್ಯ ಪ್ರಿಯರ ಪಯಣ ಆರಂಭದಿಂದ ಈವರೆಗೆ 20,000 ಆರ್‍ಕೆಎನ್ ಅಭಿಮಾನಿಗಳ ಭೇಟಿ
ಮೈಸೂರು

ಮೈಸೂರಿನ ಆರ್.ಕೆ.ನಾರಾಯಣರ  ‘ಮಾಲ್ಗುಡಿ’ ಮನೆಗೆ ಸಾಹಿತ್ಯ ಪ್ರಿಯರ ಪಯಣ ಆರಂಭದಿಂದ ಈವರೆಗೆ 20,000 ಆರ್‍ಕೆಎನ್ ಅಭಿಮಾನಿಗಳ ಭೇಟಿ

December 24, 2019

ಮೈಸೂರು,ಡಿ.23-ಭಾರತದ ಅತ್ಯಂತ ಜನಪ್ರಿಯ ಆಂಗ್ಲ ಲೇಖಕ, ಕಾದಂಬರಿಕಾರರಾದ ಆರ್.ಕೆ.ನಾರಾ ಯಣ್ (ಆರ್‍ಕೆಎನ್) ಅವರ ಮೈಸೂರು ನಿವಾಸಕ್ಕೆ ಸಾಹಿತ್ಯ ಯಾತ್ರಿಗಳ ದಂಡೇ ಭೇಟಿ ನೀಡುತ್ತಿದೆ.

2016ರ ಜುಲೈ 24ರಿಂದೀಚೆಗೆ ಈವರೆಗೆ ಯಾದವಗಿರಿಯ ವಿವೇಕಾನಂದ ರಸ್ತೆಯಲ್ಲಿರುವ ಆರ್.ಕೆ. ನಾರಾಯಣ್ ಅವರ ಮನೆಗೆ ಒಟ್ಟು 20,000 ಮಂದಿ ಅಭಿಮಾನಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿ ಗಳು ಭೇಟಿ ನೀಡಿ ಆರ್.ಕೆ.ನಾರಾಯಣ್ ಸ್ಮಾರಕ ಮ್ಯೂಸಿಯಂ ಅನ್ನು ವೀಕ್ಷಿಸಿರುವುದು ದಾಖಲಾಗಿದೆ.

ಇಂಗ್ಲಿಷ್ ಅಧ್ಯಾಪಕರು, ಸಂಶೋಧಕರು, ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಪ್ರವಾಸಿಗರೂ ಸಹ ಇಲ್ಲಿಗೆ ಭೇಟಿ ನೀಡಿ, ಆರ್‍ಕೆಎನ್ ಅವರ ಸಾಹಿತ್ಯ ಗ್ರಂಥಗಳು, ಅವರು ಪಡೆದ ಪ್ರಶಸ್ತಿಗಳು, ಬಳಸುತ್ತಿದ್ದ ಪೀಠೋ ಪಕರಣ, ಉಡುಗೆ-ತೊಡುಗೆಗಳನ್ನು ವೀಕ್ಷಿಸಿ, ಪ್ರೇರೇಪಿತರಾಗುತ್ತಿರುವುದು ವಿಶೇಷ.

90×120 ಅಡಿ ವಿಸ್ತೀರ್ಣ ಸೇರಿ 10,800 ಚದರಡಿ ಜಾಗದಲ್ಲಿ ನಿರ್ಮಿಸಿರುವ ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್ ನಾರಾಯಣಸ್ವಾಮಿ (ಆರ್.ಕೆ.ನಾರಾ ಯಣ್) ಅವರು ವಾಸಿಸುತ್ತಿದ್ದ ಮೈಸೂರು ಮನೆಯನ್ನು ಸರ್ಕಾರದ ವತಿಯಿಂದ ಖರೀದಿಸಿ ಅಮೇರಿಕಾದಲ್ಲಿರುವ ಶೇಕ್ಸ್‍ಪಿಯರ್ ಮಾದರಿಯ ಮ್ಯೂಸಿಯಂ ಮಾಡಿ ಸಂರಕ್ಷಿಸಲಾಗಿದೆ.

ನೆಲಸಮದಿಂದ ಮನೆ ರಕ್ಷಣೆ: ಪುರಾತತ್ವ, ಸಂಗ್ರ ಹಾಲಯಗಳು ಮತ್ತು ಪಾರಂಪರಿಕ ಇಲಾಖೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮನೆಯನ್ನು ಸ್ವಾಧೀನಪಡಿಸಿಕೊಳ್ಳ ಲಾಗಿತ್ತು. ಸಾರ್ವಜನಿಕರ ಒತ್ತಡದಿಂದಾಗಿ ನೆಲಸಮ ಮಾಡುವ ಕೆಲಸ ಆರಂಭಿಸಿದ್ದ ಬಿಲ್ಡರ್ ವೊಬ್ಬರಿಂದ ಪಾಲಿಕೆಯು ಸ್ವಾಧೀನಪಡಿಸಿಕೊಂಡು, ನಂತರ ‘ಪಾರಂಪರಿಕ ಕಟ್ಟಡ’ ಎಂದು ಘೋಷಿಸಿತ್ತು.

ಪ್ರಸ್ತುತ ಜೆಎಸ್‍ಎಸ್ ವಿದ್ಯಾಪೀಠದಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದಿನ ಮುಡಾ ಆಯುಕ್ತ (ನಂತರ ಪಾಲಿಕೆ ಆಯುಕ್ತ ಆಗಿದ್ದರು) ಡಾ.ಸಿ.ಜಿ. ಬೆಟಸೂರ ಮಠ ಅವರು ಆರ್.ಕೆ.ನಾರಾಯಣ್ ಅವರ ಮನೆಯನ್ನು ಸರ್ಕಾರದ ಅನುಮತಿಯೊಂದಿಗೆ ಖರೀದಿಸಿ, ನವೀಕರಿಸಿ ಮ್ಯೂಸಿಯಂ ಆಗಿ ಪರಿವರ್ತಿಸಿ ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

1948ರಲ್ಲಿ ನಿರ್ಮಾಣ: 1948ರಲ್ಲಿ ತಮ್ಮ ಆತ್ಮಕಥನ (ಆಟೋ ಬಯೋಗ್ರಫಿ) ‘ಮೈ ಡೇಸ್’ ಬರೆದಾಗ ಆರ್.ಕೆ.ನಾರಾಯಣ್ ಅವರು ಮನೆಯನ್ನು ನಿರ್ಮಿಸಿದ್ದರು. ನಂತರ ಆ ಮನೆಯು ಸಾಹಿತ್ಯ ರಚಿಸಲು ಆರ್‍ಕೆಎನ್ ಅವರಿಗೆ ಪ್ರೇರಣೆ ನೀಡಿತು.

ಮನೆಯನ್ನು ಖರೀದಿಸಿದ ಬಿಲ್ಡರ್, ಅದನ್ನು ನೆಲಸಮ ಮಾಡಿ ಬಹುಮಹಡಿ ಐಷಾರಾಮಿ ಅಪಾರ್ಟ್‍ಮೆಂಟ್ ನಿರ್ಮಾಣ ಮಾಡಲು ಉದ್ದೇಶಿಸಿರುವ ವಿಷಯ ತಿಳಿದ ತಕ್ಷಣ, ಅವರ ಅಭಿಮಾನಿಗಳು, ಲೇಖಕರು ಹಾಗೂ ಪಾರಂಪರಿಕ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಎಚ್ಚೆತ್ತ ಮುಡಾ, ಆ ಮನೆಯನ್ನು ರಕ್ಷಿಸಿ, ಅದನ್ನು ಖರೀದಿಸಿ, ನವೀಕರಿಸಿ ಮ್ಯೂಸಿಯಂ ಮಾಡಿದೆ.

ಆರ್.ಕೆ. ನಾರಾಯಣ್ ಮನೆ: ಮೈಸೂರಿನ ಯಾದವಗಿರಿಯ ವಿವೇಕಾನಂದ ರಸ್ತೆಯಲ್ಲಿರುವ ಮ್ಯೂಸಿಯಂಗೆ ಹೋಗುತ್ತಿದ್ದಂತೆಯೇ ‘ಆರ್.ಕೆ. ನಾರಾಯಣ್ ಅವರ ಮನೆ’ ಎಂಬ ಸಿಲ್ವರ್ ಸ್ಟೇನ್‍ಲೆಸ್ ಸ್ಟೀಲ್ ನಾಮಫಲಕ ಸ್ವಾಗತಿಸುತ್ತದೆ.

ಹಸಿರು ಲಾನ್, ದೊಡ್ಡ ಫ್ರಾಂಗಿಪಾಣಿ ಮರ ಆರ್‍ಕೆಎನ್ ಅವರ ಎರಡು ಮಹಡಿ ಮನೆ ಭೇಟಿ ನೀಡುವವರನ್ನು ಬರಮಾಡಿಕೊಳ್ಳುತ್ತಿದೆ. ಅದರ ರೆಡ್‍ಆಕ್ಸೈಡ್ ನೆಲವು ಸಾಹಿತ್ಯಾಸಕ್ತರನ್ನು 50 ವರ್ಷ ಹಿಂದಕ್ಕೆ ಕರೆದೊಯ್ಯುತ್ತದೆ.

ಸಂಗ್ರಹಾಲಯದಲ್ಲಿವೆ: ನೆಲಮಹಡಿಯಲ್ಲಿ ಆರ್‍ಕೆಎನ್ ಬಳಸುತ್ತಿದ್ದ ಪೀಠೋಪಕರಣ, ಆರಾಂ ಚೇರ್, ಟೇಬಲ್, ಅವರಿಗೆ ಸಂದಿರುವ ಸಾಹಿತ್ಯ ಅಕಾಡೆಮಿ, ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಇತರ ಪ್ರಶಸ್ತಿಗಳು, ಗೌರವ ಡಾಕ್ಟರೇಟ್ ಪ್ರಮಾಣ ಪತ್ರಗಳು, ಬಾಲ್ಯದಿಂದ ಅಂತಿಮ ದಿನಗಳವರೆಗಿನ ಅಪರೂಪದ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಮೊದಲ ಮಹಡಿಯಲ್ಲಿ ಉಡುಪು, ಚಿಕ್ಕ ಗ್ರಂಥಾಲಯ, ಅವರ ಬಿಳಿಯ ಶರ್ಟ್, ಬೂದು ಬಣ್ಣದ ಕೋಟ್, ಸ್ವೆಟರ್, ಮಫ್ಲರ್, ತರ್ಜುಮೆ ಮಾಡಿರುವ ಗ್ರಂಥಗಳು ಕಾಣಸಿಗುತ್ತವೆ.

ಮಂಗಳವಾರ, ರಾಷ್ಟ್ರೀಯ ರಜಾ ದಿನ ಹೊರತುಪಡಿಸಿ ಭಾನುವಾರ, 2 ಮತ್ತು 4ನೇ ಶನಿವಾರ ಸೇರಿದಂತೆ ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಆರ್.ಕೆ.ನಾರಾಯಣ್ ಅವರ ಮನೆ ಮ್ಯೂಸಿಯಂ ತೆರೆದಿರುತ್ತದೆ. ಇಲ್ಲಿನ ಮೇಲ್ವಿಚಾರಕ ಆನಂದಕುಮಾರ್ ಸ್ಥಳದಲ್ಲಿದ್ದು, ವೀಕ್ಷಕರಿಗೆ ನೆರವಾಗುತ್ತಾರೆ.

ಸಚಿವ ಸುರೇಶ್‍ಕುಮಾರ್ ಪಾತ್ರ: ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್‍ಕುಮಾರ್, ಆರ್‍ಕೆಎನ್ ಅವರ ಮನೆಯನ್ನು ಮ್ಯೂಸಿಯಂ ಮಾಡಲು ಆಸಕ್ತಿ ತೋರಿದ್ದರಲ್ಲದೆ, ನಂತರ 2017ರ ಜುಲೈ 3ರಂದು ಇಲ್ಲಿಗೆ ತಾವು ಭೇಟಿ ನೀಡಿ ತಮ್ಮ ಮೆಚ್ಚುಗೆಯನ್ನು ಸಂದರ್ಶಕರ ಪುಸ್ತಿಕೆಯಲ್ಲಿ ದಾಖಲಿಸಿದ್ದಾರೆ.

ಅಮೇರಿಕಾದಲ್ಲಿ ನೆಲೆಸಿರುವ ಚೆನ್ನೈ ಮೂಲದ ಪ್ರಕಾಶ್ ಮತ್ತು ವಿದ್ಯಾ ದಂಪತಿ ಮಕ್ಕಳಾದ ಧ್ವನಿ ಮತ್ತು ದೃತಿಯರೊಂದಿಗೆ ಇತ್ತೀಚೆಗೆ ಭೇಟಿ ನೀಡಿ ಆರ್.ಕೆ.ನಾರಾಯಣ್ ಅವರ ಮ್ಯೂಸಿಯಂ ಬಗ್ಗೆ ಅಭಿಮಾನದ ಮಾತುಗಳನ್ನು ‘ಮೈಸೂರು ಮಿತ್ರ’ನೊಂದಿಗೆ ಹಂಚಿಕೊಂಡರು.

ಎಸ್.ಟಿ. ರವಿಕುಮಾರ್

Translate »