25 ವರ್ಷಗಳ ನಿರಂತರ ಹೋರಾಟದ ಪ್ರತಿಫಲ ಭೂಮಿ ಒಡೆಯರಾದ ಆದಿವಾಸಿಗಳು !
ಮೈಸೂರು

25 ವರ್ಷಗಳ ನಿರಂತರ ಹೋರಾಟದ ಪ್ರತಿಫಲ ಭೂಮಿ ಒಡೆಯರಾದ ಆದಿವಾಸಿಗಳು !

August 17, 2018

ಹುಣಸೂರು:  ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ 266 ಕುಟುಂಬಗಳಿಗೆ ಒಟ್ಟು 1800 ಎಕರೆ ಕೃಷಿ ಭೂಮಿಯ ಹಕ್ಕು ಪತ್ರವನ್ನು ನೀಡುವ ಮೂಲಕ 25 ವರ್ಷಗಳ ನಿರಂತರ ಹೋರಾಟ ನಡೆಸುತ್ತಿದ್ದ ಗಿರಿಜನರಿಗೆ ಪ್ರತಿಫಲ ದೊರೆತಂತಾಗಿದೆ.

ತಾಲೂಕಿನ ನಾಗಪುರ ಗಿರಿಜನ ಪುನ ರ್ವಸತಿ ಕೇಂದ್ರದ ಆಶ್ರಮ ಶಾಲೆಯಲ್ಲಿ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಎ.ಹೆಚ್.ವಿಶ್ವನಾಥ್ ಗಿರಿಜನರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿ, ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಉಳು ವವನೇ ಭೂ ಒಡೆಯ ಕಾಯ್ದೆ ಜಾರಿಗೊಳಿಸಿ ತಳ ವರ್ಗದವರಿಗೆ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಿದರು. ಅದೇ ಮಾದರಿಯಲ್ಲಿ ಅದಿವಾಸಿ ಗಿರಿಜನರಿಗೆ ಭೂ ಮಾಲೀಕತ್ವ ನೀಡುವ ಮೂಲಕ ಹೊಸ ಬದುಕು ಪ್ರಾರಂಭಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದರು.

ಅರಣ್ಯ ಇಲಾಖೆ ಕೆಲವೊಂದು ಪ್ಯಾಕೇಜ್ ಘೋಷಿಸಿ ಗಿರಿಜನರನ್ನು ನಾಗರಹೊಳೆ ಅರಣ್ಯ ದಿಂದ 1992ರಲ್ಲಿ ಕರೆತಂದು ಪುನರ್ವಸತಿ ಕಲ್ಪಿಸಿ ಕೆಲವೊಂದು ತಾಂತ್ರಿಕ ತೊಂದರೆ ಯಿಂದ ಗಿರಿಜನರಿಗೆ ಈವರೆವಿಗೂ ಭೂ ಒಡೆತನ ನೀಡಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಅವರು 25 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿದರು. ಈ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದ ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಬಿ.ಪ್ರಭು ಅವರ ಕೊಡುಗೆ ಅವಿಸ್ಮರಣೀಯ ಎಂದರು.

ನಾಗಪುರ ಪುನರ್ವಸತಿ ಕೇಂದ್ರಕ್ಕೆ ಒಟ್ಟು 280 ಕುಟುಂಬಗಳು ಸ್ಥಳಾಂತರಗೊಂಡಿದ್ದು, ಕಳೆದ 25 ವರ್ಷಗಳಲ್ಲಿ 14 ಕುಟುಂಬದ ಸದಸ್ಯರು ಮೃತಪಟ್ಟಿದ್ದಾರೆ ವಾರಸುದಾರರು ಇಲ್ಲದ ಕಾರಣ ಅವರಿಗೆ ಮಂಜೂರಾದ ಭೂಮಿ ಸರ್ಕಾರದ ವಶದಲ್ಲೇ ಇದೆ ಎಂದರು.

ನಾನು ಹಿಂದೆ ಸಂಸದರಾಗಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಹುಣಸೂರು ಕ್ಷೇತ್ರದ ಗಿರಿಜನರ ಅಭಿವೃದ್ಧಿಗಾಗಿ 28 ಕೋಟಿ ರೂ. ಹಣವನ್ನು ಸಿ.ಸಿ.ಡಿ. ಯೋಜನೆಯಡಿ ಮಂಜೂರು ಮಾಡಿಸಲಾಗಿತ್ತು. ಅದನ್ನು ಶಾಸಕರು ಸಮರ್ಪಕವಾಗಿ ಬಳಸದೆ ವ್ಯರ್ಥವಾಯಿತು ಎಂದು ವಿಷಾದಿಸಿದರು.

ಸರ್ಕಾರ ನೀಡಿರುವ ಭೂಮಿಯನ್ನು ಬೇರಾರಿಗೂ ಪರಭಾರೆ ಮಾಡುವ ಹಕ್ಕು ಗಿರಿಜನರಿಗಿಲ್ಲ. ಭೂಮಿ ಒಡೆತನವಿದ್ದರೂ ಪಿ.ಟಿ.ಸಿ.ಎಲ್ ಕಾಯಿದೆ ಅನ್ವಯ ಗಿರಿಜನರು ಭೂಮಿ ಮಾರಾಟ ಮಾಡುವಂತಿಲ್ಲ ಹಾಗೂ ಖಾಸಗಿ ವ್ಯಕ್ತಿಗಳು ಖರೀದಿಸಿದರೆ ಈ ಕಾಯ್ದೆ ಅಡಿಯಲ್ಲಿ ಭೂಮಿಯನ್ನು ಸರ್ಕಾರ ಮುಟ್ಟು ಗೋಲು ಹಾಕಿಕೊಳ್ಳುವ ಅವಕಾಶ ಇದೆ ಎಂದು ಎಚ್ಚರಿಸಿದರು.
ಮೊದಲಿಗೆ ಎಂ.ಬಿ.ಪ್ರಭು ಪ್ರಾಸ್ತಾವಿಕ ನುಡಿ ಯಾಡಿದರೆ ತಹಸೀಲ್ದಾರ್ ಮೋಹನ್ ಸ್ವಾಗತಿಸಿದರು, ವೇದಿಕೆಯಲ್ಲಿ ತಾ.ಪಂ ಉಪಾಧ್ಯಕ್ಷ ಪ್ರೇಮ್‍ಕುಮಾರ್, ಸದಸ್ಯೆ ಮಂಜುಳಾ ರಾಜೇಗೌಡ, ಜಿ.ಪಂ ಸದಸ್ಯ ಕಟ್ಟನಾಯಕ, ದೊಡ್ದಹೆಜ್ಜೂರು ಗ್ರಾ.ಪಂ ಅಧ್ಯಕ್ಷೆ ಮಹದೇವಿ, ಗುರುಪುರ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್, ಅಣ್ಣಯ್ಯ ನಾಯಕ, ಜೆ.ಡಿಎಸ್. ಅಧ್ಯಕ್ಷ ಮಾದೇಗೌಡ, ಲ್ಯಾಂಪ್ಸ್ ಮಹಾ ಮಂಡಲದ ಅಧ್ಯಕ್ಷ ಎಂ.ಕೃಷ್ಣಯ್ಯ, ಆರ್.ಸ್ವಾಮಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್, ಗಿರಿಜನ ತಾಲೂಕು ಅಧಿಕಾರಿ ಹೊನ್ನೇಗೌಡ ಸೇರಿದಂತೆ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ಸಮುದಾಯ ಸೇವೆಗಳಿಗೆ 419 ಎಕರೆ: ಅರಣ್ಯ ಭೂಮಿ ಕಂದಾಯ ಇಲಾಖೆಗೆ ಹಸ್ತಾಂತರಗೊಂಡಿದ್ದು ಪೆÇೀಡು ಮತ್ತು ಪಹಣಿ ಕೆಲಸ ಮಾಡಲಾಗಿದೆ. ಫಲಾನು ಭವಿಗಳಿಗೆ 730 ಹೆಕ್ಟೇರ್ ಪ್ರದೇಶದಲ್ಲಿ ತಲಾ 5 ಎಕರೆ ಭೂಮಿ ನೀಡುವ ಉದ್ದೇಶ ದಿಂದ 6 ಬ್ಲಾಕ್ ಮಾಡಲಾಗಿದ್ದು 1 ರಿಂದ 5 ಬ್ಲಾಕ್‍ವರೆಗೆ ಫಲಾನುಭವಿಗಳಿಗೆ ತಲಾ 5 ಎಕರೆ ಕೃಷಿ ಭೂಮಿ ಬ್ಲಾಕ್ 6ರ ಫಲಾನು ಭವಿಗಳಿಗೆ ತಲಾ 3 ಎಕರೆ ಭೂಮಿ ನೀಡಲಾಗಿದೆ. 419 ಎಕರೆ ಭೂಮಿಯನ್ನು ಸಮುದಾಯ ಸೇವೆಗಳಿಗೆ ಮೀಸಲಿಡಲಾಗಿದೆ. ಜನಸಂಖ್ಯೆ ಅನುಗುಣವಾಗಿ 20 ಗುಂಟೆ ಭೂಮಿಯನ್ನು ಸ್ಮಶಾನಕ್ಕಾಗಿ ಬ್ಲಾಕ್‍ಗಳಲ್ಲಿ ಗುರುತಿಸಲಾಗಿದೆ. ಅರಣ್ಯದಿಂದ ಹೊರ ಬಂದು ಸರಿಯಾದ ದಾಖಲಾತಿ ಒದಗಿಸದ 14 ಕುಟುಂಬಗಳಿಗೆ ಮಂಜೂರಾಗಿರುವ ಭೂಮಿ ಸರ್ಕಾರದ ವಶದಲ್ಲಿದೆ. ಮುಂದೆ ಈ ಕುಟುಂಬಗಳ ವಾರಸುದಾರರೂ ಸೂಕ್ತ ದಾಖಲಾತಿ ಗಳೊಂದಿಗೆ ಬಂದಲ್ಲಿ ಭೂಮಿ ನೀಡಲಾಗು ವುದು ಎಂದು ಉಪವಿಭಾಗಾಧಿಕಾರಿ ಕೆ.ನಿತೀಶ್ ತಿಳಿಸಿದರು.

ಸ್ವಂತಭೂಮಿಯ ಕನಸು ಬಿಟ್ಟಿದ್ದೆವು: 25 ವರ್ಷಗಳ ಹಿಂದೆ ನಾಗರಹೊಳೆ ಅರಣ್ಯದ ಮಡಿನೂರು ಹಾಡಿಯಿಂದ ಹೊರಬಂದ ನಾವು ಕೃಷಿ ಭೂಮಿ ಒಡೆಯರಾಗುತ್ತೇವೆ ಎಂಬ ಕನಸು ಕೈ ಬಿಟ್ಟಿದ್ದೆವು ಭಾರತೀಯ ಗಿರಿಜನ ಸಂಸ್ಥೆ ನೇತೃತ್ವದಲ್ಲಿ ನಿರಂತರ ಹೋರಾಡಿದ ಫಲವಾಗಿ ಇಂದು ನಾವು ಭೂ ಒಡೆಯರಾಗಿದ್ದೇವೆ ಎಂದು ಫಲಾನುಭವಿ ಅಣ್ಣಯ್ಯ ನಿಟ್ಟುಸಿರು ಬಿಟ್ಟರು.

ಮಕ್ಕಳ ಕಾಲಕ್ಕಾದರೂ ಭೂಮಿ ಸಿಕ್ಕಿತಲ್ಲ: ಕಾಡಿನಿಂದ ಹೊರ ಬಂದಾಗ ದುಡಿದು ತಿನ್ನುವ ಶಕ್ತಿ ನಮ್ಮಲ್ಲಿತ್ತು. ಆದರೆ ಈಗ ವಯಸ್ಸಾಗಿದೆ. ನನ್ನ ಪತಿ ಮೃತ್ತಪಟ್ಟಿ ದ್ದಾರೆ ಮೂವರು ಪುತ್ರರಿದ್ದಾರೆ. ಅವರ ಕಾಲಕ್ಕಾದರೂ ಭೂಮಿ ಸಿಕ್ಕಿತಲ್ಲ ಎಂಬ ಖುಷಿ ನಮ್ಮಲಿದೆ ಎಂದು ಫಲಾನುಭವಿ ಶ್ರೀಮತಿ ಲಕ್ಷ್ಮಿ ಸಂತಸದಿಂದ ಹೇಳಿದರು.

ಅಪೇಕ್ಷೆ ಇಲ್ಲದೇ ನಡೆಸಿದ ಹೋರಾಟದ ಫಲ: ಭಾರತೀಯ ಗಿರಿಜನ ಸಂಸ್ಥೆ ಯಾವುದೇ ಅಪೇಕ್ಷೆ ಇಲ್ಲದೆ ನಾಗಪುರ ಗಿರಿಜನರ ಹಿತರಕ್ಷಣೆಗೆ ಕೆಲಸ ನಿರ್ವಹಿಸಿದೆ. 25 ವರ್ಷ ನಿರಂತರ ಹೋರಾಟದ ಫಲ ವಾಗಿ ಗಿರಿಜನರಿಗೆ ಕೃಷಿ ಭೂಮಿಯ ಹಕ್ಕು ಕೋಡಿಸುವಲ್ಲಿ ನಮ್ಮ ಪ್ರಯತ್ನ ಸಫಲವಾಗಿದೆ ಎಂದು ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಬಿ.ಪ್ರಭು ತಿಳಿಸಿದರು.

Translate »