ಮೈಸೂರು ವಿವಿ ಆಡಳಿತಾತ್ಮಕ ವಿಷಯದಲ್ಲಿ ಹಸ್ತಕ್ಷೇಪ ಆರೋಪ: ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ ವಿರುದ್ಧ ಕೇಸು ದಾಖಲು
ಮೈಸೂರು

ಮೈಸೂರು ವಿವಿ ಆಡಳಿತಾತ್ಮಕ ವಿಷಯದಲ್ಲಿ ಹಸ್ತಕ್ಷೇಪ ಆರೋಪ: ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ ವಿರುದ್ಧ ಕೇಸು ದಾಖಲು

August 18, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರು, ಸಂಶೋಧನಾ ವಿದ್ಯಾರ್ಥಿ ವಿರುದ್ಧ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ಮಾನಸ ಗಂಗೋತ್ರಿ ಸ್ನಾತಕೋತ್ತರ ಪುರುಷರ ವಿದ್ಯಾರ್ಥಿನಿಲಯದಲ್ಲಿ ಅನಧಿಕೃತವಾಗಿ ವಾಸವಿರುವ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ, ಮೈಸೂರು ವಿವಿ ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಲ್ಲದೆ ಸಂಸ್ಥೆ ವಿರುದ್ಧ ವಿದ್ಯಾರ್ಥಿಗಳನ್ನು ಪ್ರಚೋದಿಸಿ, ಕ್ಯಾಂಪಸ್‍ನಲ್ಲಿ ಉನ್ನತ ಅಧಿಕಾರಿಗಳಿಗೆ ಘೇರಾವ್ ಹಾಕಿಸುವುದು ಹಾಗೂ ಮುಷ್ಕರ ಮಾಡಿಸುತ್ತಿದ್ದಾರೆ ಎಂದು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ.ಪ್ರವೀಣ್, ಆ.16ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಜು.18ರಂದು ಮಧ್ಯಾಹ್ನ ತಮ್ಮ ಕಚೇರಿಗೆ ಬಂದ ಮಹೇಶ್ ಸೋಸಲೆ, ಏಕವಚನ ಪ್ರಯೋಗ ಮಾಡಿ, ಅನುಚಿತವಾಗಿ ವರ್ತಿಸಿದ್ದಲ್ಲದೆ, ಆಡಳಿತಾತ್ಮಕ ವಿಚಾರವಾಗಿ ಗಲಾಟೆ ಮಾಡಿದ್ದಾರೆ. ಈ ಸಂಬಂಧ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ತಡವಾಗಿ ದೂರು ದಾಖಲಿಸಿರುವುದಾಗಿ ಡಾ.ಪ್ರವೀಣ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Translate »