ಮೈಸೂರಿನ ಯೋಗಾನರಸಿಂಹಸ್ವಾಮಿ 22ನೇ ವರ್ಷದ ಕುಂಭಾಭಿಷೇಕ
ಮೈಸೂರು

ಮೈಸೂರಿನ ಯೋಗಾನರಸಿಂಹಸ್ವಾಮಿ 22ನೇ ವರ್ಷದ ಕುಂಭಾಭಿಷೇಕ

May 22, 2019
  • ವಿವಿಧ ಸಾಂಸ್ಕøತಿಕ, ಆಧ್ಯಾತ್ಮಿಕ ಕಾರ್ಯಕ್ರಮ
  • 27ರಂದು ಸಿಎಂ ಸ್ವ ಹಸ್ತದಿಂದ ಮಹಾಸುದರ್ಶನ ಯಾಗದ ಪೂರ್ಣಾಹುತಿ

ಮೈಸೂರು: ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ 22ನೇ ವರ್ಷದ ಕುಂಭಾಭಿಷೇಕ ಕಾರ್ಯಕ್ರಮಗಳು ಮೇ 25ರಿಂದ 27ರವರೆಗೆ ನಡೆಯಲಿದೆ.

ಇದರ ಅಂಗವಾಗಿ ಮೇ 25ರಂದು ಬೆಳಿಗ್ಗೆ 8ಕ್ಕೆ ದೇವರಿಗೆ ಅಭಿಷೇಕ ಮತ್ತು ಲಕ್ಷಾರ್ಚನೆ. 26ರಂದು ಬೆಳಿಗ್ಗೆ 8ಕ್ಕೆ ಸಹಸ್ರ ಕ್ಷೀರಾಭಿಷೇಕ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎಸ್.ಶ್ರೀನಿವಾಸನ್ ತಿಳಿಸಿದ್ದಾರೆ.

ಮೇ 27ರಂದು ಬೆಳಿಗ್ಗೆ 8 ಗಂಟೆಗೆ ಲೋಕಕಲ್ಯಾಣಾರ್ಥವಾಗಿ ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಮಹಾಸುದರ್ಶನ ಯಾಗ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ವಹಸ್ತದಿಂದ ಮಹಾಸುದರ್ಶನ ಯಾಗದ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12.30 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕುಂಭಾಭಿಷೇಕ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಸಂಜೆ 6 ಗಂಟೆಗೆ ಸಾಂಸ್ಕøತಿಕ, ಭರತನಾಟ್ಯ,ಸಂಗೀತ, ಭಜನೆ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಮೇ 25ರಂದು ಖ್ಯಾತ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಕಲೈಮಾಮಣಿ ಕದ್ರಿ ಗೋಪಾಲನಾಥ್‍ರಿಂದ ಸ್ಯಾಕ್ಸೋಫೋನ್ ಸಂಗೀತ ಕಾರ್ಯಕ್ರಮ. 26ರಂದು ವಿದ್ವಾನ್ ಶಶಿಧರ ಕೋಟೆ ಅವರಿಂದ ಭಕ್ತಿ ಗಾನ ಸುಧೆ ಸಂಗೀತ ಕಾರ್ಯಕ್ರಮ, 27ರಂದು ಸಂಗೀತ ವಿದ್ಯಾನಿಧಿ ವಿದ್ವಾನ್ ಡಾ.ವಿದ್ಯಾಭೂಷಣ ಅವರಿಂದ ಹರಿದಾಸ ವಾಣಿ, ಭಕ್ತಿರಸ ಗಾಯನ ಕಾರ್ಯಕ್ರಮವಿದೆ. ಅಲ್ಲದೆ ಅಧ್ಯಾತ್ಮಿಕತೆ ದೃಷ್ಟಿಯಿಂದ 25ರಿಂದ 27ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮೈಸೂರಿನ ಎಲ್ಲಾ ಮಹಿಳಾ ಸಂಘದವರಿಂದ ಭಜನಾ ಕಾರ್ಯಕ್ರಮವೂ ಇರುತ್ತದೆ ಎಂದು ತಿಳಿಸಿದ್ದಾರೆ.

Translate »