17 ಕೋರ್ಸುಗಳಿಗೆ 30,000 ವಿದ್ಯಾರ್ಥಿಗಳ ಪ್ರವೇಶ ನಿರೀಕ್ಷೆ: ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ವಿಶ್ವಾಸ
ಮೈಸೂರು

17 ಕೋರ್ಸುಗಳಿಗೆ 30,000 ವಿದ್ಯಾರ್ಥಿಗಳ ಪ್ರವೇಶ ನಿರೀಕ್ಷೆ: ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ವಿಶ್ವಾಸ

September 9, 2018

ಮೈಸೂರು: ಅನುಮತಿ ದೊರೆತಿರುವ 17 ಕೋರ್ಸುಗಳಿಗೆ ಈ ಶೈಕ್ಷಣಿಕ ಸಾಲಿನಲ್ಲಿ 30,000 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 27ರಿಂದ ಪ್ರವೇಶಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅಕ್ಟೋಬರ್ 1ರವರೆಗೆ ಅವಕಾಶವಿರುವುದರಿಂದ ಈಗಾಗಲೇ ರಾಜ್ಯಾದ್ಯಂತ ಇರುವ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳಿಗೆ ಅರ್ಜಿಗಳು ಬರುತ್ತಿವೆ. ವಿಚಾರಣೆಗಳೂ ಹೆಚ್ಚಾಗಿದ್ದು, ಈ ಬಾರಿ ಎಲ್ಲಾ 17 ಕೋರ್ಸುಗಳಿಗೆ 30 ಸಾವಿರ ಮಂದಿ ಪ್ರವೇಶ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ವರ್ಷಕ್ಕೆ 60ರಿಂದ 65 ಸಾವಿರ ಮಂದಿ ಪ್ರವೇಶ ಪಡೆಯುತ್ತಿದ್ದರು. ಈ ಮಧ್ಯೆ ಯುಜಿಸಿ ಮಾನ್ಯತೆ ರದ್ದುಪಡಿಸಿದ ಕಾರಣ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಬರುತ್ತಿಲ್ಲವಾದರೂ, ಇನ್ನೂ 20 ದಿನಗಳ ಕಾಲಾವಕಾಶವಿರುವುದರಿಂದ ಪ್ರವೇಶಾತಿ ಆಗಲಿದೆ ಎಂದು ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಉಳಿದ 15 ಕೋರ್ಸುಗಳಿಗೂ ಅನುಮತಿ ಕೋರಿ ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 12ರೊಳಗಾಗಿ ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿಕೊಳ್ಳುತ್ತೇವೆ ಎಂದ ಅವರು, ಅದಕ್ಕಾಗಿ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಪ್ರೊ. ಶಿವಲಿಂಗಯ್ಯ ತಿಳಿಸಿದರು.

Translate »