ಶಾಸಕ ರಾಮದಾಸರ ‘ಜನಸ್ಪಂದನಾ ಕಚೇರಿ’ ಉದ್ಘಾಟನೆ: ಕೆ.ಆರ್. ಕ್ಷೇತ್ರ ಮಾದರಿ ಮಾಡುವ ಉದ್ದೇಶ
ಮೈಸೂರು

ಶಾಸಕ ರಾಮದಾಸರ ‘ಜನಸ್ಪಂದನಾ ಕಚೇರಿ’ ಉದ್ಘಾಟನೆ: ಕೆ.ಆರ್. ಕ್ಷೇತ್ರ ಮಾದರಿ ಮಾಡುವ ಉದ್ದೇಶ

September 9, 2018

ಮೈಸೂರು:  ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಕಾಡಾ ಕಚೇರಿ ಸಂಕೀರ್ಣದಲ್ಲಿ ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರ `ಜನಸ್ಪಂದನಾ ಕಚೇರಿ (ಶಾಸಕರ ಕಚೇರಿ)’ ಶನಿವಾರ ಉದ್ಘಾಟನೆಗೊಂಡಿತು. ತಳಿರು-ತೋರಣ ಹಾಗೂ ಹೂವಿನಿಂದ ಶೃಂಗರಿಸಿದ್ದ `ಜನಸ್ಪಂದನಾ ಕಚೇರಿ’ಯನ್ನು ಬಿಜೆಪಿ ಹಿರಿಯ ಮುಖಂಡರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಉದ್ಘಾಟಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹಾಗೂ ಮಾಜಿ ಸಚಿವರೂ ಆದ ಎಸ್.ಎ.ರಾಮದಾಸ್, ಎಲ್ಲಾ ಇಲಾಖೆಗಳ ನಿರಂತರ ಸಂಪರ್ಕಕ್ಕೆ ಕಚೇರಿ ವ್ಯವಸ್ಥೆಯಿಂದ ಅನುಕೂಲವಾಗಲಿದೆ. ಕೆಆರ್ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಉದ್ದೇಶ ಹೊಂದಿದ್ದು, ಅದಕ್ಕೆ ಪೂರಕವಾಗಿ ಕಚೇರಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಚೇರಿಗೆ ಜನಸಾಮಾನ್ಯರು ತಮ್ಮ ಕುಂದು-ಕೊರತೆ ಸಂಬಂಧ ಮನವಿ ಸಲ್ಲಿಸಬಹುದು. ಖುದ್ದು ಭೇಟಿಯಾಗಿಯೂ ದೂರು ಸಲ್ಲಿಸಬಹುದು. ನನ್ನ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಪಕ್ಷದವರು ಮಾತ್ರವಲ್ಲದೆ, ಬೇರೆ ಪಕ್ಷಗಳ ಪಾಲಿಕೆ ಸದಸ್ಯರು ಕೂಡ ತಮ್ಮ ತಮ್ಮ ವಾರ್ಡ್‍ಗಳ ಅಭಿವೃದ್ಧಿಗೆ ಪೂರಕವಾಗುವಂತೆ ಕಚೇರಿ ಬಳಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದರು.
ಬೆಳಿಗ್ಗೆ 9ರಿಂದ ರಾತ್ರಿ 7ರವರೆಗೆ ಕಚೇರಿ ತೆರೆದಿರಲಿದ್ದು, ಅಗತ್ಯವಿದ್ದ ಸಂದರ್ಭದಲ್ಲಿ ರಾತ್ರಿ 12ರವರೆಗೂ ಕಚೇರಿ ಕಾರ್ಯಚಟುವಟಿಕೆ ನಡೆಸಲಿದೆ. ಇಲ್ಲಿ ಸಮಯ ಹಾಗೂ ವಾರದ ಪ್ರಶ್ನೆ ಇಲ್ಲ. ಅಭಿವೃದ್ದಿ ಮತ್ತು ಜನಸಾಮಾನ್ಯರ ಸಮಸ್ಯೆಗಳ ನಿವಾರಣೆಯೇ ಮುಖ್ಯ. ಈ ನಿಟ್ಟಿನಲ್ಲಿ ಕಚೇರಿ ಕಾರ್ಯ ಚುಟುವಟಿಕೆಗಳು ರೂಪುಗೊಳ್ಳಲಿವೆ ಎಂದು ನುಡಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಮತ್ತಿತರರು ಹಾಜರಿದ್ದರು.

ಕುಸಿದು ಬಿದ್ದರೆ, ಸರ್ಕಾರ ರಚನೆಗೆ ನಾವು ಸಿದ್ಧ : ರಾಮದಾಸ್
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸ್ಥಿರ ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಲಿ ಎಂದು ರಾಜ್ಯದ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವಾಗಿ ತೀರ್ಪು ನೀಡಿದರು. ಆದರೆ ಜೆಡಿಎಸ್-ಕಾಂಗ್ರೆಸ್ ಅಕ್ರಮಕೂಟ ರಚಿಸಿಕೊಂಡು ಆಡಳಿತದ ಚುಕ್ಕಾಣಿ ಹಿಡಿದವು. ಸರ್ಕಾರವನ್ನು ಉರುಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ. ಅದಾಗಿಯೇ ಕುಸಿದು ಬಿದ್ದರೆ, ಪಕ್ಷದ ರಾಜ್ಯಾಧ್ಯಕ್ಷರೂ ಆದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಗೆ ಪಕ್ಷ ಸಿದ್ಧವಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಪಕ್ಷ ಸನ್ನದ್ಧವಾಗಿದೆ.
ಎಸ್.ಎ.ರಾಮದಾಸ್, ಮಾಜಿ ಸಚಿವರು ಹಾಗೂ ಶಾಸಕರು.

Translate »