ಮೈಸೂರು: ಕನಿಷ್ಠ ಕೂಲಿ ಮತ್ತಿತರ ಬೇಡಿಕೆ ಈಡೇರಿಸುವಂತೆ ಮೈಸೂರು ವಿವಿ ಮಹಿಳಾ ಪೌರಕಾರ್ಮಿಕರ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿರಿಸಿದ್ದರೂ ವಿವಿಯ ಆಡಳಿತ ಮಂಡಳಿ ಹಾಗೂ ಉನ್ನತ ಶಿಕ್ಷಣ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರೂ ಆದ ಮಾಜಿ ಮೇಯರ್ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರೇ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಈ ಪ್ರತಿಭಟನೆಯನ್ನು ಕಡೆಗಣಿಸಿದ್ದು, 5 ದಿನಗಳು ಕಳೆದರೂ ಕೊನೆ ಪಕ್ಷ ಕಾರ್ಮಿಕರ ಬೇಡಿಕೆಯನ್ನು ಆಲಿಸುವ ವ್ಯವದಾನವನ್ನು ತೋರಿಲ್ಲ ಎಂದು ದೂರಿದರು.
ಕಾರ್ಮಿಕರಿಗೆ ಇಪಿಎಫ್ ಹಾಗೂ ಆರೋಗ್ಯ ವಿಮಾ ಸೌಲಭ್ಯ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ವಿವಿಯ ಆಡಳಿತ ಮಂಡಳಿ ಶೀಘ್ರವೇ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪೌರ ಕಾರ್ಮಿಕರ ವಿವಿಧ ಸಂಘಟನೆಗಳ ಮುಖಂಡರಾದ ಆಲಗೂಡು ಶಿವಕುಮಾರ್, ಪಳನಿಸ್ವಾಮಿ, ಶಿವಣ್ಣ, ಎನ್.ಮಾರ, ಡಿಎಸ್‍ಎಸ್ ಮುಖಂಡ ಶಂಭುಲಿಂಗಸ್ವಾಮಿ ಗೋಷ್ಠಿಯಲ್ಲಿದ್ದರು.