ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ನಾಳಿನ ಬಂದ್ ಬೆಂಬಲಿಸಲು ಶಾಸಕ ತನ್ವೀರ್ ಮನವಿ
ಮೈಸೂರು

ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ನಾಳಿನ ಬಂದ್ ಬೆಂಬಲಿಸಲು ಶಾಸಕ ತನ್ವೀರ್ ಮನವಿ

September 9, 2018

ಮೈಸೂರು: ಕೇಂದ್ರ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ ದೇಶದ ಜನತೆಯ ದನಿಯಾಗಲು ಕಾಂಗ್ರೆಸ್ ಪಕ್ಷವು ಸೆ.10ರಂದು ಭಾರತ್ ಬಂದ್‍ಗೆ ಕರೆ ನೀಡಿದೆ ಎಂದು ಶಾಸಕರೂ ಆದ ಮಾಜಿ ಸಚಿವ ತನ್ವೀರ್ ಸೇಠ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಅವೈಜ್ಞಾನಿಕ ನಿಲುವುಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರಿದ್ದು, ಪರಿಣಾಮ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳಗೊಂಡು ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ದಿನೇ ದಿನೆ ತೈಲ ಬೆಲೆ ಏರಿಕೆಯಾಗುತ್ತಿದ್ದು, ಇದರಿಂದ ಜನ ತತ್ತರಿಸಿದ್ದರೂ ಕೇಂದ್ರ ಸರ್ಕಾರ ಮಾತ್ರ ಕಣ್ಮುಚಿ ಕುಳಿತಿದೆ ಎಂದು ಕಿಡಿಕಾರಿದರು.

ಕೇಂದ್ರ ಬಿಜೆಪಿ ಸರ್ಕಾರ ಖಾಸಗಿ ತೈಲ ಕಂಪನಿಗಳ ಹಿತ ಕಾಯುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ದುಬಾರಿ ಬೆಲೆ ಕೊಟ್ಟು ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಮೋದಿ ಸರ್ಕಾರ ದೇಶದಲ್ಲಿ ಉತ್ಪಾದನೆಯಾಗುವ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಅಗ್ಗದ ಬೆಲೆಗಳಲ್ಲಿ ವಿದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ಆರೋಪಿಸಿದರು.

ಬಂದ್‍ಗೆ ಸಂಬಂಧಿಸಿದಂತೆ ಬೆಂಬಲ ಕೋರಿ ಕನ್ನಡಪರ ಸಂಘಟನೆಗಳು, ಆಟೋ ಚಾಲಕರ ಸಂಘಗಳು, ಸರಕು ಸಾಗಣೆ ಲಾರಿ ಚಾಲಕರು ಹಾಗೂ ಮಾಲೀಕರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಮಾಲೋಚನೆ ನಡೆಸಲಾಗುವುದು. ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಬಂದ್‍ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

2014ರ ಮೇ 16ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ 1 ಬ್ಯಾರಲ್‍ಗೆ 107.09 ಡಾಲರ್ ಇತ್ತು. ಆದರೆ ಈಗ ಇದು 73 ಡಾಲರ್‍ಗೆ ಇಳಿಕೆಯಾಗಿದೆ. ಅಲ್ಲಿಗೆ ಶೇ.40ರಷ್ಟು ಬೆಲೆ ಕಡಿಮೆಯಾಗಿದ್ದು, ಹೀಗಿದ್ದರೂ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಲೇ ಇದೆ. ಕಳೆದ 52 ತಿಂಗಳಲ್ಲಿ ಸುಮಾರು 11 ಲಕ್ಷ ಕೋಟಿ ರೂ.ಗಳ ತೆರಿಗೆಯನ್ನು ಸಂಗ್ರಹಿಸಿರುವ ಮೋದಿ ಸರ್ಕಾರ, ಜನಸಾಮಾನ್ಯರನ್ನು ಜ್ವಲಂತ ಸಮಸ್ಯೆಗಳಿಗೆ ಸಿಲುಕಿಸಿದೆ ಎಂದು ದೂರಿದರು.

ಕೇಂದ್ರ ಬಿಜೆಪಿ ಸರ್ಕಾರದ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವಂತೆ ಮಾಡುತ್ತಿದ್ದು, ಈ ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿಯುವಂತಾಗಿದೆ. ಅಧಿಕ ಮುಖ ಬೆಲೆಯ ನೋಟು ಅಪಮೌಲೀಕರಣದಿಂದ ಸಾಮಾನ್ಯ ಜನರೇ ಸಮಸ್ಯೆಗಳನ್ನು ಎದುರಿಸುವಂತೆ ಆಯಿತು ಎಂದರು. ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

ಕಾಂಗ್ರೆಸ್‍ಗೆ ಮೇಯರ್ ಬೇಕು
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಡಳಿತ ಹಿಡಿಯುವ ಸಂಬಂಧ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದಲ್ಲಿ ಕಾಂಗ್ರೆಸ್‍ಗೇ ಮೇಯರ್ ಸ್ಥಾನ ನೀಡಬೇಕೆಂಬ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆಡಳಿತದಲ್ಲೂ ಹೊಂದಾಣಿಕೆ ಸಂಬಂಧ ಮಾತುಕತೆ ನಡೆಯುತ್ತಿದೆ. ಜೊತೆಗೆ ಮೇಯರ್ ಸ್ಥಾನ ಕಾಂಗ್ರೆಸ್‍ಗೆ ನೀಡುವಂತೆ ಮಾತುಕತೆ ನಡೆಸಲಾಗುತ್ತಿದೆ. ಆಡಳಿತ ಪಕ್ಷದ ಸದಸ್ಯನಾಗಿ ಸಚಿವನಾಗಬೇಕೆಂಬ ಬಯಕೆ ಇರುವುದು ಸಹಜ. ಆದರೆ ಅದು ತಾನಾಗಿಯೇ ಬರಬೇಕಾಗುತ್ತದೆ. ಅದೇ ನಿರೀಕ್ಷೆ ನನ್ನಲ್ಲೂ ಇದೆ ಎಂದು ನುಡಿದರು.

Translate »