ಜಮೀನಿನಲ್ಲಿ ಜೀತ ಮಾಡುತ್ತಿದ್ದ 15 ಕಾರ್ಮಿಕರಿಗೆ ಬಂಧ ಮುಕ್ತಿ
ಮೈಸೂರು

ಜಮೀನಿನಲ್ಲಿ ಜೀತ ಮಾಡುತ್ತಿದ್ದ 15 ಕಾರ್ಮಿಕರಿಗೆ ಬಂಧ ಮುಕ್ತಿ

September 9, 2018

ಪಿರಿಯಾಪಟ್ಟಣ ತಹಸೀಲ್ದಾರ್ ದಾಳಿ: ಒಬ್ಬನ ಬಂಧನ
ಬೈಲಕುಪ್ಪೆ:- ಕೆಲಸಕ್ಕೆಂದು ಕರೆದುಕೊಂಡು ಬಂದು, ಬಂಧನದ ವಾತಾವರಣದಲ್ಲಿ, ಹಿಂಸೆ ನೀಡುವ ಮೂಲಕ ಜಮೀನು ಕೆಲಸ ಮಾಡಿಸಲಾಗುತ್ತಿದ್ದ 15 ಮಂದಿ ಯನ್ನು ತಾಲೂಕು ಆಡಳಿತ ಬಂಧ ಮುಕ್ತಗೊಳಿಸಿದೆ.

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟಿಯನ್ 11ನೇ ಕ್ಯಾಂಪ್‍ನಲ್ಲಿ ಈ ಘಟನೆ ನಡೆದಿದ್ದು, ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರಿಗೆ ಸೇರಿದ್ದ 25 ಎಕರೆಗೂ ಅಧಿಕ ಜಮೀನನ್ನು ಅರಸೀಕೆರೆ ಮೂಲದ ಮೂವರು ವ್ಯಕ್ತಿಗಳು ಲೀಸ್‍ಗೆ ಪಡೆದು ಅದರಲ್ಲಿ ಶುಂಠಿ ಬೆಳೆ ಮಾಡು ತ್ತಿದ್ದರು. ಶುಂಠಿ ಬೆಳೆಗೆ ಕೆಲಸಕ್ಕಾಗಿ ಕೂಲಿ ಕಾರ್ಮಿಕ ರನ್ನು ಹುಬ್ಬಳ್ಳಿ, ಬಳ್ಳಾರಿ, ದಾವಣಗೆರೆ, ಮತ್ತಿತರ ಕಡೆ ಗಳಿಂದ ತೋಟದ ಕೆಲಸವಿದೆ. ದಿನಕ್ಕೆ 350 ರೂ. ಕೂಲಿ ನೀಡುತ್ತೇವೆ ಎಂದು ಪುಸಲಾಯಿಸಿ ಕರೆತಂದು ಕೂಲಿ ಹಣ ನೀಡದೇ ಹೊರಗೂ ಕಳುಹಿಸದೆ ಕೆಲಸ ಮಾಡಿಸಿಕೊಂಡು ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ಶುಕ್ರವಾರ ಸಂಜೆ ಸ್ಥಳಕ್ಕೆ ತಹಸೀಲ್ದಾರ್ ಜೆ.ಮಹೇಶ್ ಭೇಟಿ ನೀಡಿ, ವಿಚಾರಣೆ ನಡೆಸಿ 15 ಮಂದಿ ಕೂಲಿ ಕಾರ್ಮಿಕರನ್ನು ಬಂಧ ಮುಕ್ತ ಗೊಳಿಸಿದ್ದು, ಅವರಿಗೆ ಹುಣಸವಾಡಿ ಬಿಸಿಎಂ ಹಾಸ್ಟೆಲ್ ನಲ್ಲಿ ತಂಗುವ ವ್ಯವಸ್ಥೆ ಮಾಡಿದರು.
ಗದಗ ಜಿಲ್ಲೆಯ ರಘು, ಫಕೀರಪ್ಪ, ಚಂದ್ರಶೇಖರ್, ಯಲ್ಲಪ್ಪ, ಧಾರವಾಡದ ಮಹೇಂದ್ರ, ಮಹೇಶ್, ಲಕ್ಷ್ಮಣ, ರಾಜಯಚೂರು ಬಸವರಾಜ ಅಲಿಯಾಸ್ ಸಣ್ಣಬಸವ, ಹಾವೇರಿ ಜಿಲ್ಲೆ ಶಾಂತಪ್ಪ, ಕೊಪ್ಪಳದ ಹನುಮಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜಣ್ಣ ಅಲಿಯಾಸ್ ಸಿದ್ದೇಶ್, ಮಂಡ್ಯದ ಮಹಮ್ಮದ್ ಅಫ್ತಬ್, ದಾವಣ ಗೆರೆ ಜಿಲ್ಲೆಯ ಕರಿಬಸಪ್ಪ, ಅರ್ಜುನ್ ಅಲಿಯಾಸ್ ನಾಗಾರ್ಜುನ ಅವರನ್ನು ಬಂಧಮುಕ್ತ ಗೊಳಿಸಲಾಗಿದೆ.

ಎಸಿ ವಿಚಾರಣೆ: ಉಪವಿಭಾಗಾಧಿಕಾರಿ ಕೆ.ನಿತೀಶ್ ನೇತೃತ್ವದಲ್ಲಿ ಪ್ರತಿ ಕೂಲಿ ಕಾರ್ಮಿಕರನ್ನು ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಯೊಬ್ಬರು 2-5 ತಿಂಗಳವರೆಗೆ ಕೂಲಿ ಮಾಡಿದ್ದು, ಕೂಲಿಯ ಹಣ ನೀಡದೆ ಸರಿಯಾಗಿ ಊಟ ನೀಡದೆ ಹಲ್ಲೆ ನಡೆಸುತ್ತಿದ್ದರು ಮತ್ತು ಹೊರಗೆ ಹೋದರೆ ಕೊಂದು ಬಿಡುವುದಾಗಿ ಬೆದರಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಆರೋಪಿ ಬಂಧನ: ಪ್ರಕರಣದಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ಮೂಲದವರು ಎನ್ನಲಾದ ನಿರಂಜನ್, ಶಂಕರ್ ಮತ್ತು ಉಮೇಶ್ ಎಂಬುವವರು ಕೂಲಿ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದರು ಎಂದು ಆರೋಪಿ ಸಲಾಗಿದ್ದು, ಈ ಸಂಬಂಧ ಉಮೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಕಾರದ ನಿಯಮಾವಳಿಯ ಪ್ರಕಾರ ಜೀತ ಮುಕ್ತ 15 ಮಂದಿಗೆ ತಲಾ 20 ಸಾವಿರ ರೂ. ಪರಿಹಾರ ನೀಡಿ ಬಿಡುಗಡೆ ಪ್ರಮಾಣಪತ್ರ ವಿತರಿಸಿ, ಅವರ ಊರುಗಳಿಗೆ ಹಿಂತಿರುಗುವಂತೆ ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಕೆ.ನಿತೀಶ್ ತಿಳಿಸಿದರು.
ತಹಸೀಲ್ದಾರ್ ಜೆ.ಮಹೇಶ್, ವೃತ್ತನಿರೀಕ್ಷಕ ಹೆಚ್.ಎನ್.ಸಿದ್ದಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮೇಗೌಡ, ಆರ್.ಐಗಳಾದ ಸಿ.ಮಹೇಶ್, ಮಂಜು, ಕಾರ್ಮಿಕ ಇಲಾಖೆ ಅಧಿಕಾರಿ ಅರುಣ್ ಕುಮಾರ್, ಠಾಣಾಧಿಕಾರಿ ಪಿ.ಲೋಕೇಶ್, ಲೆಕ್ಕಾಧಿಕಾರಿ ಎನ್.ಕೆ.ಪ್ರದೀಪ್, ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »