ಬೈಲಕುಪ್ಪೆ: ಗ್ರಾಮದ ರಸ್ತೆಗೆ ವ್ಯಕ್ತಿ ಯೊಬ್ಬ ಅಕ್ರಮವಾಗಿ ಬೇಲಿ ಹಾಕಿರುವುದರಿಂದ ಮಾರ್ಗ ಬಂದ್ ಆಗಿದ್ದು, ಹೃದಯಾಘಾತವಾದ ವ್ಯಕ್ತಿಯೊಬ್ಬರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗದ ಕಾರಣ ಅವರು ಸಾವನ್ನಪ್ಪಿದರು ಎಂದು ಮೃತನ ಸಂಬಂಧಿಕರು ಕಣ್ಣೀರಿಟ್ಟು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮೀಪದ ನಾರಾಯಣಪುರ ಗ್ರಾಮದ ರಾಜ ನಾಯಕ ಎಂಬುವರ ಪುತ್ರ ತಮ್ಮಯ್ಯನಾಯಕ(80) ಹೃದಯಾಘಾತಕ್ಕೊಳಗಾಗಿ ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ಮೃತರಾದರು. ಅದೇ ಗ್ರಾಮದ ರಂಗನಾಯಕ ಎಂಬುವರ ಪುತ್ರ ದೇವನಾಯಕ ಅವರು ಸಂಚಾರ ಮಾರ್ಗಕ್ಕೆ ಅಕ್ರಮವಾಗಿ ಬೇಲಿ ಹಾಕಿದ್ದಾರೆ ಎಂದು ಮೃತನ ಬಂಧುಗಳು ಆರೋಪಿಸಿದ್ದಾರೆ.
ಕುಶಾಲನಗರ ಮತ್ತು ಬೆಟ್ಟದಪುರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬೆಣಗಾಲು ಗ್ರಾಮದಿಂದ ಕೇವಲ 1 ಕಿ.ಮೀ. ದೂರವಿರುವ ನಾರಾಯಣ ಪುರಕ್ಕೆ ಬಹಳ ವರ್ಷಗಳಿಂದಲೂ ಸಂಪರ್ಕ ರಸ್ತೆ ಇತ್ತು. ಆದರೆ ಕಳೆದ 6 ವರ್ಷಗಳಿಂದ ದೇವನಾಯಕನ ಕುಟುಂಬದವರು ಈ ರಸ್ತೆಗೆ ಅಕ್ರಮ ವಾಗಿ ಬೇಲಿ ಹಾಕಿದ್ದಾರೆ. ಇದರಿಂದ ರೋಗಿಗಳು, ವೃದ್ದರು, ಗರ್ಭಿಣಿಯರು ಆಸ್ಪತ್ರೆಗೆ ತೆರಳಬೇಕೆಂದರೆ, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಬೇಕೆಂದರೆ ರಸ್ತೆಯಿಲ್ಲದೆ ಭಾರೀ ತೊಂದರೆ ಅನುಭವಿಸುವಂತಾಗಿದೆ ಎಂದು ಮೃತ ತಮ್ಮಯ್ಯನಾಯಕ ಅವರ ಮೊಮ್ಮಗ, ಗ್ರಾಮದಲ್ಲಿನ ವಾಲ್ಮೀಕಿ ಸಂಘದ ಅಧ್ಯಕ್ಷರೂ ಆದ ಮಂಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಣಗಾಲು ಗ್ರಾಮದಲ್ಲಿನ ಬಹಳಷ್ಟು ಜನರಿಗೆ ನಾರಾಯಣಪುರದಲ್ಲಿ ಜಮೀನಿದೆ. ನಿತ್ಯವೂ ಹೊಲದ ಕೆಲಸಕ್ಕೆ ಇಲ್ಲಿಗೆ ಬರಲು ರಸ್ತೆಯಿಲ್ಲದೆ ಕಷ್ಟ ಅನುಭವಿ ಸುತ್ತಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಮತ್ತು ಹುಣ ಸೂರು ಉಪ ವಿಭಾಗಾಧಿಕಾರಿಗೆ ದೂರು ನೀಡಿದ್ದೆವು. ಅವರು, ಸ್ಥಳ ಪರಿಶೀಲನೆ ನಡೆಸಿ ಅಕ್ರಮವಾಗಿ ಬೇಲಿ ಹಾಕಿದ್ದರೆ ಕೂಡಲೇ ತೆರವುಗೊಳಿಸಿ ಎಂದು ಆದೇಶಿಸಿದ್ದಾರೆ. ಆದರೆ, ಸ್ಥಳೀಯ ಅಧಿಕಾರಿಗಳು ಮೇಲಧಿಕಾರಿಗಳ ಆದೇಶವನ್ನೇ ಲೆಕ್ಕಿಸುತ್ತಿಲ್ಲ. ಬೇಲಿ ತೆರವುಗೊಳಿಸಲು ಬೇಕೆಂದೇ ವಿಳಂಬ ಮಾಡುತ್ತಿದ್ದಾರೆ ಎಂದು ವಾಲ್ಮೀಕಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ರವಿನಾಯಕ್ ಕಿಡಿಕಾರಿದ್ದಾರೆ.
ಬೆಣಗಾಲುವಿನಲ್ಲಿ ಸಾವು ಸಂಭವಿಸಿದರೆ ಅಂತ್ಯ ಸಂಸ್ಕಾರಕ್ಕೆ ನಾರಾಯಣಪುರಕ್ಕೇ ತರಬೇಕಿದೆ. ಆದರೆ ಅಲ್ಲಿಗೆ ತೆರಳಬೇಕಾದರೆ ಆನಂದನಗರ ಮಾರ್ಗವಾಗಿ 6-7 ಕಿ.ಮೀ. ಬಳಸಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. 30ಕ್ಕೂ ಹೆಚ್ಚು ಕುಟುಂಬಗಳಿರುವ ನಾರಾಯಣಪುರದಲ್ಲಿ ಇದು ದರಖಾಸ್ತು ಜಮೀನಾಗಿದೆ. ಅದರಲ್ಲೇ ರಸ್ತೆ ಇತ್ತು. ಆದರೆ, ಆ ರಸ್ತೆಗೇ ಅಕ್ರಮವಾಗಿ ಬೇಲಿ ಹಾಕಲಾಗಿದೆ. ಇಲಾಖೆ ಅಧಿಕಾರಿಗಳು ಕೂಡಲೇ ಅಕ್ರಮ ಬೇಲಿ ತೆರವುಗೊಳಿಸಿ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ರವಿನಾಯಕ್ ಮನವಿ ಮಾಡಿದ್ದಾರೆ.