ಸಿಗರೇಟ್ ಖರೀದಿ ನೆಪದಲ್ಲಿ   ಮಹಿಳೆ ಸರ ಅಪಹರಣ
ಮೈಸೂರು

ಸಿಗರೇಟ್ ಖರೀದಿ ನೆಪದಲ್ಲಿ ಮಹಿಳೆ ಸರ ಅಪಹರಣ

January 5, 2019

ಮೈಸೂರು: ಸಿಗರೇಟ್ ಕೊಳ್ಳುವ ನೆಪದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಖತರ್ನಾಕ್ ಖದೀಮರು, ಅಂಗಡಿಯಲ್ಲಿದ್ದ ಮಹಿಳೆಯ ಕತ್ತಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹಂಚ್ಯಾಸಾತಗಳ್ಳಿ ಬಿ.ವಲಯದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಇಲ್ಲಿನ ನಿವಾಸಿ ಭಾರತಿ(28) ಸರ ಕಳೆದುಕೊಂಡವರು. ಹಂಚ್ಯಾಸಾತಗಳ್ಳಿ ಬಿ.ವಲಯದ 9ನೇ ಕ್ರಾಸ್‍ನಲ್ಲಿ ಭಾರತಿ ಎಂಬುವರಿಗೆ ಸೇರಿದ ಚಿಲ್ಲರೆ ಅಂಗಡಿಯಿದ್ದು, ಶುಕ್ರವಾರ ಸಂಜೆ 4.45ರ ವೇಳೆಗೆ ಆಕ್ಟೀವಾ ಸ್ಕೂಟರ್‍ನಲ್ಲಿ ಬಂದ ಇಬ್ಬರು ಖದೀಮರು, ಸಿಗರೇಟ್ ಕೊಳ್ಳಲು ಅಂಗಡಿಗೆ ತೆರಳಿ ಸಿಗರೇಟ್ ತೆಗೆದುಕೊಂಡು 50 ರೂ. ನೀಡಿದ್ದಾರೆ. ಈ ವೇಳೆ ಭಾರತಿ ಅವರು ಚಿಲ್ಲರೆ ನೀಡಲು ತಿರುಗಿದಾಗÀ ಕತ್ತಿನಲ್ಲಿದ್ದ ಸುಮಾರು 60 ಸಾವಿರ ರೂ.ಮೌಲ್ಯದ 35 ಗ್ರಾಂ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರ ಆರೋಪ: ಈ ಬಡಾವಣೆಯಲ್ಲಿ ಒಂದೂ ಬೀದಿ ದೀಪಗಳಿಲ್ಲ. ರಾತ್ರಿ ವೇಳೆ ಕಗ್ಗತ್ತಲೂ ಆವರಿಸುತ್ತದೆ. ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿಲ್ಲ. ಇದರಿಂದಾಗಿ ಸುಲಿಗೆಕೋರರು, ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು-ಪುರುಷರು ಓಡಾಡಲು ಭಯಪಡುವಂತಾಗಿದೆ. ಜತೆಗೆ ರಾತ್ರಿ ವೇಳೆ ರಿಂಗ್ ರಸ್ತೆಯಲ್ಲಿ ಪುಂಡು ಪೋಕರಿಗಳ ಹಾವಳಿ ಹೆಚ್ಚಾಗಿದೆ. ಹಾಗಾಗಿ ಕೂಡಲೇ ಬೀದಿ ದೀಪಗಳನ್ನು ಅಳವಡಿಸಬೇಕು. ಪೊಲೀಸರು ರಾತ್ರಿ ವೇಳೆ ಗಸ್ತು ತಿರಗಬೇಕು ಒತ್ತಾಯಿಸಿದ್ದಾರೆ.

Translate »