ಪಿಡಿಓ ವಿರುದ್ಧ ಬೆಣಗಾಲು ಗ್ರಾಮಸ್ಥರ ಪ್ರತಿಭಟನೆ, ಕಾರ್ಯನಿರ್ವಹಣಾಧಿಕಾರಿ ಭೇಟಿ
ಮೈಸೂರು

ಪಿಡಿಓ ವಿರುದ್ಧ ಬೆಣಗಾಲು ಗ್ರಾಮಸ್ಥರ ಪ್ರತಿಭಟನೆ, ಕಾರ್ಯನಿರ್ವಹಣಾಧಿಕಾರಿ ಭೇಟಿ

December 15, 2018

ಬೈಲಕುಪ್ಪೆ: ಪಿ.ಡಿ.ಓ. ಮಂಜುನಾಥ್‍ರ ಸರ್ವಾಧಿಕಾರ ಧೋರಣೆ ಖಂಡಿಸಿ ಬೆಣಗಾಲು ಗ್ರಾಮಸ್ಥರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಕಾರ್ಯನಿರ್ವಾಹಣಾಧಿಕಾರಿ ಶೃತಿ ಅವರು ಭೇಟಿ ನೀಡಿ ಧರಣಿ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಬೆಣಗಾಲು ಗ್ರಾಪಂ ಕಚೇರಿಗೆ ಬೀಗ ಹಾಕಿ ಪಿಡಿಓ ಮಂಜುನಾಥ ಅವರನ್ನುಕೂಡಲೆ ವರ್ಗಾಯಿಸುವಂತೆ ಗ್ರಾಮಸ್ಥರು ಧರಣಿ ಪ್ರಾರಂಭಿಸಿದ್ದರು. ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಕಾರ್ಯನಿರ್ವಾಹಣಾಧಿಕಾರಿ ಶೃತಿ ಭೇಟಿನೀಡಿ ಧರಣಿಯನ್ನು ಕೈಬಿಟ್ಟು, ಒಂದು ವಾರ ಕಾಲಾವಕಾಶ ಕೊಡಿ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಪ್ರತಿಭಟನಾ ನಿರತರನ್ನು ಮನವೊಲಿಸಿದರು. ಸಾಕ್ಷಿ ನಾಶವಾಗದಂತೆ ಸಂಬಂಧಪಟ್ಟ ದಾಖಲೆಗಳನ್ನು ತಾವೇ ವಶದಲ್ಲಿ ಇಟ್ಟುಕೊಳ್ಳಬೇಕೆಂದು ಗ್ರಾ.ಪಂ. ಅಧ್ಯಕ್ಷ ಸುಂದ್ರೇಗೌಡ ಅವರ ಮನವಿಗೆ ಕಾರ್ಯನಿರ್ವಾಹಣಾ ಅಧಿಕಾರಿ ಸಮ್ಮತಿ ನೀಡಿದರು. ನಂತರ ಸುಂದ್ರೇಗೌಡ ಅವರು ತಾತ್ಕಾಲಿಕವಾಗಿ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ಇದೇ ಗ್ರಾಮಪಂಚಾಯಿತಿಯ ಮತ್ತೊಬ್ಬ ಪಿಡಿಓ ಚಿದಾನಂದ ಕೆಲವು ಅಕ್ರಮ ಎಸಗಿದ್ದಾರೆ ಎಂದು ಮತ್ತೊಂದು ಗುಂಪು ನನಗೆ ಮನವಿ ಸಲ್ಲಿಸಿದ ಮೇರೆಗೆ ಗ್ರಾಪಂನಲ್ಲಿದ್ದ ಕೆಲವು ಸಂಬಂಧಪಟ್ಟ ದಾಖಲೆಗಳನ್ನು ನನ್ನ ವಶದಲ್ಲಿ ಪಡೆದುಕೊಂಡಿದ್ದೇನೆ ಪಿಡಿಓಗಳಾದ ಮಂಜುನಾಥ ಹಾಗೂ ಚಿದಾನಂದ ಅವರನ್ನು ಕೂಡಲೇ ತನಿಖೆಗೆ ಒಳಪಡಿಸುವುದಾಗಿ ಕಾರ್ಯನಿರ್ವಾಹಣಾಧಿಕಾರಿ ಶೃತಿ ಭರವಸೆ ನೀಡಿದರು.

ತಾ.ಪಂ ಸದಸ್ಯರುಗಳಾದ ಜಯಂತಿ ಸೋಮಶೇಖರ್, ಧನರಾಜ್, ಗಿರೀಶ್, ನಾಗೇಶ, ಲಕ್ಷ್ಮಣ, ಕಾಂತರಾಜ್, ಬಸವರಾಜು, ಹರೀಶ್, ಅಶೋಕ, ಮಂಜುಳಾ, ನಾಗೇಗೌಡ, ಹನುಮಂತ, ಪುಟ್ಟರಾಜ್, ನಿಲವಾಡಿ ರಾಮಚಂದ್ರ, ಸ್ವಾಮಿ, ಸರೋಜಮ್ಮ, ಮಂಜು, ಪುಟ್ಟಲಕ್ಷ್ಮಿ, ರೇವಮ್ಮ, ದೇವಯ್ಯ, ಕಲಾವತಿ, ಗೋವಿಂದರಾಜು ಸೇರಿದಂತೆ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Translate »