ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ
ಮೈಸೂರು

ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ

December 15, 2018

ನಂಜನಗೂಡು:  ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಅಪಘಾತಕ್ಕೀಡಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಶಿರಮಳ್ಳಿ ಸಮೀಪದ ಕಂಬದ ಕೊಲ್ಲಿ ಶನಿದೇವರ ಗುಡಿಯ ಬಳಿ ನಡೆದಿದೆ.
ಒಂದೇ ಬೈಕ್‍ನಲ್ಲಿ ತೆರಳುತ್ತಿದ್ದ ನಾಲ್ವರು ಯುವಕರಲ್ಲಿ ಶಿರಮಳ್ಳಿ ಗ್ರಾಮದ ರಾಜು(23), ನಾಗೇಂದ್ರ(24) ಸ್ಥಳದಲ್ಲೇ ಮೃತಪಟ್ಟಿದ್ದು, ಆದೇ ಗ್ರಾಮ ಭರತ್‍ಕುಮಾರ್(19) ಕೈ ಮುರಿತಕ್ಕೊಳಗಾಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದ ಮಾದೇವಶೆಟ್ಟಿ ಪುತ್ರ ಕುಮಾರ್ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ರಾತ್ರಿ ಶಿರಮಳ್ಳಿ ಗ್ರಾಮದಲ್ಲಿ ಷಷ್ಠಿ ಹಬ್ಬ ಹಿನ್ನೆಲೆ ಸ್ನೇತರೊಂದಿಗೆ ಮೋಜು ಮಸ್ತಿಗಾಗಿ ಪಲ್ಸರ್(ಕೆಎ10 ಡಬ್ಲ್ಯೂ0220) ಬೈಕ್‍ನಲ್ಲಿ ನಾಲ್ವರು ಹುಲ್ಲಹಳ್ಳಿ ಕಡೆಗೆ ತೆರಳುತ್ತಿದ್ದರು. ಕುಡಿದ ಮತ್ತಿನಲ್ಲಿ ರಾಜು ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಶಿರಮಳ್ಳಿ ಹುಲ್ಲಹಳ್ಳಿ ಮಧ್ಯೆ ಕಂಬದ ಕೊಲ್ಲಿ ಶನಿದೇವರ ಗುಡಿಯ ಬಳಿ ನಿಯಂತ್ರಣ ತಪ್ಪಿದ ಬೈಕ್ ಆಲದ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ರಾಜು, ನಾಗೇಂದ್ರ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಭರತ್ ಕುಮಾರ್ ಹಾಗೂ ಕುಮಾರನನ್ನು ನಂಜನಗೂಡಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಕುಮಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‍ಗೆ ರವಾನಿಸಲಾಯಿತು. ನಗರ ಸಂಚಾರಿ ಠಾಣೆ ಎಸ್‍ಐ ಶಿವಮ್ಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹ ಗಳನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಾರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಂಜನಗೂಡು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »