ಬೆಂಗಳೂರು ಸೇರಿ ರಾಜ್ಯದ 4 ನಗರ  ಹೆಚ್ಚು ಮಾಲಿನ್ಯ ಹೊಂದಿದ ನಗರಗಳು
ಮೈಸೂರು

ಬೆಂಗಳೂರು ಸೇರಿ ರಾಜ್ಯದ 4 ನಗರ ಹೆಚ್ಚು ಮಾಲಿನ್ಯ ಹೊಂದಿದ ನಗರಗಳು

December 18, 2018

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಹಾಗೂ ಗುಲ್ಬರ್ಗಾ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ನಗರಗಳೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವ ಆರ್.ಶಂಕರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮ ದಾಸ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ 4 ನಗರಗಳ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ ಕ್ರಿಯಾ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲು ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಅಧ್ಯಕ್ಷತೆಯಲ್ಲಿ 6 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾ ಗಿದ್ದು, ಡಿ.3ರಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, 48 ಅಂಶಗಳ ಕರಡು ಕ್ರಿಯಾ ಯೋಜನೆಗೆ ಅಭಿ ಪ್ರಾಯ ಸಂಗ್ರಹಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಬೆಂಗಳೂರಿಗೆ 3 ಸಮಿತಿ: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಕಾರ್ಯಪಡೆ(ಟಾಸ್ಕ್ ಫೋರ್ಸ್ ಕಮಿಟಿ), ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯ ದರ್ಶಿ ಅಧ್ಯಕ್ಷತೆಯ ಸಮನ್ವಯ ಸಮಿತಿ ಹಾಗೂ ಅರಣ್ಯ, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯ ವಾಯು ಗುಣ ಮಟ್ಟ ಮಾಪನ ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

ಸಾರಿಗೆ, ರಸ್ತೆ ಧೂಳು ಅಪಾಯಕಾರಿ: ಬೆಂಗಳೂರು ಮಹಾನಗರ ದಲ್ಲಿ ಕೈಗಾರಿಕೆಗಳಿಗಿಂತ ರಸ್ತೆ ಧೂಳಿನಿಂದ ಹೆಚ್ಚು ವಾಯುಮಾಲಿನ್ಯ ವಾಗುತ್ತಿದೆ. ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಯೋಜನೆ ಯಡಿ ಟೆರ್ರಿ ಸಂಸ್ಥೆಯು ಕಳೆದ ವರ್ಷ ನಡೆಸಿದ ವಾಯುಮಾಲಿನ್ಯ ಗುಣಮಟ್ಟ ಸಮೀಕ್ಷೆಯಲ್ಲಿ ಈ ಆತಂಕಕಾರಿ ಅಂಶ ಬಯಲಾಗಿದೆ. ಸಾರಿಗೆ ವಲಯದಿಂದ ಶೇ.42, ರಸ್ತೆ ಧೂಳಿನಿಂದ ಶೇ.20, ಕಟ್ಟಡ ನಿರ್ಮಾಣದಿಂದ ಶೇ.14, ಕೈಗಾರಿಕಾ ವಲಯದಿಂದ ಶೇ.14, ಜನರೇಟರ್ಸ್ ಬಳಕೆಯಿಂದ ಶೇ.7 ಹಾಗೂ ಗೃಹ ಬಳಕೆ ಮೂಲದಿಂದ ಶೇ.3ರಷ್ಟು ವಾಯು ಮಾಲಿನ್ಯವಾಗುತ್ತಿದೆ. ಪೀಣ್ಯ ಕೈಗಾರಿಕಾ ಜಲಾನಯನ ಪ್ರದೇಶದಲ್ಲಿ ಕೈಗಾರಿಕೆಗಳಿಂದ ಹೊರಬರುವ ರೊಚ್ಚು ನೀರಿನಿಂದ ಅಂತರ್ಜಲ ಮಲೀನವಾಗುತ್ತಿರುವ ಬಗ್ಗೆ ಹೈದರಾಬಾದ್‍ನ ಸಂಶೋಧನಾ ಸಂಸ್ಥೆಯೊಂದು ಅಧ್ಯಯನ ನಡೆಸಿ, ವರದಿ ನೀಡಿದೆ ಎಂದು ಸಚಿವ ಶಂಕರ್ ತಿಳಿಸಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಜಲ ಉಪಕರ ಕಾಯ್ದೆ 1977ರ ಅನ್ವಯ ಕೈಗಾರಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾಗುವ ಉಪಕರವನ್ನು, ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಮಂತ್ರಾಲಯದ ಸಂಚಿತ ನಿಧಿಗೆ ಪಾವತಿ ಮಾಡಿ, ನಂತರ ಹಿಂಪಾವತಿಯಾಗುವ ಶೇ.80 ರಷ್ಟು ಹಣವನ್ನು ಮಾಲಿನ್ಯ ನಿಯಂತ್ರಣ ಕ್ರಮಗಳು, ಕಚೇರಿ ಸ್ಥಾಪನೆ, ನಿರ್ವಹಣಾ ವೆಚ್ಚ, ಜಾಗೃತಿ, ತರಬೇತಿ ಇನ್ನಿತರ ಕಾರ್ಯ ಕ್ರಮಗಳಿಗೆ ವಿನಿಯೋಗಿಸಲಾಗಿದೆ. ರಾಷ್ಟ್ರಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾದ ನಂತರದಲ್ಲಿ ಜಲ ಉಪ ಕರಣ ಸಂಗ್ರಹಣೆ ಸ್ಥಗಿತಗೊಂಡಿದ್ದು, ಕೇಂದ್ರದಿಂದ ಇನ್ನು 9.50 ಕೋಟಿ ರೂ. ಬಾಕಿ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

Translate »