ಸಕಲೇಶಪುರ ಬಳಿ ಮಂಡ್ಯ ದಿಬ್ಬಣದ ಬಸ್ ಪಲ್ಟಿ: 33 ಮಂದಿಗೆ ಗಾಯ
ಮೈಸೂರು

ಸಕಲೇಶಪುರ ಬಳಿ ಮಂಡ್ಯ ದಿಬ್ಬಣದ ಬಸ್ ಪಲ್ಟಿ: 33 ಮಂದಿಗೆ ಗಾಯ

June 21, 2019

ಸಕಲೇಶಪುರ: ಮಂಡ್ಯ ಜಿಲ್ಲೆಯಿಂದ ಮದುವೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದ ಖಾಸಗಿ ಬಸ್ ಸಕಲೇಶಪುರದ ಹೊರವಲಯದಲ್ಲಿ ಆನೆ ಮಹಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಅಪ ಘಾತಕ್ಕೀಡಾ ಗಿದ್ದು, 33 ಮಂದಿ ಗಾಯ ಗೊಂಡಿದ್ದಾರೆ. ಅವರಲ್ಲಿ 6 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನಿಡಘಟ್ಟ ಗ್ರಾಮದ ರಾಚಯ್ಯ(70), ಚನ್ನಯ್ಯ (65), ಸಿದ್ದರಾಜು(40), ಮಲ್ಲಮ್ಮ (51), ಬಸವರಾಜು(72), ಮರಿಸಿದ್ದಮ್ಮ (70) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳಿಗೆ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ವರ ಸಿದ್ದಲಿಂಗಸ್ವಾಮಿ ಕಾರಿನಲ್ಲಿ ತಾಯಿ ಜತೆ ತೆರಳಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ವಧು ಕೀರ್ತಿ ಮನೆಯವರು ಬೇರೆ ವಾಹನಗಳಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಡಘಟ್ಟ ಗ್ರಾಮದ ಸಿದ್ದಲಿಂಗಸ್ವಾಮಿ ಹಾಗೂ ಕನಕಪುರ ಜಿಲ್ಲೆ ಸಾತನೂರು ಸಮೀಪ ಚಿಕ್ಕ ಹಾಲಳ್ಳಿಯ ಕೀರ್ತಿ ಎಂಬುವರ ವಿವಾಹ ಧರ್ಮಸ್ಥಳದಲ್ಲಿ ನಿಗದಿಯಾಗಿತ್ತು. ವರನ ಸಂಬಂಧಿಕರು ಖಾಸಗಿ ಸಾರಿಗೆ ಸಂಸ್ಥೆ ಉದಯರಂಗ ಟ್ರಾನ್ಸ್‍ಪೋರ್ಟ್‍ನ ಬಸ್‍ನಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಆನೆಮಹಲ್ ಗ್ರಾಮದ ಸಮೀಪ ದೊಡ್ಡ ತಿರುವು ಬಂದರೂ ಬಸ್‍ನ ಚಾಲಕ ವೇಗ ಕಡಿಮೆ ಮಾಡಲಿಲ್ಲ. ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯಂಚಿಗೆ ಮಗುಚಿ ಬಿದ್ದಿದೆ. ಅಪಘಾತದಿಂದಾಗಿ ರಾಷ್ಟ್ರೀಯಯ ಹೆದ್ದಾರಿ 75ರಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಸಕಲೇಶಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಬಳಿಕ ಮಹಜರು ನಡೆಸಿ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »