ಸಿ-ವಿಷಲ್ ಮೊಬೈಲ್ ಆ್ಯಪ್‍ನಲ್ಲಿ 38 ದೂರು ದಾಖಲು
ಮೈಸೂರು

ಸಿ-ವಿಷಲ್ ಮೊಬೈಲ್ ಆ್ಯಪ್‍ನಲ್ಲಿ 38 ದೂರು ದಾಖಲು

April 4, 2019

ಮೈಸೂರು: ಲೋಕಸಭಾ ಚುನಾವಣಾ ಹಿನ್ನೆಲೆ ಅಕ್ರಮ ಗಳನ್ನು ತಡೆಗಟ್ಟಲು ಚುನಾವಣಾ ಆಯೋಗ ರೂಪಿಸಿದ್ದ ಸಿ-ವಿಷಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ಮೈಸೂರು ಜಿಲ್ಲೆಯಲ್ಲಿ 38 ದೂರುಗಳು ದಾಖಲಾಗಿವೆ. ಚುನಾವಣೆ ವೇಳೆ ಹಣ, ಸೀರೆ, ಕುಕ್ಕರ್, ಬಟ್ಟೆಗಳು ಸೇರಿದಂತೆ ಯಾವುದೇ ರೀತಿಯ ವಸ್ತುಗಳನ್ನು ಮತದಾರರಿಗೆ ಹಂಚಿಕೆ ಮಾಡಿದರೆ ಅಥವಾ ಫ್ಲೆಕ್ಸ್, ಬ್ಯಾನರ್‍ಗಳನ್ನು ಅನಧಿಕೃತವಾಗಿ ಅಳವಡಿಸುವ ಅಕ್ರಮಗಳು ನಡೆದರೆ ಸಾರ್ವಜನಿ ಕರು ಫೋಟೋ ಅಥವಾ ವೀಡಿಯೋ ಚಿತ್ರೀಕರಿಸಿ ಸಿ-ವಿಷಲ್ ಆ್ಯಪ್ ಮೂಲಕ ರವಾನಿಸುವಂತೆ ತಿಳಿಸಲಾಗಿತ್ತು. ಅದರಂತೆ ಮೈಸೂರು ಜಿಲ್ಲೆಯಲ್ಲಿ ಇದೂವರೆಗೆ 38 ದೂರುಗಳು ದಾಖಲಾಗಿದ್ದು, ಬಹುತೇಕ ದೂರುಗಳು ಫ್ಲೆಕ್ಸ್, ಬ್ಯಾನರ್ ಗಳದ್ದೇ ಆಗಿವೆ. ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಕೃಷ್ಣರಾಜದಲ್ಲಿ ಅತೀ ಹೆಚ್ಚು 11 ಪ್ರಕರಣ ದಾಖಲಾದರೆ, ಚಾಮರಾಜ ಕ್ಷೇತ್ರ 5, ನರಸಿಂಹರಾಜ 3, ಚಾಮುಂಡೇಶ್ವರಿ 2, ಹುಣಸೂರು 2, ಕೆ.ಆರ್.ನಗರ 1, ಪಿರಿಯಾಪಟ್ಟಣ 2, ತಿ.ನರಸೀಪುರ 1 ಹಾಗೂ ವರುಣಾ 3 ಪ್ರಕರಣಗಳು ದಾಖಲಾಗಿವೆ. ಹೆಗ್ಗಡದೇವನಕೋಟೆ, ನಂಜನಗೂಡಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಒಟ್ಟು 11 ವಿಧಾನಸಭಾ ಕ್ಷೇತ್ರಗಳಿಂದ 30 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ 19 ದೂರುಗಳನ್ನು ಬಗೆಹರಿಸಲಾಗಿದೆ. 2 ಪ್ರಕರಣಗಳನ್ನು ತನಿಖೆಗಾಗಿ ಬಾಕಿ ಉಳಿಸಿದ್ದು, 9 ಪ್ರಕರಣಗಳನ್ನು ಕೈಬಿಡಲಾಗಿದೆ. ಜಿಲ್ಲಾವಾರು ಪ್ರಕರಣದಲ್ಲಿ 8 ಪ್ರಕರಣಗಳನ್ನು ಕೈ ಬಿಡಲಾಗಿದೆ.

Translate »