40 ಲಕ್ಷ ರೂ. ವೆಚ್ಚದ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
ಮೈಸೂರು

40 ಲಕ್ಷ ರೂ. ವೆಚ್ಚದ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

December 11, 2019

ತಿ.ನರಸೀಪುರ, ಡಿ.10(ಎಸ್‍ಕೆ)-ಶಿಕ್ಷಣದಿಂದಲೇ ಸ್ವಪ್ರಗತಿ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧ್ಯವಿರುವುದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಸಲಹೆ ನೀಡಿದರು.

ಪಟ್ಟಣದ ಕಬಿನಿ ಕಾಲೋನಿಯಲ್ಲಿರುವ ಭೈರಾಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆವ್ಲೆಟ್ ಪ್ಯಾಕರ್ಡ್ ಎಂಟರ್ ಪ್ರೈಸಸ್(ಹೆಚ್‍ಪಿ) ಕಂಪನಿಯ ಪ್ರಾಯೋಜಕತ್ವದಲ್ಲಿ 40 ಲಕ್ಷ ರೂ.ಗಳ ವೆಚ್ಚದಲ್ಲಿ ಆರಂಭಗೊಂಡಿರುವ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.

2010ರಲ್ಲಿ ದೇಶದಲ್ಲಿ ಅಂದಿನ ಕೇಂದ್ರ ಸರ್ಕಾರ ಕಡ್ಡಾಯ ಶಿಕ್ಷಣ ಜಾರಿ ಮಾಡಿದ್ದರಿಂದ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಸಂಖ್ಯೆ ಹೆಚ್ಚಾಗಿವೆ. ರಾಜ್ಯದಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ತಾಲೂಕು ಕೇಂದ್ರಗಳಲ್ಲಿ ಮಹಿಳಾ ಕಾಲೇಜು ಸ್ಥಾಪನೆಗೆ ಯೋಜನೆ ರೂಪಿಸಿದ್ದರಿಂದ ನರಸೀಪುರದಲ್ಲಿ ಉತ್ತಮವಾದ ಮಹಿಳಾ ಕಾಲೇಜು ತಲೆ ಎತ್ತಿದೆ. ಕಾಪೆರ್Çೀರೇಟ್ ವಲಯಗಳ ಸೇವಾ ನಿಧಿಯ ಅನುದಾನದಲ್ಲಿ ನೆರವು ಪಡೆದು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗುಂಡ್ಲುಪೇಟೆ ಹೊರತುಪಡಿಸಿ ಇನ್ನುಳಿದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಪೀಠೋಕರಣಗಳು ಹಾಗೂ ಕಂಪ್ಯೂಟರ್ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದೇನೆ ಎಂದು ಆರ್.ಧ್ರುವನಾರಾಯಣ ಇದೇ ವೇಳೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವರುಣಾ ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿ, ಉನ್ನತ ಶಿಕ್ಷಣದ ಮೇಲೆಯೇ ಸಾಮಾಜಿಕ ಹಾಗೂ ದೇಶದ ಅಭಿವೃದ್ಧಿ ಅವಲಂಬನೆಯಾಗಿರುವುದರಿಂದ ಯುವ ಸಮೂಹ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅದರಲ್ಲೂ ಹೆಣ್ಣು ಮಕ್ಕಳು ಕಡ್ಡಾಯ ಉನ್ನತ ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿಗೆ ಹವಾನಿಯಂತ್ರಿತ ಹಾಗೂ ಅಂತರ್ಜಾಲ ಸಂಪರ್ಕ ಹೊಂದಿದ ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ ಬಳುವಳಿಯಾಗಿ ನೀಡಿದ ಹೆವ್ಲೆಟ್ ಪ್ಯಾಕರ್ಡ್ ಎಂಟರ್‍ಪ್ರೈಸಸ್(ಹೆಚ್‍ಪಿ) ಕಂಪನಿಯ ಮುಖ್ಯಸ್ಥರು ಹಾಗೂ ತಾಂತ್ರಿಕ ಪರಿಣಿತರನ್ನು ಸನ್ಮಾನಿಸಲಾಯಿತು.

ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಕಾವೇರಿಯಪ್ಪ, ಹೆವ್ಲೆಟ್ ಪ್ಯಾಕರ್ಡ್ ಎಂಟರ್‍ಪ್ರೈಸಸ್(ಹೆಚ್‍ಪಿ) ಕಂಪನಿಯ ಇಂಡಿಯಾ ಹೆಡ್ ಸುಶೀಲ್ ಭಾಟ್ಲ, ಕಂಟ್ರಿ ಹೆಡ್ ಕೆ.ಎಲ್.ಪ್ರಸನ್ನ, ಪ್ರಾಜೆಕ್ಟ್ ಹೆಡ್ ಸುರೇಶ್ ಬಾಬೆಲ್, ಮ್ಯಾನೇಜರ್ ಸುಂದರ್, ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಸಹಾಯಕಿ ರಾಧಿಕಾ ವರ್ಮಾ, ಮ್ಯಾನೇಜರ್ ವಿಜಯ್ ಸೂರ್ಯ ನಾರಾಯಣ್, ಪ್ರಾಜೆಕ್ಟ್ ಎಕ್ಸಿಕ್ಯೂಟಿವ್‍ಗಳಾದ ಇಸಾಂತ್ ಅಗರ್ವಾಲ್, ಶೈನಿ ಸಿಂಗ್, ರಾಕೇಶ್, ಜಿಪಂ ಸದಸ್ಯ ಮಂಜುನಾಥನ್, ತಾಪಂ ಸದಸ್ಯ ಎಂ.ರಮೇಶ್, ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್, ಪ್ರಾಂಶುಪಾಲೆ ಕೆ.ನಾಗರತ್ನಮ್ಮ, ನಿವೃತ್ತ ಪ್ರಾಂಶುಪಾಲೆ ಬಿ.ಸಿ.ಇಂದಿರಮ್ಮ, ಪುರಸಭೆ ಸದಸ್ಯರಾದ ಎನ್.ಸೋಮು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪಿ.ಸ್ವಾಮಿನಾಥ್ ಗೌಡ ಹಾಗೂ ಇನ್ನಿತರರಿದ್ದರು.

Translate »