ನೆರೆ ಸಂತ್ರಸ್ತ ದಂಪತಿಗೆ ಸೂರು ಕಲ್ಪಿಸಿದ ಯುವ ಬ್ರಿಗೇಡ್
ಮೈಸೂರು

ನೆರೆ ಸಂತ್ರಸ್ತ ದಂಪತಿಗೆ ಸೂರು ಕಲ್ಪಿಸಿದ ಯುವ ಬ್ರಿಗೇಡ್

December 11, 2019

ನಂಜನಗೂಡು, ಡಿ.10- ಕಪಿಲಾ ನದಿ ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡಿದ್ದ ಸಂತ್ರಸ್ತ ದಂಪತಿಗೆ ಯುವ ಬ್ರಿಗೇಡ್ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ.

ನಗರದ ಹಳ್ಳದಕೇರಿ ಬಡಾವಣೆ ನಿವಾಸಿ ಗಳಾದ ರಾಜಮ್ಮ-ನಾಗರಾಜು ದಂಪತಿ ಕೆಲ ತಿಂಗಳ ಹಿಂದೆ ಸಂಭವಿಸಿದ ಕಪಿಲಾ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದರು. ತಮ್ಮ ಹೆಸರಲ್ಲಿ ನಿವೇಶನ ದಾಖಲೆ ಇಲ್ಲದ್ದರಿಂದ ಸರ್ಕಾರದ ನೆರವು ಪಡೆಯಲು ಸಾಧ್ಯವಾಗದೆ ಕಂಗಾಲಾ ಗಿದ್ದರು. ಇವರ ಸಂಕಷ್ಟಕ್ಕೆ ಸ್ಪಂದಿಸದ ಯುವ ಬ್ರಿಗೇಡ್ ಕಾರ್ಯಕರ್ತರು ತಿಂಗಳ ಅವಧಿ ಯಲ್ಲಿ ಮನೆ ನಿರ್ಮಿಸಿಕೊಟ್ಟು ಸೋಮ ವಾರ ಗೃಹಪ್ರವೇಶ ನೆರವೇರಿಸಿದರು.
ಹಿರೇಹಡಗಲಿ ಮಠದ ಅಭಿನವ ಹಾಲ ಸ್ವಾಮೀಜಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಬ್ರಿಗೇಡ್ ದಕ್ಷಿಣ ಪ್ರಾಂತ್ಯ ಸಂಚಾಲಕ ಎಸ್.ಚಂದ್ರಶೇಖರ್ ಸಂತ್ರಸ್ತ ದಂಪತಿಗೆ ಮನೆ ಕೀಲಿಕೈ ಹಸ್ತಾಂತರಿಸಿ, ಶುಭ ಕೋರಿದರು. ಈ ವೇಳೆ ರಾಜಮ್ಮ-ನಾಗರಾಜು ದಂಪತಿ ಯುವ ಬ್ರಿಗೇಡ್‍ಗೆ ಕೃತಜ್ಞತೆ ಸಲ್ಲಿಸಿದರು.

17ಘಿ17 ಅಳತೆ ನಿವೇಶನದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರೇ ಶ್ರಮದಾನ ಮಾಡುವ ಮೂಲಕ ಅಂದಾಜು 1.5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದಾರೆ. ಇಂಜಿನಿಯರ್ ವಿಷ್ಣು ಅವರ ತಾಂತ್ರಿಕ ನೆರವು, ಅಸೆಂಚರ್ ಸಂಸ್ಥೆ ಸಹಕಾರದಲ್ಲಿ ಇಟ್ಟಿಗೆ, ಸಿಮೆಂಟ್, ಕಬ್ಬಿಣ ಇತ್ಯಾದಿಗಳನ್ನು ಸ್ವಯಂ ಸೇವಕರೇ ಹೊಂದಿಸಿಕೊಂಡು ಮನೆ ನಿರ್ಮಿಸಿಕೊಟ್ಟು, `ನಮ್ಮನೆ’ ಎಂದು ನಾಮಕರಣ ಮಾಡಿದ್ದಾರೆ. ಮೂರು ತಿಂಗಳಿಂದ ಆಶ್ರಯಕ್ಕಾಗಿ ಹೆಣ ಗಾಡುತ್ತಿದ್ದ ಅನಾಥ ದಂಪತಿಗೆ ಸ್ವಂತ ಸೂರು ಕರುಣಿಸಿದ ಯುವ ಬ್ರಿಗೇಡ್ ಕಾರ್ಯ ಕರ್ತರ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Translate »