ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಕಡಿತ
ಮೈಸೂರು

ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಕಡಿತ

May 10, 2019

ಮೈಸೂರು: ನೋಟು ಅಮಾನ್ಯೀಕರಣ ಹಾಗೂ ದುಬಾರಿ ಶುಲ್ಕದ ಹಿನ್ನೆಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿರುವ ಹಿನ್ನೆಲೆಯಲ್ಲಿ ಕಂಗೆಟ್ಟಿದ್ದ ಮೈಸೂರು ವಿಶ್ವವಿದ್ಯಾನಿಲಯ ಪ್ರಸಕ್ತ ಸಾಲಿನಿಂದ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯಲು ಶೇ.50ರಷ್ಟು ಶುಲ್ಕ ಕಡಿತ ಮಾಡಲು ನಿರ್ಧರಿಸಿದೆ.

ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಮುಂಚೂಣಿ ಸ್ಥಾನ ಪಡೆಯುವುದರೊಂದಿಗೆ ವಿಶ್ವದ ಗಮನ ಸೆಳೆದಿದ್ದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ವಿದೇಶಿಗರು ಮುಗಿ ಬೀಳುವ ಕಾಲವೊಂದಿತ್ತು. ಕಳೆದ ನಾಲ್ಕು ವರ್ಷದ ಹಿಂದಿನವರೆಗೂ ಹತ್ತಾರು ರಾಷ್ಟ್ರಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಆದರೆ ನೋಟು ಅಮಾನ್ಯೀ ಕರಣ ಹಾಗೂ ದುಬಾರಿ ಶುಲ್ಕದ ಪರಿಣಾಮ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ದಿಢೀರ್ ಕುಸಿತ ಕಂಡಿದೆ. ಇದರಿಂದ ಕಂಗೆಟ್ಟಿದ್ದ ವಿವಿ ಆಡಳಿತ ಮಂಡಳಿ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಶೇ.50ರಷ್ಟು ಕಡಿತ ಮಾಡಿ, ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯಲು ಕ್ರಮ ಕೈಗೊಂಡಿದೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ 65 ವಿಭಾಗಗಳಿದ್ದು, 78 ಕೋರ್ಸ್ ಗಳಿವೆ. 18 ಪದವಿ ಕೋರ್ಸ್‍ಗಳಿವೆ. ಖಾಸಗಿ ವಿವಿಗಳಲ್ಲಿ ಕೇವಲ ನಾಲ್ಕೈದು ಪಿಜಿ ವಿಭಾಗಗಳಿ ರುತ್ತವೆ. ಆದರೆ 65 ವಿಭಾಗ ಹೊಂದಿರುವ ಮೈಸೂರು ವಿವಿ ಮುಂಚೂಣಿಯಲ್ಲಿದೆ. ಶೈಕ್ಷಣಿಕ ಚಟುವಟಿಕೆಗೆ ಪೂರಕವಾದ ಪರಿಸರ ಹೊಂದಿರುವುದ ರಿಂದಲೇ ವಿದೇಶಿ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಅಚ್ಚು ಮೆಚ್ಚಿನ ವಿವಿಯಾಗಿ ಪರಿಣಮಿಸಿದೆ. ಕಳೆದ 2 ವರ್ಷಗಳಿಂದ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 750ಕ್ಕೆ ಸೀಮಿತಗೊಂಡಿದ್ದು, ಸುಮಾರು 1000ರಿಂದ 1500 ವಿದ್ಯಾರ್ಥಿಗಳ ಕೊರತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಾಲಿನಿಂದ ವಿದೇಶಿ ವಿದ್ಯಾರ್ಥಿ ಗಳನ್ನು ಆಕರ್ಷಿಸಲು ಶುಲ್ಕ ಕಡಿತ ಮಾಡಲಾಗಿದೆ.

ಕಳೆದ ಮೂರು ವರ್ಷದಿಂದ ವಿದೇಶಿ ವಿದ್ಯಾರ್ಥಿ ಗಳ ಪ್ರವೇಶ ಶುಲ್ಕ 60 ಸಾವಿರಕ್ಕಿಂತ ಹೆಚ್ಚಾಗಿತ್ತು. ಕೆಲ ಖಾಸಗಿ ವಿವಿಗಳಿಗೆ ಸರಿಸಮನಾಗಿ ಶುಲ್ಕ ನಿಗದಿ ಮಾಡಲಾಗಿತ್ತು. ದೇಶದ ವಿವಿಗಳಿಗೆ ವಿದೇಶಿ ವಿದ್ಯಾರ್ಥಿ ಗಳನ್ನು ಅಲಾಟ್ ಮಾಡುವ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ (ಐಸಿಸಿಆರ್) ಸಂಸ್ಥೆ ಮೈಸೂರು ವಿವಿಗೆ ಕಡಿಮೆ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಅಲಾಟ್ ಮಾಡುತ್ತಿತ್ತು. ಇದರಿಂದ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ವಿವಿಗೆ ಹಿನ್ನಡೆಯಾಗಿ ಪರಿಣಮಿಸಿತು. ಕಳೆದ ತಿಂಗಳು ನಡೆದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಶುಲ್ಕ ಶೇ.50ರಷ್ಟು ಕಡಿತ ಮಾಡಲು ಸಮ್ಮತಿಸಿತ್ತು. ಇದಕ್ಕೆ ಒಪ್ಪಿಗೆಯೂ ದೊರಕಿದ್ದು, ಪ್ರಸಕ್ತ ಸಾಲಿನಿಂದಲೇ ಹೆಚ್ಚಿನ ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳನ್ನು ನಿರೀಕ್ಷಿ ಸಲಾಗಿದೆ. ಶುಲ್ಕ ಕಡಿಮೆ ಮಾಡಿರುವುದನ್ನು ಐಸಿ ಸಿಆರ್ ಸಂಸ್ಥೆ ಗಮನಕ್ಕೂ ತರಲಾಗಿದೆ. ಇದರಿಂದ ಈ ಸಾಲಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತಕ್ಕೆ ಬರಲು ಇಚ್ಛಿಸುವ ವಿದೇಶಿ ವಿದ್ಯಾರ್ಥಿಗಳ ಗಮನಕ್ಕೆ ನಿಗದಿ ಮಾಡಿರುವ ಶುಲ್ಕದ ಮಾಹಿತಿ ನೀಡಲಾಗಿದೆ. ಈ ಸಾಲಿನಲ್ಲಿ ದಾಖಲಾಗುವ ವಿದ್ಯಾರ್ಥಿಗಳು 30 ಸಾವಿರ ರೂ. ಮಾತ್ರ ಶುಲ್ಕ ಪಾವತಿಸಬೇಕಾಗಿದೆ.

ಎಂ.ಟಿ.ಯೋಗೇಶ್ ಕುಮಾರ್

Translate »