ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು: 8 ಮಂದಿ ಬಂಧನ
ಮೈಸೂರು

ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು: 8 ಮಂದಿ ಬಂಧನ

February 15, 2019

ಹಾಸನ: ಶಾಸಕ ಪ್ರೀತಂ ಜೆ.ಗೌಡ ಅವರ ಮನೆ ಮೇಲೆ ಬುಧವಾರ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ ಹಾಸನ ನಗರ ಪೊಲೀಸರು ಜನ ಪ್ರತಿನಿಧಿಗಳು ಸೇರಿದಂತೆ 8 ಜನ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಜಿಪಂ ಸದಸ್ಯ ಸ್ವರೂಪ್, ನಗರಸಭೆ ಸದಸ್ಯರಾದ ಪ್ರಶಾಂತ್, ಗಿರೀಶ್, ಮಾಜಿ ಅಧ್ಯಕ್ಷ ಅನೀಲ್‍ಕುಮಾರ್, ಮಾಜಿ ಸದಸ್ಯ ಭಾನುಪ್ರಕಾಶ್, ಜೆಡಿಎಸ್ ಮುಖಂಡ ರಾದ ಕಮಲ್‍ಕುಮಾರ್, ಜಗದೀಶ್, ಚಂದ್ರು ಕಾಟೀಹಳ್ಳಿ ಬಂಧಿತ ಆರೋಪಿ ಗಳು. ಘಟನೆಯ ವಿವರ: ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಬಿಡುಗಡೆ ಯಾಗಿರುವ ಆಡಿಯೋ ಟೇಪ್‍ನಲ್ಲಿ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಆಡಿದ್ದಾರೆನ್ನಲಾದ ಮಾತುಗಳಿಂದ ರೊಚ್ಚಿ ಗೆದ್ದ ಜೆಡಿಎಸ್ ಕಾರ್ಯಕರ್ತರು ಬುಧವಾರ ಹಾಸನ ವಿದ್ಯಾನಗರದ ಸಮೀಪ ಗೌರಿಕೊಪ್ಪಲಿನಲ್ಲಿರುವ ಶಾಸಕ ಪ್ರೀತಂ ಜೆ.ಗೌಡ ಮನೆಯ ಮುಂದೆ ಪ್ರತಿಭಟಿಸಿ ಕಲ್ಲು ತೂರಾಟ ನಡೆಸಿದ್ದರು. ಶಾಸಕನ ಬೆಂಬಲಿಗ ರಾಹುಲ್ ಕಿಣಿ ಅವರಿಗೆ ಕಲ್ಲೆಟು ಬಿದ್ದು, ಅವರ ಬಲಗಣ್ಣಿನ ಪಕ್ಕದಲ್ಲಿ ಗಾಯವಾಗಿತ್ತು. ಬಳಿಕ ಅವರನ್ನು ಹಾಸನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ರಾಹುಲ್ ಕಿಣಿ ಅವರು ಕೆಲವರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದರು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಇದರ ಆಧಾರದಡಿ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ, 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ, ಶಾಸಕ ಪ್ರೀತಂ ಜೆ.ಗೌಡ ಮನೆ ಹಾಗೂ ಜಿಲ್ಲಾ ಬಿಜೆಪಿ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಿದ್ದಾರೆ.

Translate »