ಕುಂಭಮೇಳಕ್ಕೆ ಸಜ್ಜಾಗುತ್ತಿದೆ ತಿರುಮಕೂಡಲು
ಮೈಸೂರು

ಕುಂಭಮೇಳಕ್ಕೆ ಸಜ್ಜಾಗುತ್ತಿದೆ ತಿರುಮಕೂಡಲು

February 15, 2019

ತಿ.ನರಸೀಪುರ: ದಕ್ಷಿಣದ ಪ್ರಯಾಗ, ಕಾಶಿಯಂತಹ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ತಿರುಮಕೂಡಲು ನರಸೀಪುರದಲ್ಲಿ ಜೀವನದಿ ಕಾವೇರಿ, ಕಪಿಲಾನದಿ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಸಂಗಮವಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ಈ ಬಾರಿ 11ನೇ ಕುಂಭಮೇಳ ನಡೆಯಲಿದ್ದು, ದಿನಗಣನೆ ಆರಂಭವಾಗಿದೆ. ಫೆ.17ರಿಂದ ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಉತ್ಸವಕ್ಕೆ ತ್ರಿವೇಣಿ ಸಂಗಮದಲ್ಲಿ ಸಿದ್ಧತೆ ಕಾರ್ಯಗಳು ಭರ ದಿಂದ ಸಾಗಿವೆ.

ಮೂರು ದಿನಗಳ ಧಾರ್ಮಿಕ ಉತ್ಸವಕ್ಕೆ ತ್ರಿವೇಣಿ ಸಂಗಮದ ಮರಳಿನ ರಾಶಿಯ ಮೇಲೆ ಯಾಗ ಮಂಟಪ, ಸಮಾರಂಭದ ವೇದಿಕೆ ನಿರ್ಮಾಣ ನಡೆದಿದೆ. ಹರಗುರು ಚರಮೂರ್ತಿ ಗಳ ವಾಸ್ತವ್ಯಕ್ಕೂ ಕುಠೀರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕುಂಭಮೇಳಕ್ಕೆ ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿರುವುದರಿಂದ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ, ವಾಹನಗಳ ನಿಲುಗಡೆಗೆ ಮೂರು ಕಡೆ ತಾತ್ಕಾಲಿಕ ಪಾರ್ಕಿಂಗ್ ಸೌಲಭ್ಯ, 200 ಶೌಚಾಲಯಗಳ ನಿರ್ಮಾಣವನ್ನು ಮಾಡಲಾಗಿದೆ.

ಸುಸಜ್ಜಿತ ಐಸಿಯು: ಪುರಸಭೆ ಉಸ್ತುವಾರಿ ಯಲ್ಲಿ ಸ್ವಚ್ಛತೆ ನಿರ್ವಹಣೆಗೆ ಅಗತ್ಯವಿರುವ ಪೌರ ಕಾರ್ಮಿಕರನ್ನು ನಿಯೋಜನೆ ಮಾಡ ಲಾಗಿದೆ. 1 ಆಯುಷ್ ಕೇಂದ್ರ ಸೇರಿದಂತೆ 2 ಆರೋಗ್ಯ ಕೇಂದ್ರ ತೆರೆಯಲಾಗಿದೆ. ಪಟ್ಟ ಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸಜ್ಜಿತ ಐಸಿಯು ಲಭ್ಯವಿದ್ದು, ತುರ್ತು ಸಂದರ್ಭ ಗಳಿಗಾಗಿ 50 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.

ಪುಣ್ಯ ಸ್ನಾನಕ್ಕಾಗಿ ಜನರು ನದಿಗಿಳಿಯು ವುದರಿಂದ ನದಿಯ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಮುಂಜಾಗ್ರತಾ ಕ್ರಮವಾಗಿ 80 ಮಂದಿ ನುರಿತ ಈಜುಗಾರರು ಹಾಗೂ 3 ಮೋಟಾರ್ ಬೋಟ್ ಕರ್ತವ್ಯಕ್ಕೆ ನಿಯೋಜಿಸಿ ಕೊಳ್ಳಲಾಗಿದೆ. ನಾಲ್ಕೈದು ಕಡೆಗಳಲ್ಲಿ ಮಹಿಳೆ ಯರು ವಸ್ತ್ರ ಬದಲಿಸಲು ಅನುಕೂಲವಾಗಲೆಂದು 200 ತಾತ್ಕಾಲಿಕ ಕೊಠಡಿಗಳನ್ನು ನಿರ್ಮಿಸ ಲಾಗಿದೆ. ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಮೂರು ತಾತ್ಕಾಲಿಕ ನಿಲ್ದಾಣ ಗಳಿಂದ ಉಚಿತ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಸಾರ್ವಜನಿಕರಿಗಾಗಿ ಐದು ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಬಿಗಿ ಭದ್ರತೆಗಾಗಿ 1400 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದ್ದು, 50 ಸಿಸಿ ಕ್ಯಾಮರಾಗಳ ಅಳವಡಿಕೆ ಹಾಗೂ 3 ವಾಚ್ ಟವರ್ ಸ್ಥಾಪನೆ ಮಾಡಲಾಗಿದೆ.

ರಾತ್ರಿಯಾಗುತ್ತಿದ್ದಂತೆ ತ್ರಿವೇಣಿ ಸಂಗಮ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಕುಂಭಮೇಳದಿಂದ ಹಳ್ಳ ಗುಂಡಿಗಳು ಕಿತ್ತು ಬರುತ್ತಿದ್ದ ರಸ್ತೆಗಳೂ ಡಾಂಬರು ಕಾಣುತ್ತಿದ್ದು, ಹಳೇ ತಿರುಮಕೂಡಲು ವೃತ್ತದ ರಸ್ತೆಗಳು ದುರಸ್ತಿಯಾಗಿವೆ. ಶಿಥಿಲಗೊಂಡಿದ್ದ ಕಾವೇರಿ ನದಿಯ ಹಳೇ ಸೇತುವೆಗೂ ತೇಪೆಯನ್ನು ಹಾಕಲಾಗಿದೆ. ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯ ಸೌಂದರ್ಯೀಕರಣ ಕಾಮಗಾರಿ ಯಿಂದ ಈ ಬಾರಿ ಆಕರ್ಷಣೀಯವಾಗಿದ್ದು, ಕುಂಭಮೇಳದಲ್ಲಿ ಜನರ ಕಣ್ಮನ ಸೆಳೆಯಲಿದೆ. ವಿಶೇಷವಾಗಿ ಕಪಿಲಾ ನದಿಯನ್ನು ನಡೆದು ಕೊಂಡು ದಾಟಲು ಸೈನಿಕರಿಂದ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ಮೂರು ದಿನಗಳ ನಡೆಯುವ ಧಾರ್ಮಿಕ ಕೈಂಕರ್ಯಗಳಿಗೆ ತ್ರಿವೇಣಿ ಸಂಗಮ ಮಧುವಣಗಿತ್ತಿಯಂತೆ ಸಜ್ಜಾಗುತ್ತಿದೆ.

ಧಾರ್ಮಿಕ ಉತ್ಸವಗಳ ವಿವರ

17ರ ಭಾನುವಾರ ಪ್ರಾಂತಃಕಾಲ 9 ಗಂಟೆಗೆ ತ್ರಯೋದಶಿ, ಶ್ರೀ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ ಅಭಿಷೇಕ, ಮಹಾಮಂಗಳಾರತಿ, ಸಂಜೆ 5 ಗಂಟೆಗೆ ಧರ್ಮಸಭೆ, ಪ್ರವಚನ, ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ.

18ರ ಸೋಮವಾರ ಪ್ರಾತಃಕಾಲ 9 ಗಂಟೆಗೆ ಚತುರ್ದಶಿ, ನದಿಪಾತ್ರದಲ್ಲಿ ಪುಣ್ಯಾಹ, ನವಗ್ರಹ ಹೋಮ, ಸುದರ್ಶನ ಹೋಮ, ರುದ್ರಹೋಮ, ಪೂರ್ಣಾಹುತಿ, ಇತ್ಯಾದಿ. ಬೆಳಗ್ಗೆ 11 ಗಂಟೆಗೆ ಧರ್ಮಸಭೆ, ಸಂಜೆ 4 ಗಂಟೆಗೆ ಮಹಾತ್ಮ ಸಂತರ ಮಹಾಮಂಡ ಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ, ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ಸಂಜೆ 6 ಗಂಟೆಗೆ ಶ್ರೀರುದ್ರ ಹೋಮ ಹಾಗೂ ಪೂರ್ಣಾಹುತಿ ಹಾಗೂ ಸಂಜೆ 7 ಗಂಟೆಗೆ ವಾರಣಾಸಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ.

19ರ ಮಂಗಳವಾರ ಪೂರ್ಣಿಮಾ ಬೆಳಗ್ಗೆ ನದಿ ಪಾತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ ಪುಣ್ಯಸ್ನಾನ, ಧರ್ಮ ಸಭೆ ಜರುಗಲಿದ್ದು, ಮಹೋದಯ ಪುಣ್ಯಕಾಲದ ಮಹಾಮಾಘ ಸ್ನಾನಕ್ಕೆ ಮೀನ ಲಗ್ನ ಪ್ರಾತಕಾಲ 9.35 ರಿಂದ 9.50 ರವರೆಗೆ ಹಾಗೂ ವೃಷಭ ಲಗ್ನ ಮಧ್ಯಾಹ್ನ 11.30 ರಿಂದ 12 ರವರೆಗೆ ಪ್ರಶಸ್ತ ಕಾಲವಾಗಿದೆ.

ಹನ್ನೊಂದನೇ ಕುಂಭಮೇಳಕ್ಕೆ ದಶಕದ ಇತಿಹಾಸ

ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿನ ಈ 11ನೇ ಕುಂಭಮೇಳಕ್ಕೆ ದಶಕಗಳ ಇತಿಹಾಸವಿದೆ. ಉತ್ತರ ಪ್ರದೇಶದ ಪ್ರಯಾಗದ ಮಾದರಿಯಲ್ಲೇ 1989ರಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಕೈಲಾಸಾಶ್ರಮದ ತಿರುಚ್ಚಿ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮೈಸೂರು ಅವಧೂತದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಓಂಕಾರಾಶ್ರಮದ ಶಿವಪುರಿ ಸ್ವಾಮೀಜಿ ಅವರು ಕುಂಭಮೇಳವನ್ನು ಆರಂಭಿಸಿದರು. ತಿರುಮಕೂಡಲಿನ ತ್ರಿವೇಣಿ ಸಂಗಮವನ್ನು ದಕ್ಷಿಣ ಪ್ರಯಾಗವಾಗಿಸುವ ನಿಟ್ಟಿನಲ್ಲಿ ನಂತರ 1992ರಲ್ಲಿ, 1995ರಲ್ಲಿ, 1998ರಲ್ಲಿ, 2001ರಲ್ಲಿ, 2004ರಲ್ಲಿ, 2007ರಲ್ಲಿ ಹಾಗೂ 2010ರಲ್ಲಿ, 2013ರಲ್ಲಿ ಮತ್ತು 2016ರಲ್ಲಿ ಹತ್ತು ಕುಂಭಮೇಳಗಳು ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆದಿವೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪುಣ್ಯಸ್ನಾನವನ್ನು ಮಾಡಿ ಕುಂಭಮೇಳದಲ್ಲಿ ಭಾಗಿಯಾಗಿದ್ದರು.

Translate »