ಹುಲಿ ದಾಳಿಗೆ 8 ಕುರಿ ಬಲಿ
ಮೈಸೂರು

ಹುಲಿ ದಾಳಿಗೆ 8 ಕುರಿ ಬಲಿ

December 14, 2018

ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸರಗೂರು: ಹುಲಿ ದಾಳಿಗೆ 8 ಕುರಿಗಳು ಬಲಿಯಾಗಿರುವ ಘಟನೆ ಸರಗೂರು ಸಮೀಪ ನಡೆದಿದೆ. ಸರಗೂರು ಸಮೀಪದ ಗೋತಕಾಲದ ಹುಂಡಿ ಗ್ರಾಮದ ಶಿವರಾಜಶೆಟ್ಟಿ ಹಾಗೂ ಹುಚ್ಚಯ್ಯ ಅವರು, ಕಪಿಲಾ ಬಲದಂಡೆ ನಾಲೆಯ ಬಳಿ ಕುರಿಗಳನ್ನು ಮೇಯಿಸಿಕೊಂಡು ವಾಪಸ್ಸಾಗು ತ್ತಿದ್ದಾಗ ಹುಲಿ ದಾಳಿ ನಡೆಸಿದೆ. ಇದನ್ನು ಕಂಡು ಭಯಭೀತರಾದ ರೈತರು, ಕೂಗಾಡಿದ್ದರಿಂದ ಹುಲಿ ಪರಾರಿಯಾಗಿದೆ. ಆದರೆ ದಾಳಿಯಲ್ಲಿ ಶಿವರಾಜಶೆಟ್ಟಿ ಅವರಿಗೆ ಸೇರಿದ 7 ಹಾಗೂ ಹುಚ್ಚಯ್ಯ ಅವರ 1 ಕುರಿ ಸಾವನ್ನಪ್ಪಿವೆ.

ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ರೈತರು, ಸರಗೂರಿನಲ್ಲಿರುವ ಅರಣ್ಯ ಇಲಾಖೆ ಕಚೇರಿ ಬಳಿ ಸತ್ತ ಕುರಿಗಳನ್ನಿಟ್ಟು ಅಳಲು ತೋಡಿಕೊಂಡರಲ್ಲದೆ, ಪರಿಹಾರಕ್ಕೆ ಆಗ್ರಹಿಸಿದರು. ಹುಲಿ ದಾಳಿಯ ಬಗ್ಗೆ ತಿಳಿದ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಾಗ್ಗೆ ಹುಲಿ ದಾಳಿ ನಡೆಸುತ್ತಿದ್ದರೂ ಸೆರೆ ಹಿಡಿಯಲು ಯಾವ ಪ್ರಯತ್ನವನ್ನೂ ಮಾಡದೆ ಬಡ ರೈತರ ಬಾಳಲ್ಲಿ ಚೆಲ್ಲಾಟವಾಡುತ್ತಿ ದ್ದಾರೆ. ಹುಲಿ ಸೆರೆಗೆ ತಕ್ಷಣ ಕಾರ್ಯಾಚರಣೆ ಆರಂಭಿಸಬೇಕು ಹಾಗೂ ಕುರಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪಟ್ಟಣದಲ್ಲೂ ಆತಂಕ: ಹುಲಿ ಸಂಚಾರ ಸರಗೂರು ಪಟ್ಟಣವನ್ನೂ ತಲ್ಲಣಗೊಳಿಸಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲೇ ಕುರಿಗಳ ಮೇಲೆ ದಾಳಿ ನಡೆಸಿರುವ ವಿಷಯ ತಿಳಿದು ನಿವಾಸಿಗಳು ಆತಂಕ್ಕೀಡಾಗಿದ್ದಾರೆ. ನಿತ್ಯ ಮುಂಜಾನೆ 4 ಗಂಟೆಯಿಂದಲೇ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ವಾಯು ವಿಹಾರಕ್ಕೆ ಹೋಗುತ್ತಾರೆ. ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ, ಮನುಷ್ಯರನ್ನು ಬಲಿ ಪಡೆಯುವ ಮುನ್ನ ಸೆರೆ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ.

Translate »