- ನಂಜನಗೂಡು ತಾ.ಪಂ ಸಾಮಾನ್ಯ ಸಭೆ
- ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಿವಣ್ಣ ಪುನರಾಯ್ಕೆ
ನಂಜನಗೂಡು: ತಾಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ ಅವರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಹೆಚ್.ಎಸ್.ಮೂಗಶೆಟ್ಟಿ ಮತ್ತು ಬಸವರಾಜು ಮಾತನಾಡಿ ತಾಲೂಕಿನಲ್ಲಿ ಅಕ್ರಮವಾಗಿ ಮಧ್ಯೆ ಮಾರಾಟವಾಗುತ್ತಿದ್ದರೂ ಅಬಕಾರಿ ಅಧಿಕಾರಿಗಳು ಪರೋಕ್ಷವಾಗಿ ಮಾರುವವರಿಗೆ ಬೆಂಬಲ ನೀಡುತ್ತಿದ್ದಾರೆ. ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ತಿಳಿಸಿದರೆ ದಾಳಿ ಮಾಡುವುದಾಗಿ ಹೇಳಿ, ದಾಳಿಗೆ ಮುನ್ನ ಅಂಗಡಿಗಳಿಗೆ ಮಾಹಿತಿ ನೀಡುತ್ತಾರೆ ಎಂದು ಇಲಾಖೆ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ ವರುಣಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಿರ್ಮಿತಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದ್ದು ನಿಗದಿತ ಅವಧಿಗೆ ಪೂರ್ಣ ಮಾಡದೇ ಹಣ ವಾಪಸ್ಸು ಹೋಗುವಂತಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಂಜನಗೂಡು ಪಟ್ಟಣದ ಸಮೀಪವಿರುವ ಆದರ್ಶ ಶಾಲೆಯಲ್ಲಿ ಮುಖ್ಯ ಶಿಕ್ಷಕಿ 19 ಲಕ್ಷ ಅವ್ಯವಹಾರ ಮಾಡಿದ್ದು, ದೊಡ್ಡ ಚರ್ಚೆಗೆ ಗ್ರಾಸವಾಯಿತು.
ತನಿಖೆ ಮಾಡಿ ಅಮಾನತ್ತು ಮಾಡುವ ಬದಲಾಗಿ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮಹದೇವಯ್ಯ, ಬಿ.ಎಸ್.ರಾಮು, ಹೆಚ್.ಎಸ್. ಮೂಗಶೆಟ್ಟಿ, ಬಸವರಾಜು, ಕೊಂಗಳ್ಳಿ ಬಸವರಾಜು, ಸಭೆಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ರಾಜಕೀಯ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಗುಣಮಟ್ಟ ಶಿಕ್ಷಣ ನೀಡದೇ ಅಸಭ್ಯ ವರ್ತನೆ ಮಾಡುತ್ತಿದ್ದಾರೆ ಎಂದು ತಾಪಂ ಸದಸ್ಯ ಬಿ.ಎಂ.ರಾಮು ಆರೋಪಿಸಿದರಲ್ಲದೇ ಮೊರಾರ್ಜಿ ವಸತಿ ಶಾಲೆಯ ಸಿಬ್ಬಂದಿಗಳು ವಿದ್ಯಾರ್ಥಿಗಳ ಮುಂದೆಯೇ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು, ಸಿಬ್ಬಂದಿಗಳನ್ನು ಎತ್ತಂಗಡಿ ಮಾಡದಿದ್ದರೆ ತಾಲೂಕು ಕಛೇರಿ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಸಿದರು.
ಮಾಜಿ ಮಂತ್ರಿ ಹೆಚ್.ಸಿ.ಮಹದೇವಪ್ಪರವರ ಸ್ವಗ್ರಾಮ ಹದಿನಾರು ಸರ್ಕಾರಿ ಶಾಲೆಯಲ್ಲಿ ಕೆಲವು ದಿನಗಳÀ ಹಿಂದೆ ವಿದ್ಯಾರ್ಥಿನಿಯ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿತ್ತು. ಪೋಷಕರು ಪ್ರತಿಭಟನೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು.
ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಶಿಕ್ಷಕಿಯನ್ನು ಆ ಶಾಲೆಯಿಂದ ತಮ್ಮ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿರುವ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್ರವರ ವಿರುದ್ಧ ತಾಪಂ ಉಪಾಧ್ಯಕ್ಷ ಗೋವಿಂದರಾಜು ಸೇರಿದಂತೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಮಟ್ಟದ ಕೆಲವು ಅಧಿಕಾರಿಗಳು ಸಭೆ ಬಾರದೇ ತಮ್ಮ ಸಿಬ್ಬಂದಿಗಳನ್ನು ಸಭೆಗೆ ಕಳುಹಿಸುವ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಬೇಕೆಂದು ಜನಪ್ರತಿನಿಧಿಗಳು ತಿಳಿಸಿದರು. ಕೆ.ಡಿ.ಪಿ. ಮತ್ತು ಸಾಮಾನ್ಯ ಸಭೆಗಳಲ್ಲಿ ಕೆಲವು ಅಧಿಕಾರಿಗಳು ಲೋಪದೋಷಗಳ ವಿರುದ್ಧ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಇದೂವರೆಗೂ ಯಾವ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹೆಮ್ಮರಗಾಲ ಶಿವಣ್ಣ ಅವಿರೋಧವಾಗಿ ಪುನರಾಯ್ಕೆಯಾದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸ್, ತಾ.ಪಂ. ಸದಸ್ಯರಾದ ಸವಿತಾ ರಂಗನಾಥ್, ಬಸವರಾಜು, ಮಹದೇವನಾಯಕ, ಶಿವಣ್ಣ, ಸಮಾಜ ಕಲ್ಯಾಣ ಅಧಿಕಾರಿ ಜನಾರ್ಧನ್, ಪಶುಸಂಗೋಪನಾ ಅಧಿಕಾರಿ ಮಂಜುನಾಥ್, ಸಿ.ಡಿ.ಪಿ.ಓ.ಅಧಿಕಾರಿ ಗೀತಾಲಕ್ಷ್ಮಿ, ಆರೋಗ್ಯಾಧಿಕಾರಿ ಕಲಾವತಿ, ಹಿಂದುಳಿದ ವರ್ಗಗಳ ವಸತಿ ನಿಲಯದ ವಿಸ್ತರಣಾಧಿಕಾರಿ ಸ್ವಾಮಿ, ಅರಣ್ಯಾಧಿಕಾರಿ ಪರಮೇಶ್, ಅಬಕಾರಿ ಅಧಿಕಾರಿ ವಿಠಲ್ರಾವ್ ವಾಲಿ, ತಾ.ಪಂ. ವ್ಯವಸ್ಥಾಪಕ ನಂಜುಂಡಸ್ವಾಮಿ, ತಾ.ಪಂ. ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.