ಮೂವರು ಕಳ್ಳರಿಗೆ 1 ವರ್ಷ ಸಾದಾ ಸಜೆ
ಮಡಿಕೇರಿ: ಅಂಗಡಿಯೊಂದರ ಬೀಗ ಮುರಿದು 2.85 ಲಕ್ಷ ನಗದು ಮತ್ತು 13 ಚೀಲ ಕರಿಮೆಣಸು ಕಳವು ಮಾಡಿದ್ದ ಮೂವರು ಕಳ್ಳರಿಗೆ ಮಡಿಕೇರಿ ಜೆಎಂಎಫ್‍ಸಿ ನ್ಯಾಯಾಲಯ 1 ವರ್ಷ ಸಾದಾ ಸಜೆ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿದೆ.
ಪನಕ್ಕಲ್ ಚಂದ್ರನ್, ಪಿಚ್ಚೆಘÀನಿ, ರಜೀಶ್ ಅಪರಾಧಿಗಳಾಗಿದ್ದು, ಜೆಎಂಎಫ್‍ಸಿ ನ್ಯಾಯಾಧೀಶರಾದ ಬಿ.ಕೆ.ಮನು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಹಿನ್ನೆಲೆ: ಮೂರ್ನಾಡು ಕೆ.ಎ.ಅಬ್ದುಲ್ ಖಾಸಿಂ ಎಂಬುವರು ಸುಗುಣ ಕಾಂಪ್ಲೆಕ್ಸ್‍ನಲ್ಲಿ ಕಾಫಿ ಮತ್ತು ಕರಿಮೆಣಸು ಖರೀದಿ ಅಂಗಡಿ ನಡೆಸುತ್ತಿದ್ದರು. 2013ರ ಜುಲೈ 5 ರಂದು ರಾತ್ರಿ 9 ಗಂಟೆ ಬಳಿಕ ಮನೆಗೆ ತೆರಳಿದ್ದರು. ಆದರೆ ಕಾಫಿ ವ್ಯಾಪಾರಕ್ಕೆಂದು ಮುಸ್ತಾಫ ಎಂಬುವರು ನೀಡಿದ್ದ 2 ಲಕ್ಷ ನಗದು ಮತ್ತು ತಮ್ಮ ಬಳಿಯಿದ್ದ 85 ಸಾವಿರ ರೂ.ಗಳನ್ನು ಅಂಗಡಿಯ ಡ್ರಾಯರ್‍ನಲ್ಲಿಯೇ ಇಟ್ಟು ಮನೆಗೆ ತೆರಳಿದ್ದರು. ಅಂಗಡಿಯಲ್ಲಿ 60 ಕೆ.ಜಿ.ಯ 25 ಚೀಲ ಮತ್ತು 77 ಕೆ.ಜಿ.ಯ 1 ಚೀಲ ಕರಿಮೆಣಸು ದಾಸ್ತಾನು ಮಾಡಲಾಗಿತ್ತು. ಆ ರಾತ್ರಿ ಡಿಎಲ್-9, ಸಿಜಿ-8008 ಸಂಖ್ಯೆಯ ಕ್ವಾಲೀಸ್ ವಾಹನದಲ್ಲಿ ಬಂದ ಪನಕ್ಕಲ್ ಚಂದ್ರನ್, ಪಿಚ್ಚೆಘನಿ, ರಜೀಶ್ ಮತ್ತು ಅಬ್ದುಲ್ ಆಲಿ ಅಂಗಡಿಯ ಬಾಗಿಲು ಮುರಿದು ಕರಿಮೆಣಸು ಮತ್ತು ಡ್ರಾಯರ್‍ನಲ್ಲಿದ್ದ ನಗದನ್ನು ಕಳವು ಮಾಡಿದ್ದರು.
ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು 3 ಆರೋಪಿಗಳನ್ನೂ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರ ಪರವಾಗಿ ಸರಕಾರಿ ಅಭಿಯೋಜಕ ಬಿ.ಎಸ್. ಸಂತೋಷ್ ವಾದ ಮಂಡಿಸಿದ್ದರು. ಪ್ರಕರಣದ 4ನೇ ಆರೋಪಿ ಅಬ್ದುಲ್ ಆಲಿ ತಲೆಮರೆಸಿ ಕೊಂಡಿದ್ದು, ಶಿಕ್ಷೆ ಪ್ರಕಟಣೆ ಬಾಕಿಯಿದೆ.