ವರಿಷ್ಠರ ಕಟ್ಟಾದೇಶ: ಮೇ 23ರವರೆಗೆ ಆಪರೇಷನ್ ಕಮಲಕ್ಕೆ ಬ್ರೇಕ್
ಮೈಸೂರು

ವರಿಷ್ಠರ ಕಟ್ಟಾದೇಶ: ಮೇ 23ರವರೆಗೆ ಆಪರೇಷನ್ ಕಮಲಕ್ಕೆ ಬ್ರೇಕ್

April 26, 2019

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಳ್ಳುವವರೆಗೂ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರ ವನ್ನು ಉರುಳಿಸುವ ಪ್ರಯತ್ನಕ್ಕೆ ಕೈ ಹಾಕ ದಂತೆ ರಾಜ್ಯ ಬಿಜೆಪಿ ಮುಖಂಡರಿಗೆ ಆ ಪಕ್ಷದ ವರಿಷ್ಠರು ಕಟ್ಟಾದೇಶ ಮಾಡಿದ್ದಾರೆ.

ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ಆರಂಭಕ್ಕೂ ಮುನ್ನ ಪಕ್ಷದ ವರಿಷ್ಠರು ಈ ಆದೇಶ ಮಾಡಿದ್ದಲ್ಲದೆ, ಮೇ23ರ ನಂತರ ಸರ್ಕಾರ ಬದಲಾವಣೆಗೆ ಸಂಬಂಧಿ ಸಿದಂತೆ ನಾವೇ ನಿರ್ಧಾರ ತೆಗೆದುಕೊಳ್ಳು ತ್ತೇವೆ ಎಂಬ ಮಾಹಿತಿ ಕೂಡ ನೀಡಿದ್ದಾರೆ.

ಬಿಜೆಪಿ ಹೈಕಮಾಂಡ್ ನೀಡಿದ ಈ ಸೂಚನೆಯ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಸಭೆ, ಮೇ ಇಪ್ಪತ್ಮೂರರವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಯಾವ ಶಾಸಕರ ಜತೆಗೂ ಕರ್ನಾಟಕದ ನಾಯಕರು ಮಾತನಾಡಕೂಡದು ಎಂಬ ತೀರ್ಮಾನಕ್ಕೆ ಬರಲಾಗಿದೆ.

ನೀವು ಯಾವುದೇ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆ ಯುವುದಾಗಲೀ, ಇಲ್ಲವೆ ಅವರ ಜೊತೆ ಸಂಪರ್ಕವನ್ನೂ ಇಟ್ಟುಕೊಳ್ಳಬೇಡಿ ಎಂದು ಸೂಚಿಸಿದೆ. ರಾಷ್ಟ್ರ ಮಟ್ಟದಲ್ಲಿ ಇನ್ನು ನಾಲ್ಕೈದು ಹಂತಗಳಲ್ಲಿ ಚುನಾ ವಣೆ ಇದೆ. ಈ ಸಂದರ್ಭದಲ್ಲಿ ಸರ್ಕಾರ ಬೀಳಿಸುವುದಕ್ಕೆ ಕೈ ಹಾಕಿ, ರಾಡಿ ಮಾಡಿಕೊಳ್ಳುವುದು ಬೇಡ. ಈಗಾಗಲೇ ಎರಡು ಬಾರಿ ಸರ್ಕಾರ ಬೀಳಿಸಲು ಹೋಗಿ, ಅಪಮಾನಕ್ಕೆ ಒಳಗಾಗಿದ್ದೀರಿ. ಫಲಿತಾಂಶ ಬಂದ ನಂತರ ನಾವೇ ನಿರ್ಧಾರ ಕೈಗೊಳ್ಳುತ್ತೇವೆ. ನೀವು ಯಾವುದೇ ಕಾರಣಕ್ಕೂ ಸರ್ಕಾರ ರಚನೆಗೆ ಮುಂದಾಗಬಾರದು ಎಂದು ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣೆ ಮುಗಿಯುತ್ತಿ ದ್ದಂತೆ ಕುಮಾರಸ್ವಾಮಿ ಸರ್ಕಾರ ಉರುಳಿಸಿ, ಸರ್ಕಾರ ರಚನೆ ಕಸರತ್ತಿಗೆ ಯಡಿಯೂರಪ್ಪ ಚಾಲನೆ ನೀಡಿದ್ದರು. ಇದಕ್ಕಾಗಿ ಕಾಂಗ್ರೆಸ್‍ನ ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ಅವರನ್ನು ಮುಂದಿಟ್ಟುಕೊಂಡಿದ್ದರು. ಯಡಿಯೂರಪ್ಪ ಸಲಹೆಯಂತೆ ನಿನ್ನೆ ರಮೇಶ್ ಬಾಂಬ್ ಸಿಡಿಸಿ, ಸಂಜೆ ವೇಳೆಗೆ ತಮ್ಮ ಮಾತನ್ನೇ ಬದಲಾವಣೆ ಮಾಡಿಕೊಂಡರು. ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿದರೆ ಲೋಕಸಭಾ ಚುನಾವಣೆಯ ಮುನ್ನವೇ ಬಿಜೆಪಿಯ ಅಧಿಕಾರ ದಾಹ ಹೆಚ್ಚಿದೆ ಎಂದು ರಾಷ್ಟ್ರ ಮಟ್ಟದಲ್ಲಿ ಪ್ರತಿಬಿಂಬಿತವಾಗುವ ಅಪಾಯವಿದೆ ಎಂದು ಬಿಜೆಪಿ ವರಿಷ್ಠರು ಎಚ್ಚರಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಬಂಡಾಯದ ಮಾತನಾಡುತ್ತಿರುವ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಜತೆ ಮಾತುಕತೆ ನಡೆಸಕೂಡದು ಎಂದು ಕೋರ್ ಕಮಿಟಿ ಸಭೆ ನಿರ್ಧರಿಸಿದೆ. ಉನ್ನತ ಮೂಲಗಳ ಪ್ರಕಾರ, ಮೇ ಇಪ್ಪತ್ಮೂರರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿ ಹೈಕಮಾಂಡ್ ಅತೀವ ನಿರೀಕ್ಷೆ ಇರಿಸಿಕೊಂಡಿದ್ದು, ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುತ್ತೇವೆ. ಇಲ್ಲದಿದ್ದರೂ ಎನ್.ಡಿ.ಎ ಮಿತ್ರ ಪಕ್ಷಗಳ ಜತೆಗೂಡಿ ಅಧಿಕಾರ ಹಿಡಿಯುತ್ತೇವೆ ಎಂಬ ವಿಶ್ವಾಸವಿಟ್ಟುಕೊಂಡಿದೆ. ಅಧಿಕಾರ ಹಿಡಿಯುವವರೆಗೆ ಯಾರೂ ರಾಜ್ಯ ಮಟ್ಟಗಳಲ್ಲಿ ಸರ್ಕಾರ ರಚಿಸಲು ಅಥವಾ ಇರುವ ಸರ್ಕಾರವನ್ನು ಕೆಡವಲು ಉತ್ಸುಕತೆ ತೋರಬಾರದು ಎಂಬುದು ಹೈಕಮಾಂಡ್ ಸೂಚನೆ.

ಕರ್ನಾಟಕ ಮಾತ್ರವಲ್ಲ, ರಾಜಸ್ತಾನ, ಮಧ್ಯಪ್ರದೇಶದಲ್ಲೂ ಅಸ್ತಿತ್ವದಲ್ಲಿರುವ ಬಿಜೆಪಿಯೇತರ ಸರ್ಕಾರಗಳನ್ನು ಕೆಡವಿ ಕಮಲ ಪಾಳೆಯದ ಬಾವುಟ ಹಾರಾಡುವಂತೆ ಮಾಡುವುದು ವರಿಷ್ಠರ ಉದ್ದೇಶ. ಈ ಉದ್ದೇಶ ನೆರವೇರಬೇಕೆಂದರೆ ರಾಜ್ಯ ಘಟಕಗಳು ಯಾವ ಕಾರಣಕ್ಕೂ ಆಪರೇಷನ್ ಕಮಲ ಕಾರ್ಯಾಚರಣೆಗೆ ತರಾತುರಿಯಲ್ಲಿ ಕೈ ಹಾಕಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಕಾರ್ಯಾಚರಣೆ ನಡೆಸಲು ಅಗತ್ಯವಾದ ವೇದಿಕೆಯನ್ನು ನಾವು ಸಜ್ಜು ಮಾಡುತ್ತೇವೆ.

ಕರ್ನಾಟಕದಲ್ಲಿ ಈಗಾಗಲೇ ಆಪರೇಷನ್ ಕಮಲ ಕಾರ್ಯಾಚರಣೆ ಹಲವು ಹಂತಗಳಲ್ಲಿ ವಿಫಲವಾಗಿದೆ.ಹಾಗೆಯೇ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ.ಹೀಗಾಗಿ ಈಗ ಕರ್ನಾಟಕದಲ್ಲಿ ಚುನಾವಣೆ ಮುಗಿಯಿತು ಎಂಬ ಕಾರಣಕ್ಕಾಗಿ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಮಾಡಬೇಡಿ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಕೂಡಲೇ ಕರ್ನಾಟಕದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳೆಯದ ಇಪ್ಪತ್ತಕ್ಕೂ ಹೆಚ್ಚು ಶಾಸಕರು ನಮ್ಮ ಕಡೆ ಬರಲಿದ್ದಾರೆ. ಈ ವಿಷಯದಲ್ಲಿ ನಾವು ನಿರಂತರ ಸಂಪರ್ಕದಲ್ಲಿದ್ದೇವೆ.ಹೀಗಾಗಿ ಮೇ ಇಪ್ಪತ್ಮೂರರವರೆಗೆ ಎಲ್ಲರೂ ಮೌನವಾಗಿರಿ.ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ವರಿಷ್ಠರು ರಾಜ್ಯ ಘಟಕದ ನಾಯಕರಿಗೆ ಹೇಳಿದ್ದಾರೆ. ಸರ್ಕಾರ ರಚಿಸಲು ನೆರವು ನೀಡಲು ಮುಂದಾಗಿರುವ ಶಾಸಕರು ಮೇ ಇಪ್ಪತ್ಮೂರರವರೆಗೆ ಗೌಪ್ಯತೆ ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ. ಹೀಗಾಗಿ ನಾವು ಅವರ ಭಾವನೆಯನ್ನು ಗೌರವಿಸಬೇಕು.

ಮೌನವಾಗಿರಬೇಕು ಎಂದು ಹೈಕಮಾಂಡ್ ರಾಜ್ಯ ಘಟಕದ ನಾಯಕರಿಗೆ ಸೂಚಿಸಿದ್ದು, ವರಿಷ್ಠರ ಸೂಚನೆಯನ್ನು ಪಾಲಿಸಲು ಇಂದು ನಡೆದ ಕೋರ್ ಕಮಿಟಿ ಸಭೆ ನಿರ್ಧರಿಸಿದೆ.

ಈ ಮಧ್ಯೆ ಕರ್ನಾಟಕದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 21 ಹಾಗೂ ಗರಿಷ್ಟ 22 ಕ್ಷೇತ್ರಗಳಲ್ಲಿ ಗೆಲುವು ಲಭ್ಯವಾಗಲಿದೆ ಎಂಬ ಕುರಿತು ವಿವಿಧ ನಾಯಕರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಈ ಮಧ್ಯೆ ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ತೆರವಾದ ಚಿಂಚೋಳಿ ಕ್ಷೇತ್ರದಿಂದ ಅವರ ಸಹೋದರ ರಾಮಚಂದ್ರ ಜಾಧವ್, ಕುಂದಗೋಳಕ್ಕೆ ಚಿಕ್ಕನ್ ಗೌಡ ಅವರನ್ನು ಕಣಕ್ಕಿಳಿಸಲು ಸಭೆ ತೀರ್ಮಾನಿಸಿತು.

Translate »