ಕ್ಯಾತಮಾರನಹಳ್ಳಿ ರಾಜು ಸೇರಿ ಹಲವು ಹತ್ಯೆಗಳ ಆರೋಪಿ ಟಿಂಬರ್ ಅತೀಫ್ ಬಂಧನ
ಮೈಸೂರು

ಕ್ಯಾತಮಾರನಹಳ್ಳಿ ರಾಜು ಸೇರಿ ಹಲವು ಹತ್ಯೆಗಳ ಆರೋಪಿ ಟಿಂಬರ್ ಅತೀಫ್ ಬಂಧನ

April 26, 2019

ಮೈಸೂರು: ಒಂದು ದಶಕದ ಕಾಲ ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವು ನಗರ ಹಾಗೂ ಆಂಧ್ರಪ್ರದೇಶ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ, ಮೈಸೂರಿನ ಹಲವು ಬರ್ಬರ ಹತ್ಯೆಗಳ ಮಾಸ್ಟರ್‍ಮೈಂಡ್, ಕುಖ್ಯಾತ ಹಂತಕನೋರ್ವನನ್ನು ಬಂಧಿಸುವಲ್ಲಿ ಮೈಸೂರಿನ ಸಿಸಿಬಿ ಮತ್ತು ಕುವೆಂಪುನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರಿನ ಲಷ್ಕರ್‍ಮೊಹಲ್ಲಾದ ಎರೆಕಟ್ಟೆ ಬೀದಿ ನಿವಾಸಿ ಅಬ್ದುಲ್ ರವೂಫ್ ಷರೀಫ್ ಪುತ್ರ ಅತೀಫ್ ಅಹಮದ್ ಷರೀಫ್ ಅಲಿಯಾಸ್ ಟಿಂಬರ್ ಅತೀಫ್ (39) ಪೊಲೀಸರಿಗೆ ಸೆರೆ ಸಿಕ್ಕಿರುವ ಕುಖ್ಯಾತ ಹಂತಕನಾಗಿದ್ದು, ವ್ಯವಸ್ಥಿತ ಯೋಜನೆ ರೂಪಿಸಿ ಈತನನ್ನು ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ ಪೊಲೀಸರು, ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈತ ವೃತ್ತಿನಿರತ ಹಂತಕನಾ ಗಿದ್ದು, ವಿವಿಧ ನಗರಗಳಲ್ಲಿ ತನ್ನದೇ ಆದ ತಂಡವನ್ನು ಕಟ್ಟಿಕೊಂಡು ತಾನು ಹತ್ಯೆ ಮಾಡಬೇಕಾದ ವ್ಯಕ್ತಿಯ ಚಲನ-ವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ವ್ಯವಸ್ಥಿತ ಸಂಚು ರೂಪಿಸಿ, ಕ್ಷಣಾರ್ಧದಲ್ಲೇ ಹತ್ಯೆಗೈದು ಪರಾರಿಯಾಗುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಲವು ಹತ್ಯೆ ಪ್ರಕರಣಗಳಲ್ಲಿ ಈತನ ತಂಡದ ಇತರ ಹಂತಕರು ಸಿಕ್ಕಿಬೀಳು ತ್ತಿದ್ದರಾದರೂ ಈತ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ಎಂದು ಹೇಳಲಾಗಿದೆ.

2008ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಕೊಲೆ ಪ್ರಕರಣ ವೊಂದರ ಮೂಲಕ ಪೊಲೀಸರಿಗೆ ಈತನ ಕುಕೃತ್ಯಗಳು ತಿಳಿಯತೊಡಗಿತು. ಅಂದಿನಿಂದಲೂ ಮೈಸೂರು ಪೊಲೀಸರು ಈತನ ಸೆರೆಗಾಗಿ ಹುಡುಕಾಟ ನಡೆಸಿದ್ದರಾದರೂ, ಆತ ಸಿಕ್ಕಿಬೀಳಲಿಲ್ಲ. ಉದಯಗಿರಿಯಲ್ಲಿ ಆರ್‍ಎಸ್‍ಎಸ್ ಮುಖಂಡ ಕ್ಯಾತಮಾರನಹಳ್ಳಿ ರಾಜು ಹತ್ಯೆ ಪ್ರಕರಣ ಈತನ ಮೇಲೆ ಮೈಸೂರಿನಲ್ಲಿ ದಾಖಲಾಗಿರುವ ಕೊನೆ ಪ್ರಕರಣವಾಗಿದೆಯಾದರೂ ನಂತರವೂ ಈತ ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದನೆ? ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿಯಬೇಕಾಗಿದೆ.

ಟಿಂಬರ್ ಅತೀಫ್ ಕುಕೃತ್ಯಗಳು: 2008ರಲ್ಲಿ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆನ್ಸ್ ಪಾರ್ಲರ್ ನಡೆಸುತ್ತಿದ್ದ ಜಿಮ್ ಮಾಲೀಕ ಶಶಿಕುಮಾರ್‍ನನ್ನು ಬೆಳಂಬೆಳಿಗ್ಗೆ ಆತ ಪಾರ್ಲರ್ ಬಾಗಿಲು ತೆಗೆಯುತ್ತಿದ್ದಂತೆಯೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಹಂತಕರ ಸುಳಿವು ಸಿಗದೆ ಪೊಲೀಸರು ಪರದಾಡುವಂತಾಗಿತ್ತು. ಉದಯಗಿರಿ ಪೊಲೀಸರಿಂದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಆಗಲೂ ಪ್ರಯೋಜನವಾಗದಿದ್ದಾಗ ಪ್ರಕರಣ ಸಿಐಡಿ ತನಿಖೆಗೆ ಒಳಪಡಿಸಲಾಗಿತ್ತು. ಈತನ ಬಂಧನದಿಂದಾಗಿ ವರ್ಷಗಳ ನಂತರ ನೆನೆಗುದಿಗೆ ಬಿದ್ದಿದ್ದ ಈ ಪ್ರಕರಣದ ತನಿಖೆಗೆ ಸಿಐಡಿ ಪೊಲೀಸರು ಮರುಜೀವ ನೀಡಲಿದ್ದಾರೆ.

ಮೈಸೂರು ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಹುಣಸೂರಿನ ಉದ್ಯಮಿಗಳ ಇಬ್ಬರು ಪುತ್ರರನ್ನು ಮೈಸೂರಿನಲ್ಲಿ ಅಪಹರಿಸಿ ನಂತರ ಹತ್ಯೆಗೈದು ಮೃತದೇಹಗಳನ್ನು ದೊಡ್ಡಬಳ್ಳಾಪುರ ಬಳಿ ಎಸೆದುಹೋಗಿದ್ದ ಪ್ರಕರಣದಲ್ಲೂ ಕೂಡ ಈತನೇ ಮಾಸ್ಟರ್‍ಮೈಂಡ್ ಎನ್ನಲಾಗಿದೆ.

2009ರ 2ನೇ ಆಷಾಢ ಶುಕ್ರವಾರದಂದು ಸಂಜೆ ಬಿಜೆಪಿ ಮುಖಂಡ ಗಿರಿಧರ್ ಮೇಲೆ ಅವರ ಮನೆ ಮುಂದೆಯೇ ಪತ್ನಿ ಕಣ್ಣೆದುರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಹಲವಾರು ದಿನ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಗಿರಿಧರ್ ಅವರಿಗೆ ಸರ್ಕಾರವೇ ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸುವ ಮೂಲಕ ಅವರ ಪ್ರಾಣ ಉಳಿಸಿತ್ತು. ಈ ಪ್ರಕರಣದಲ್ಲಿ ಅಭಿತ್‍ಪಾಷ, ಮುಜಾಮಿಲ್, ಆಮೀನ್ ಮುಂದಾದವರು ಸಿಕ್ಕಿಬಿದ್ದಾಗ ಇದರಲ್ಲಿ ಟಿಂಬರ್ ಅತೀಫ್ ಮಾಸ್ಟರ್ ಮೈಂಡ್ ಆಗಿದ್ದ ಎಂಬುದು ಪೊಲೀಸರಿಗೆ ತಿಳಿದುಬಂತು.

ಅದೇ ವರ್ಷ ಲಷ್ಕರ್‍ಮೊಹಲ್ಲಾದಲ್ಲಿ ಆನಂದ್‍ಪೈ ಮತ್ತು ರಮೇಶ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಅದರಲ್ಲಿ ರಮೇಶ್ ಮೃತಪಟ್ಟಿದ್ದರು. ಅಲ್ಲದೇ ಮಂಡಿಮೊಹಲ್ಲಾದಲ್ಲಿ ಸಹೋದರರಾದ ಸತೀಶ್ ಮತ್ತು ಹರೀಶ್ ಎಂಬುವರ ಮೇಲೆಯೂ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಸತೀಶ್ ಸಾವನ್ನಪ್ಪಿದ್ದರು. ಇವರುಗಳ ಹತ್ಯೆಗೆ ವ್ಯವಸ್ಥಿತ ಸಂಚು ರೂಪಿಸಿದ್ದೇ ಈತ ಎಂಬುದು ವಿಚಾರಣೆ ವೇಳೆ ತಿಳಿದುಬಂದಿತ್ತು.

ಹುಣಸೂರು ವಿದ್ಯಾರ್ಥಿಗಳ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಆರ್‍ಎಸ್‍ಎಸ್ ಮುಖಂಡ ಕ್ಯಾತಮಾರನಹಳ್ಳಿ ರಾಜುವನ್ನು 2016ರಲ್ಲಿ ಹಾಡಹಗಲೇ ಉದಯಗಿರಿ ಮುಖ್ಯರಸ್ತೆಯ ಟೀ ಅಂಗಡಿ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲೂ ಟಿಂಬರ್ ಅತೀಫ್ ಮಾಸ್ಟರ್‍ಮೈಂಡ್ ಆಗಿ ಕಾರ್ಯನಿರ್ವಹಿಸಿದ್ದ ಎಂಬುದು ಇತರೆ ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ತಿಳಿದುಬಂದಿತ್ತು. ಸತತವಾಗಿ ಈತ ಹತ್ಯೆಗಳನ್ನು ನಡೆಸುತ್ತಿದ್ದನಾದರೂ, ಪೊಲೀಸರು ಈತನನ್ನು ಬಂಧಿಸುವಲ್ಲಿ ವಿಫಲರಾಗುತ್ತಲೇ ಇದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಈತ ನಿಸ್ಸೀಮನಾಗಿದ್ದ.

ಪುರುಷರನ್ನು ಮಾತ್ರವಲ್ಲದೇ ಮಹಿಳೆಯೋರ್ವಳ ಹತ್ಯೆಯನ್ನು ಕೂಡ ಈತ ವ್ಯವಸ್ಥಿತ ಸಂಚು ರೂಪಿಸಿ ನಡೆಸಿದ್ದ ಎಂಬ ವಿಷಯ ಕ್ಯಾತಮಾರನಹಳ್ಳಿ ರಾಜು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ.
ಕುಖ್ಯಾತ ಹಂತಕ ಟಿಂಬರ್ ಅತೀಫ್ ಬಂಧಿಸಲ್ಪಟ್ಟಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಹೈದರಾಬಾದ್ ಪೊಲೀಸರು ಮೈಸೂರಿಗೆ ಆಗಮಿಸಿದ್ದು, ಅಲ್ಲಿನ ಹತ್ಯೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆತನನ್ನು ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಮಾರ್ಗದರ್ಶನದಲ್ಲಿ ಡಿಸಿಪಿ ಎಂ. ಮುತ್ತುರಾಜ್, ಸಿಸಿಬಿ ಎಸಿಪಿ ವಿ. ಮರಿಯಪ್ಪ ನೇತೃತ್ವದಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಸಿ. ಕಿರಣ್‍ಕುಮಾರ್, ಕುವೆಂಪುನಗರ ಠಾಣೆಯ ಇನ್ಸ್‍ಪೆಕ್ಟರ್ ಜಿ.ಸಿ. ರಾಜು, ಸಿಬ್ಬಂದಿಗಳಾದ ನಿರಂಜನ್ ಮತ್ತು ರಾಜೇಂದ್ರ ಅವರುಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »