ಸೂಕ್ತ ಕಾಲಕ್ಕೆ ಚಿಕಿತ್ಸೆ ನೀಡಿದ್ದರೆ ದ್ರೋಣ ಬದುಕುತ್ತಿದ್ದನೆ…?
ಮೈಸೂರು

ಸೂಕ್ತ ಕಾಲಕ್ಕೆ ಚಿಕಿತ್ಸೆ ನೀಡಿದ್ದರೆ ದ್ರೋಣ ಬದುಕುತ್ತಿದ್ದನೆ…?

April 28, 2019

ಮೈಸೂರು: ಅಂಬಾರಿ ಆನೆ ಅರ್ಜುನನ ನಂತರ ಮೈಸೂರು ದಸರಾ ಉತ್ಸವದಲ್ಲಿ ಅಂಬಾರಿ ಹೊರುವ ಸಾಮಥ್ರ್ಯವಿದೆ ಎಂದು ಅರಣ್ಯಾಧಿಕಾರಿಗಳು ಹಾಗೂ ಸಾಕಾನೆಗಳ ಆರೋಗ್ಯದ ಉಸ್ತುವಾರಿ ಹೊಣೆ ಹೊತ್ತಿರುವ ಪಶುವೈದ್ಯರಿಗೆ ಭರವಸೆ ಮೂಡಿಸಿದ್ದ ದ್ರೋಣ, ಅಧಿಕಾರಿಗಳ ತೀವ್ರ ನಿರ್ಲಕ್ಷ್ಯತೆಯಿಂದಾಗಿ ಸೂಕ್ತ ಕಾಲಕ್ಕೆ ಚಿಕಿತ್ಸೆ ದೊರೆಯದೇ ನರಳಿ-ನರಳಿ ಸತ್ತನೆಂಬ ಆರೋಪಗಳು ಕೇಳಿ ಬರುತ್ತಿವೆ.

ಕೊಡಗಿನ ಮತ್ತಿಗೋಡು ಶಿಬಿರದಲ್ಲಿದ್ದ ದ್ರೋಣ ಕೆಲ ದಿನಗಳಿಂದಲೇ ಅನಾರೋಗ್ಯಕ್ಕೆ ತುತ್ತಾಗಿದ್ದನೆಂದು ಹೇಳ ಲಾಗುತ್ತಿದ್ದು, ಈ ಬಗ್ಗೆ ಅಲ್ಲಿನ ಮಾವುತರು ಅರಣ್ಯಾಧಿಕಾರಿ ಗಳಿಗೆ ತಿಳಿಸಿದ್ದರೂ ಕೂಡ ಪಶುವೈದ್ಯರಿಗೆ ತಿಳಿಸಿ ದ್ರೋಣನಿಗೆ ಸೂಕ್ತ ಚಿಕಿತ್ಸೆ ಕೊಡಿಸದ ಕಾರಣ ಭರವಸೆಯ ಆನೆ ನರಳಿ-ನರಳಿ ಕೊನೆಯುಸಿರೆಳೆಯಿತು ಎಂದು ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ.

ದ್ರೋಣನ ಕೊನೇ ಕ್ಷಣಗಳಲ್ಲಿನ ನರಳಾಟದ 2.09 ನಿಮಿಷಗಳ ವೀಡಿಯೋ ವೈರಲ್ ಆಗಿದ್ದು, ಅನಾರೋಗ್ಯ ಕ್ಕೊಳಗಾಗಿದ್ದ ದ್ರೋಣ, ನಿಲ್ಲಲಾಗದೇ ನರಳಿ-ನರಳಿ ಕೆಳಕ್ಕುರು ಳಿದ ಹೃದಯ ವಿದ್ರಾವಕ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಈ ವೇಳೆ ದ್ರೋಣನನ್ನು ಉಳಿಸಿ ಕೊಳ್ಳಲು, ಆತನ ದೇಹದ ಕಾವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮಾವುತರು ಮತ್ತು ಕಾವಾಡಿಗಳು ಆನೆಗೆ ನೀರನ್ನು ಎರಚುತ್ತಿದ್ದರು. ಅದೇ ವೇಳೆ ಕೆಲ ಮಾವುತರು `ಡಾಕ್ಟರ್‍ಗೆ ಫೋನ್ ಮಾಡು… ಇಷ್ಟೊತ್ತಾದರೂ ಡಾಕ್ಟರ್ ಬರಲೇ ಇಲ್ವಲ್ಲಾ… ಫೋನ್ ಮಾಡು…’ ಎಂದು ಹೇಳುತ್ತಿದ್ದುದು ದ್ರೋಣ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಸಾವನ್ನಪ್ಪಿರುವುದಕ್ಕೆ ಸಾಕ್ಷಿಯಾಗಿದೆ. ಅದೇ ವೇಳೆ ದ್ರೋಣ ಆರೋಗ್ಯದಿಂದಲೇ ಇದ್ದ ಎಂದು ಪಶುವೈದ್ಯ ರಾದ ಡಾ. ಡಿ.ಎನ್.ನಾಗರಾಜು ಮತ್ತು ಡಾ. ಮುಜೀಬ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಕಾಡಿಗೆ ಹೋಗಿ ಹುಲ್ಲು, ಸೊಪ್ಪು ಮೇಯ್ದು ಬಂದಿದ್ದ ದ್ರೋಣ, ಶುಕ್ರವಾರ ಬೆಳಿಗ್ಗೆ 9 ಗಂಟೆವರೆವಿಗೂ ಆರೋಗ್ಯವಾಗಿಯೇ ಇದ್ದ. ಆದರೆ 9.45ರ ಸುಮಾರಿಗೆ ನಿತ್ರಾಣನಾಗಿ ತನ್ನನ್ನು ಕಟ್ಟಿಹಾಕಿದ್ದ ಮರಕ್ಕೆ ದಂತ ಮತ್ತು ಸೊಂಡಿಲನ್ನು ಒರಗಿಸಿಕೊಂಡು ನಿಂತಿದ್ದ. ಇದನ್ನು ಗಮನಿಸಿದ ಮಾವುತ ಗುಂಡ ಮತ್ತು ಕಾವಾಡಿ ರವಿ ಅವರಿಗೆ ಸ್ವಲ್ಪ ಅನುಮಾನ ಬಂದಿದೆ. 10 ಗಂಟೆ ಸುಮಾರಿಗೆ ಮಾವುತ ಗುಂಡ ದ್ರೋಣನಿಗೆ ಬೆಲ್ಲ ನೀಡಿ ಪರಿಶೀಲಿಸಲು ತೆರಳಿದಾಗಿ ದ್ರೋಣನ ವರ್ತನೆಯು ಬದಲಾಗಿರುವುದು ಗೋಚರಿಸಿದೆ. ಇದರಿಂದ ಎಚ್ಚೆತ್ತುಕೊಂಡ ಗುಂಡ, ಇತರೆ ಮಾವುತರು ಮತ್ತು ಕಾವಾಡಿಗಳ ನೆರವನ್ನು ಕೋರಿದ್ದಾನೆ. ತೀವ್ರ ನಿಶ್ಯಕ್ತಿಯಿಂದ ನಿಲ್ಲಲಾಗದೇ ತೂರಾಡುತ್ತಿದ್ದ ದ್ರೋಣನ ಮೇಲೆ ನೀರನ್ನು ಹಾಕಿ, ಆತನ ದೇಹದ ಉಷ್ಣವನ್ನು ಕಡಿಮೆ ಮಾಡಲು ಮಾವುತರು ಹಾಗೂ ಕಾವಾಡಿಗಳು ಪ್ರಯತ್ನಿಸು ತ್ತಿದ್ದಾಗಲೇ ದ್ರೋಣ ನೆಲಕ್ಕುರುಳಿ ಸಾವಿಗೀಡಾಗಿದ್ದಾನೆ. ಆರೋಗ್ಯವಾಗಿಯೇ ಇದ್ದ ಆನೆ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವುದು ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರಿಗೆ ಆಘಾತವನ್ನು ನೀಡಿದೆ. ಈ ಆನೆ ಆಂತ್ರಾಕ್ಸ್‍ನಿಂದ ಸಾವನ್ನಪ್ಪಿರಬಹುದು (ಆಂತ್ರಾಕ್ಸ್ ಕಾಯಿಲೆ ಬಂದರೆ ಪ್ರಾಣಿಗಳು ಹಠಾತ್ತನೆ ಸಾವನ್ನಪ್ಪುತ್ತವೆ) ಎಂಬ ಸಂಶಯದ ಮೇರೆಗೆ ದ್ರೋಣನ ಲದ್ದಿ ಹಾಗೂ ರಕ್ತದ ಮಾದರಿ ಸಂಗ್ರಹಿಸಿ ಮೈಸೂರಿನ ಪಶುವೈದ್ಯಕೀಯ ಆಸ್ಪತ್ರೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ದ್ರೋಣನ ಸಾವಿಗೆ ಆಂತ್ರಾಕ್ಸ್ ಕಾರಣವಲ್ಲ ಎಂಬುದು ಮೇಲ್ನೋಟಕ್ಕೆ ದೃಢಪಟ್ಟ ನಂತರ ಇಂದು ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಿ, ಅದರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಅಲ್ಲದೇ ಆನೆಯ ಶ್ವಾಸಕೋಶ, ಕರುಳು, ಹೃದಯದಲ್ಲಿದ್ದ ರಕ್ತ, ಮೂತ್ರಪಿಂಡ ಮತ್ತು ಲಿವರ್ ಅನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿನ ವರದಿ ಬಂದ ನಂತರ ದ್ರೋಣನ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Translate »