ಮೈಸೂರು: `ಸ್ವಚ್ಛ ಮೈಸೂರು’ ಬಿರುದು ಬರೀ ಕಸ ಗುಡಿಸಿದರೆ, ಸಂಗ್ರಹಿಸಿದರೆ ಮಾತ್ರ ಈ ಬಿರುದು ಬರುವುದಿಲ್ಲ. ಸ್ವಚ್ಛತೆ ಮತ್ತೊಂದು ಘಟ್ಟವಾದ ನಗರದ ಯುಜಿಡಿ ಸಂಪರ್ಕ, ಇದರಿಂದ ಉತ್ಪತ್ತಿಯಾಗುವ ಕಲುಷಿತ ನೀರು ಸಂಸ್ಕರಣೆ ಕುರಿತು ಗಮನ ಹರಿಸಬೇಕು. ಈ ಕುರಿತು ಮೈಸೂರು ಮಹಾನಗರ ಪಾಲಿಕೆ ಇಂಜಿನಿಯರ್‍ಗಳು ಯಾವುದೇ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂಬುದರ ಬಗ್ಗೆ ಮೈಗ್ರಾಪದಲ್ಲಿ ಭಾನುವಾರ ಬಿಸಿ ಬಿಸಿ ಚರ್ಚೆ ನಡೆಯಿತು.
ಮೈಸೂರು ಯಾದವಗಿರಿಯ ಮೈಸೂರು ಗ್ರಾಹಕರ ಪರಿಷತ್ ಕಚೇರಿಯಲ್ಲಿ ಭಾನುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರ `ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ಸಮಸ್ಯೆ ಕುರಿತು’ ಚರ್ಚೆ ನಡೆಯಿತು.
ಮೊದಲಿಗೆ ಮೈಗ್ರಾಪ ಸದಸ್ಯರೊಬ್ಬರು ಚರ್ಚೆ ಆರಂಭಿಸಿ, ರಾಜ್ಯಾದ್ಯಂತ ಮಳೆಗಾಲ ಆರಂಭವಾಗಿದ್ದು, ಅದರಂತೆ ಮೈಸೂರಿ ನಲ್ಲೂ ಮಳೆ ಆರಂಭವಾಗಿದೆ. ಈ ಪ್ರಯುಕ್ತ ನಗರದ ವಿವಿಧೆಡೆ ಯುಜಿಡಿ ಪೈಪ್ ಅಲ್ಲಿಲ್ಲಿ ಕಟ್ಟಿಕೊಂಡು ಯುಜಿಡಿ ಕಲುಷಿತ ನೀರು ಮಳೆ ನೀರಿನ ಜೊತೆ ಸೇರಿ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ವಾಹನ ಸವಾರರಿಗೆ, ಪಾದಚಾರಿಗಳ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಈ ಬಗ್ಗೆ ಮೈಸೂರು ನಗರ ಪಾಲಿಕೆ ಇಂಜಿನಿಯರ್‍ಗಳು ಯಾವುದೇ ಕ್ರಮಗೊಂಡಿಲ್ಲ ಎಂದು ಮೈಗ್ರಾಪದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು.
ಮೈಗ್ರಾಪ ಸದಸ್ಯರೊಬ್ಬರು ಎನ್.ಆರ್.ಮೊಹಲ್ಲಾ ವಿವಿಧ ರಸ್ತೆಗಳಲ್ಲಿ ಯುಜಿಡಿ ಸಮಸ್ಯೆ ಬಗ್ಗೆ ಸಭೆಗೆ ವಿವರಿಸಿದರು. ಮತ್ತೊಬ್ಬರು ವಿಜಯನಗರ 1ನೇ ಹಂತ, 2ಹಂತದಲ್ಲಿ ಯುಜಿಡಿ ಸಮಸ್ಯೆ ಬಗ್ಗೆ ಸಭೆ ವಿವರಿಸಿದರು. ಹೆಬ್ಬಾಳ, ಬೋಗಾದಿ 2ನೇ ಹಂತ, ಕುಂಬಾರಕೊಪ್ಪಲು, ಶಾರದಾದೇವಿ ನಗರ, ಕುವೆಂಪು ನಗರ, ನಿವೇದಿತ ನಗರ, ಶ್ರೀರಾಂಪುರ 2ನೇ ಹಂತ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ತಮ್ಮ ಬಡಾವಣೆಗಳಲ್ಲಿರುವ ಯುಜಿಡಿ ಸಮಸ್ಯೆ ಬಗ್ಗೆ ವಿವರಿಸಿದರು.
ನಗರದಲ್ಲಿ ಜೋರು ಮಳೆ ಸುರಿದರೆ, ಬಹುತೇಕ ಬಡಾವಣೆ ಗಳಲ್ಲಿ ಯುಜಿಡಿ ಪೈಪ್ ಮೂಲಕ ರಸ್ತೆ ಮೇಲೆ ಕಲುಷಿತ ನೀರು ಹರಿಯುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದ್ದು, ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದೆ ಎಂದು ಸದಸ್ಯರೊಬ್ಬರು ಯುಜಿಡಿ ನೀರಿನ ಸೈಡ್ ಎಫೆಕ್ಟ್ ಬಗ್ಗೆ ಸಭೆಗೆ ವಿವರಿಸಿದರು.
ಮುಡಾ ಬಡಾವಣೆ, ಸ್ಲಂ ಬಡಾವಣೆಗಳು, ನಗರ ಮಧ್ಯೆ ಇರುವ ಗ್ರಾಮಗಳು, ಕಂದಾಯ ಬಡಾವಣೆಗಳು ಹಾಗೂ ಖಾಸಗಿ ಬಡಾವಣೆಗಳಲ್ಲಿ ಯುಜಿಡಿ ಸಮಸ್ಯೆ ಉಲ್ಬಣಿಸುತ್ತಿದ್ದು, ಈ ಸಮ ಸ್ಯೆಗೆ ಮೈಸೂರು ನಗರ ಪಾಲಿಕೆ ಇಂಜಿನಿಯರ್‍ಗಳು ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕರು ಈ ಸಮಸ್ಯೆ ಬಗ್ಗೆ ದೂರು ನೀಡಿದರೆ, ತಾತ್ಕಾಲಿಕ ಪರಿಹಾರ ಕೈಗೊಂಡರೂ ನಂತರ ಈ ಸಮಸ್ಯೆ ಮತ್ತೆ ಉಲ್ಬಣಿಸುತ್ತಿದೆ ಎಂದು ವಿವರಿಸಿದರು.
ನಗರದ 3 ಕಡೆ ಯುಜಿಡಿ ನೀರು ಸಂಸ್ಕರಿಸುವ ಘಟಕ ನಿರ್ಮಾಣವಾಗಿದೆ. ಈ ಘಟಕಗಳು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ. ಈ ಘಟಕಗಳಲ್ಲಿ ಸಂಸ್ಕರಣೆಗೊಂಡ ನೀರು ಎಲ್ಲಿಗೆ ಹರಿಸಲಾಗುತ್ತಿದೆ ಎಂಬುದರ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಇದರ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮೂಲಕ, ಖುದ್ದು ಕಚೇರಿಗೆ ಹಾಜರಾಗಿ ವಿಚಾರಿಸಿ ದರೂ ಅಧಿಕಾರಿಗಳ ಬಳಿ ಮಾಹಿತಿ ಲಭ್ಯವಿರುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
`ಸ್ವಚ್ಛ ಮೈಸೂರು’ ಸ್ಲೋಗನ್ ಬಗ್ಗೆ ಅಧಿಕಾರಿಗಳಿಗೆ ಮನವರಿಕೆಯಾಗಿಲ್ಲ. ಇದರ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟತೆ ಬೇಕಿದೆ ಎಂದ ಸದಸ್ಯರೊಬ್ಬರು, ಸೋಲಾರ್ ಅಳವಡಿಸಿಕೊಂಡ ಮನೆಗಳಿಗೆ ವಿದ್ಯುತ್ ಬಿಲ್‍ನಲ್ಲಿ ರಿಯಾಯತಿ ನೀಡಿದಂತೆ, ನಗರದ ವಿವಿಧ ಬಡಾವಣೆಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಅಳವಡಿಸಿಕೊಂಡ ಮನೆ ಮಾಲೀಕರಿಗೆ ಕಂದಾಯದಲ್ಲಿ ರಿಯಾಯತಿ ನೀಡಿ, ಪ್ರೋತ್ಸಾಹಿಸಬೇಕು ಎಂದು ಸಭೆಗೆ ಸಲಹೆ ನೀಡಿದರು.
ಸಭೆಯಲ್ಲಿ ವಾಣಿವಿಲಾಸ ವಾಟರ್ ವಕ್ರ್ಸ್ ಕೇಂದ್ರವಿಭಾಗದ ಎಇಇ ಚನ್ನ ಬಸವೇಗೌಡ ಮೈಗ್ರಾಪ ಸದಸ್ಯರಿಂದ ಯುಜಿಡಿ ಸಮಸ್ಯೆ ಬಗ್ಗೆ ದೂರು ಸ್ವೀಕರಿಸಿದರು. ಮೈಗ್ರಾಪ ಅಧ್ಯಕ್ಷ ಶ್ರೀಮತಿ ಹರಿಪ್ರಸಾದ್, ಕಾರ್ಯಾಧ್ಯಕ್ಷೆ ಪ್ರೊ.ಎಸ್.ಶೋಭನಾ, ಮಾಜಿ ಅಧ್ಯಕ್ಷ ಚಂದ್ರಪ್ರಕಾಶ್, ಜಗನ್ನಾಥ್, ರೇಣು ಅಗರವಾಲ್, ಪ್ರೊ.ಶಂಕರ್, ನಸ್ರೀನ್, ಜಯರಾಮ್, ರಾಘವೇಂದ್ರ, ಪ್ರೊ.ಧನಂಜಯ್ ಸೇರಿದಂತೆ ಸದಸ್ಯರು ಹಾಜರಿದ್ದರು.
ಸದಸ್ಯರಿಂದ ಕೇಳಿ ಬಂದ ಸಲಹೆಗಳು: ಮಳೆ ನೀರು ಕೊಯ್ಲು ಯೋಜನೆ ಅಳವಡಿಸಿಕೊಂಡ ಮನೆ ಮಾಲೀಕರಿಗೆ ಕಂದಾಯದಲ್ಲಿ ರಿಯಾಯತಿ ನೀಡಿ, ಪ್ರೋತ್ಸಾಹಿಸಬೇಕು. ನಗರದ ಯುಜಿಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕು. ಯುಜಿಡಿ ನೀರು ಸಂಸ್ಕರಣಾ ಘಟಕಗಳನ್ನು ಹೆಚ್ಚಿಸಿ, ಈ ನೀರು ಮರು ಬಳಕೆ ಮಾಡಿಕೊಳ್ಳಬೇಕು. `ಸ್ವಚ್ಛ ಮೈಸೂರು’ ಅಭಿಯಾನದಲ್ಲಿ ಯುಜಿಡಿ ಸಮಸ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.