ನಂಜನಗೂಡು: ಮೈಸೂರಿನ ಮದ್ಯ ಮಾರಾಟಗಾರರೊಬ್ಬರು ಸಾಲಗಾರರ ಕಾಟ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ದಾಸೇಗೌಡ ಎಂಬುವರ ಪುತ್ರ ರಮೇಶ್(45) ನೇಣಿಗೆ ಶರಣಾದವರಾಗಿದ್ದು, ಇವರು ನಂಜನಗೂಡಿನ ಅಂಗಡಿ ಬೀದಿಯಲ್ಲಿರುವ ಲಾಡ್ಜ್‍ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಗುರುವಾರ ಸಂಜೆಯಾ ದರೂ ಕೊಠಡಿಯಿಂದ ರಮೇಶ್ ಹೊರ ಬಾರದೇ ಇದ್ದಾಗ ಸಂಶಯ ಗೊಂಡ ಲಾಡ್ಜ್ ಸಿಬ್ಬಂದಿ ಕೊಠಡಿಗೆ ತೆರಳಿ ಗಮನಿಸಿದಾಗ ಅವರು ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಶೇಖರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯ ಮಾರಾಟ ವ್ಯವಹಾರ ನಡೆಸುತ್ತಿದ್ದ ರಮೇಶ್, ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅದನ್ನು ಮರು ಪಾವತಿ ಮಾಡಲಾಗದೇ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು `ಮೈಸೂರು ಮಿತ್ರ’ನಿಗೆ ತಿಳಿಸಿದ ಇನ್ಸ್‍ಪೆಕ್ಟರ್ ಶೇಖರ್, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.
ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ನಾಳೆ (ಶುಕ್ರವಾರ) ಮರಣೋತ್ತರ ಪರೀಕ್ಷೆಯ ನಂತರ ದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.