ಮೈಸೂರು: ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗ ಲಾಡಿಸಿ, ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಹೋರಾಟಗಳು ನಡೆಯುತ್ತಿರುವ ಸಂದಭದಲ್ಲಿಯೇ ಅಂತರ್ಜಾತಿ ವಿವಾಹಕ್ಕೆ ಮೈಸೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಕಾಂತ್ರಿ ಮಾಡಿರುವುದು ಶ್ಲಾಘ ನೀಯ ಎಂದು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರೂ ಆದ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು.
ಮೈಸೂರು ಜಿ.ಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾ ನುಭವಿಗಳಿಗೆ ನೀಡುವ ಸೌಲಭ್ಯಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ಬಿಂದ್ಯಾ ಮಾತನಾಡಿ, ಕಳೆದ ಮೂರು ವರ್ಷದಿಂದ ಮೈಸೂರು ಜಿಲ್ಲೆಯಲ್ಲಿ 797 ಅಂತರ್ಜಾತಿ ವಿವಾಹ ನಡೆದಿದೆ. ಈ ಜೋಡಿಗಳಿಗೆ ಇಲಾಖೆ ವತಿಯಿಂದ ಪ್ರೋತ್ಸಾಹ ದನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಅಂಕಿ ಅಂಶ ಪಡೆಯುತ್ತಿದ್ದಂತೆ ಆಶ್ಚರ್ಯಚಕಿತ ರಾದ ಸಮಿತಿಯ ಅಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹಾಗೂ ಸಮಿತಿ ಸದಸ್ಯರು ನಿಜವಾಗಿಯೂ 797 ಜೋಡಿ ಅಂತ ರ್ಜಾತಿ ವಿವಾಹವಾಗಿದ್ದಾರಾ? ಎಂದು ಪ್ರಶ್ನಿಸಿದರಲ್ಲದೆ, ಸರ್ಕಾರದಿಂದ ಪ್ರೋತ್ಸಾಹ ಧನ ಪಡೆಯುವುದಕ್ಕೆ ತಪ್ಪು ಮಾಹಿತಿ ನೀಡಿದ್ದಾರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣಾಧಿಕಾರಿ ಗಳು ಮೂರು ವರ್ಷದಿಂದ ಅಂತ ರ್ಜಾತಿ ವಿವಾಹವಾಗಿರುವ ದಂಪತಿಗಳ ದಾಖಲೆ ಪರಿಶೀಲಿಸಲಾಗಿದೆ. ಎಲ್ಲಾ ಜೋಡಿಗಳು ಅಂತರ್ಜಾತಿ ವಿವಾಹವಾಗಿ ದ್ದಾರೆ. ಎರಡು ಹಂತದಲ್ಲಿ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮೈಸೂರು ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಅಂತರ್ಜಾತಿ ವಿವಾಹ ನಡೆದಿರುವುದು ಒಳ್ಳೆ ಬೆಳವಣಿಗೆ. ಬದಲಾವಣೆ ತರುವ ನಿಟ್ಟಿನಲ್ಲಿ ಅಂತರ್ಜಾತಿ ವಿವಾಹ ನಾಂದಿ ಯಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶ ದಲ್ಲಿಯೇ ಮೈಸೂರು ಜಿಲ್ಲೆ ಸದ್ದಿಲ್ಲದೆ ಕ್ರಾಂತಿ ಮಾಡಿದೆ. ಹೋರಾಟಗಳ ಫಲ ಪ್ರದವಾಗುತ್ತಿದೆ. ಸಮಾಜಕ್ಕೆ ಒಳ್ಳೆ ಸಂದೇಶ ರವಾನೆಯಾಗಿದೆ. ಎಲ್ಲಾ ಜೋಡಿಗಳು ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿ ದ್ದಾರಾ ಎಂದು ಪರಿಶೀಲಿಸಿ. ವರ್ಷ ಕ್ಕೊಮ್ಮೆಯಾದರೂ ಮಾಹಿತಿ ಸಂಗ್ರಹಿ ಸುವಂತೆ ಸಲಹೆ ನೀಡಿದರು.
ಆರ್‍ಐ, ವಿಎಗಳು ಇಂಡಿಯ ನಾ ಪಾಕಿಸ್ತಾನ ಮಾಡ್ತಾರೆ : ವಿವಿಧ ಸವಲತ್ತು ಪಡೆಯಲು ಪರಿಶಿಷ್ಟ, ಪಂಗಡದ ಫಲಾ ನುಭವಿಗಳು ಅರ್ಜಿ ಸಲ್ಲಿಸಿದರೆ ಸಮ ರ್ಪಕ ದಾಖಲೆಗಳಿಲ್ಲ ಎಂಬ ಸಬೂಬು ನೀಡಿ ತಡೆ ಹಿಡಿಯಲಾಗುತ್ತಿದೆ. ಗ್ರಾಮ ಲೆಕ್ಕಿಗರು, ಕಂದಾಯಾಧಿಕಾರಿಗಳು ಫಲಾನುಭವಿಗಳಿಗೆ ಬೇಕಾದ ದಾಖಲೆ ಗಳನ್ನು ಒದಗಿಸಿಕೊಡುವುದಕ್ಕೆ ಹಿಂದೇಟು ಹಾಕುತ್ತಾರೆ. ಬ್ರಹ್ಮನಂತೆ ಆಡುವ ಗ್ರಾಮಲೆಕ್ಕಿಗರು ಹಾಗೂ ಕಂದಾಯಾಧಿ ಕಾರಿಗಳು ಇಂಡಿಯಾ(ಭಾರತ)ವನ್ನು ಪಾಕಿಸ್ತಾನವನ್ನಾಗಿ, ಪಾಕಿಸ್ತಾನವನ್ನು ಇಂಡಿಯ ಆಗಿ ಬದಲಿಸಿಬಿಡುತ್ತಾರೆ. ಅವರಿಗೆ ಜನ ಸಾಮಾನ್ಯರ ಬಗ್ಗೆ ಒಲವು, ಕಾಳಜಿ ಇರುವುದಿಲ್ಲ. ಕೆಲಸ ಮಾಡಲು ಬದ್ಧತೆ ಇಲ್ಲದವರಂತೆ ವರ್ತಿಸುತ್ತಾರೆ ಎಂದು ಸಮಿತಿ ಅಧ್ಯಕ್ಷ ಹೆಚ್.ಕೆ.ಕುಮಾರ ಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯಲ್ಲಿ 181 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 171 ಮಂದಿ ಗರ್ಭಿಣಿಯರು ಅಪೌಷ್ಠಿಕತೆಗೆ ತುತ್ತಾಗಿದ್ದಾರೆ. ಇಲಾಖೆ ವತಿಯಿಂದ ಪೌಷ್ಠಿಕಾಂಶ ವೃದ್ಧಿಸುವ ಮಾತ್ರೆ ಸರಬ ರಾಜು ಮಾಡಲಾಗುತ್ತಿದೆ. ಎಲ್ಲಾ ಗರ್ಭಿಣಿ ಯರಿಗೆ ಪೌಷ್ಠಿಕಾಂಶಯುಕ್ತ ಆಹಾರ ಪೂರೈಸಲಾಗುತ್ತಿದೆ. ಕೆಲವರು ಮಾತ್ರೆ ಸೇವಿಸದೆ ಇರುವುದರಿಂದ ಅಪೌಷ್ಠಿಕತೆ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ಸಭೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಮಿತಿಯ ಅಧ್ಯಕ್ಷರು, ಗ್ರಾಮೀಣ ಪ್ರದೇಶದ ಮಹಿಳೆಯರು ಪೂರ್ಣ ಪ್ರಮಾಣದಲ್ಲಿ ಆರೋಗ್ಯವಂತರಾಗಿರು ವುದಿಲ್ಲ. ಈ ನಿಟ್ಟಿನಲ್ಲಿ ತಾಲೂಕು ಅಥವಾ ಗ್ರಾ.ಪಂ ಮಟ್ಟದಲ್ಲಿ ಆರೋಗ್ಯ ಶಿಬಿರ ಆಯೋಜಿಸಿ, ಜನರ ಆರೋಗ್ಯ ಸಮಸ್ಯೆ ಪತ್ತೆ ಹಚ್ಚಿ, ಚಿಕಿತ್ಸೆ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಹೆಚ್.ಡಿ.ಕೋಟೆ ತಾಲೂಕಿನಲ್ಲಿ ವೈದ್ಯರ ಕೊರತೆ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಡಿಎಚ್‍ಒ ವೈದ್ಯರ ಕೊರತೆ ಇಲ್ಲ. ಈಗಾಗಲೇ ನೇಮಕ ಮಾಡಿದ್ದೇವೆ. ಕೆಲ ವರು ಬಂದು ವರದಿ ಮಾಡಿಕೊಳ್ಳಬೇಕೆಂದರು.
ಎಸ್‍ಸಿ, ಎಸ್‍ಟಿ ಕಲ್ಯಾಣಕ್ಕೆ ಪರಿಣಾಮಕಾರಿ ಕ್ರಮ ಇಲ್ಲ
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನ ಸದ್ಬಳಕೆಯಾಗಿದೆ. ಕೆಲವು ಇಲಾಖೆಗಳಲ್ಲಿ ವಿವಿಧ ಕಾರಣಗಳಿಂದ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಕಲ್ಯಾಣಕ್ಕೆ ಪರಿಣಾಮ ಕಾರಿಯಾಗಿ ಕ್ರಮ ಕೈಗೊಳ್ಳದಿರುವುದು ಕಂಡು ಬಂದಿದೆ ಎಂದು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ವಿಷಾದಿಸಿದ್ದಾರೆ.
ಮೈಸೂರು ಜಿ.ಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲೆ ಹಾಗೂ ತಾಲೂಕು ಕೇಂದ್ರ ಗಳಲ್ಲೂ ಸಭೆ ನಡೆಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ವಿವಿಧ ಇಲಾಖೆಯಿಂದ ನೀಡುವ ಸೌಲಭ್ಯ ಸರಿಯಾಗಿ ದೊರೆಯುತ್ತಿದೆಯಾ? ಎಸ್‍ಸಿಪಿ, ಟಿಎಸ್‍ಪಿ ಅನುದಾನ ಸಮರ್ಪಕ ಬಳಕೆಯಾಗುತ್ತಿ ದೆಯಾ? ಎಂದು ಪರಿಶೀಲಿಸಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯದ ಏಳಿಗೆಗೆ ಕೈಗೊಂಡಿರುವ ಕ್ರಮ ತೃಪ್ತಿದಾಯಕವಾಗಿದೆ. ಜಿಲ್ಲೆಯಲ್ಲಿ ಸಾಕ್ಷರತೆ ಶೇ.74ರಷ್ಟಿದೆ. ಅದರಲ್ಲಿ ಪರಿಶಿಷ್ಟ ಜಾತಿಯದು ಶೇ. 64, ಪಂಗಡದ್ದು ಶೇ. 49ರಷ್ಟಿದೆ. ಸಾಕಷ್ಟು ಜಾಗೃತಿ ಮೂಡಿಸಿ ಈ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಡಿಡಿಪಿಐಗೆ ಈ ಸಮುದಾಯ ಗಳ ಸಾಕ್ಷರತೆಯ ಪ್ರಮಾಣ ತಿಳಿದಿಲ್ಲ. ಶಿಕ್ಷಣಕ್ಕೆ, ಉದ್ಯೋಗಕ್ಕೆ ಹೆಚ್ಚು ಹಣ ವಿನಿಯೋಗವಾಗಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದರು.
ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ದಾಖ ಲಾದ ಪ್ರಕರಣಗಳಲ್ಲಿ ತೀರ್ಮಾನ ಕೈಗೊಳ್ಳುವಲ್ಲಿ ವಿಳಂಭವಾಗಿದೆ. ಖುಲಾಸೆಯಾದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಸಮರ್ಪಕವಾಗಿ ತನಿಖೆ ಮಾಡಿ ಸಾಕ್ಷಿ ಹಾಗೂ ದೂರುದಾರರಿಗೆ ರಕ್ಷಣೆ ನೀಡುವು ದರೊಂದಿಗೆ ನ್ಯಾಯ ದೊರಕಿಸಿಕೊಡುವಂತೆ ಸೂಚನೆ ನೀಡಲಾಗಿದೆ ಎಂದರು.
ಕೆಲವೆಡೆ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡವೇ ಇಲ್ಲ ಎಂಬ ಮಾಹಿತಿಯನ್ನು ಅಧಿಕಾರಿಗಳೇ ನೀಡಿ ದ್ದಾರೆ. ಕೆಲವು ಇಲಾಖೆಗಳ ಅಧಿಕಾರಿಗಳಿಗೆ ತಮ್ಮ ಇಲಾಖೆಯಿಂದ ಅನುಸೂಚಿತ ಸಮುದಾಯಕ್ಕೆ ನೀಡಿರುವ ಸೌಲಭ್ಯಗಳ ಅಂಕಿ ಅಂಶ ತಿಳಿದಿಲ್ಲ. ಎಸ್‍ಸಿಪಿ-ಟಿಎಸ್‍ಪಿ ಅನುದಾನದಲ್ಲಿ 76 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ 74.24ಕೋಟಿ ರೂ. ಖರ್ಚಾಗಿದೆ. ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿ ರುವ ಅನುದಾನ ಖರ್ಚು ಮಾಡಲು ಸೂಚಿಸಲಾಗಿದೆ. ಗಿರಿಜನರು ವಾಸಿಸುವ ಹಾಡಿಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಡಿಸಿಎಫ್ ಡಾ.ಕೆ.ಸಿ. ಪ್ರಶಾಂತ್ ಕುಮಾರ್ ಅವರಿಗೆ ಸೂಚಿಸಿದ್ದೇನೆ ಎಂದರು.
ಜಿಲ್ಲೆಯಲ್ಲಿ 747 ಅಂತರ್ಜಾತಿ ವಿವಾಹವಾಗಿದೆ. ಇದು ಆಶಾದಾಯಕ ಬೆಳವಣಿಗೆ. ಪ್ರೋತ್ಸಾಹ ದನ ದೊಂದಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು, ಶೇ.3ರಷ್ಟು ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುತ್ತದೆ. ಅಂತರ್ಜಾತಿ ವಿವಾಹ ವಾದ ಜೋಡಿಗೆ ಮಾನಸಿಕ ಸ್ಥೈರ್ಯ ನೀಡುವ ನಿಟ್ಟಿನಲ್ಲಿ ಎಸ್ಸಿ ಸಮುದಾಯಕ್ಕೆ ಸೇರಿದ ವಧು ಅಥವಾ ವರನಿಗೆ ಉದ್ಯೋಗ ಕೊಡಿಸುವ ಉದ್ದೇಶ ನಮ್ಮದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ಸಮುದಾಯದ ಫಲಾನುಭವಿಗಳಿಗೆ ನೀಡಲು ಆರು ಸಾವಿರಕ್ಕೂ ಹೆಚ್ಚು ನಿವೇಶನ ಬೇಕಾಗಿವೆ. ಅದಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸ ಲಾಗಿದೆ. ಸಿಟಿಸಿಎಲ್ ಆಕ್ಟ್, ಎಲ್‍ಆರ್‍ಎಫ್ ಆಕ್ಟ್ ಅಡಿಯಲ್ಲಿ ಡಿಸಿ, ಎಸಿ, ತಹಶೀಲ್ದಾರ್ ನ್ಯಾಯಾ ಲಯದಲ್ಲಿ ಇತ್ಯರ್ಥವಾಗದ ಪ್ರಕರಣ ಹೆಚ್ಚಾಗಿವೆ. ಕಂದಾಯ ಇಲಾಖೆ ಕಾಲಮಿತಿಯೊಳಗೆ ಪ್ರಕರಣ ಗಳನ್ನು ಇತ್ಯರ್ಥಪಡಿಸಬೇಕು. ಸಚಿವರು ಬಂದರು ಎಂದು ಅಧಿಕಾರಿಗಳು ಪ್ರೋಟೊಕಾಲ್ ಹಿನ್ನೆಲೆಯಲ್ಲಿ ತೆರಳುತ್ತಿರುವುದರಿಂದ ಪ್ರಕರಣಗಳು ಇತ್ಯರ್ಥವಾಗು ತ್ತಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಅಧಿಕಾರಿ (ಜ್ಯುಡಿಷಿಯಲ್ ಆಫೀಸರ್) ನೇಮಕ ಮಾಡುವಂತೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಸದಸ್ಯರು ಹಾಗೂ ಶಾಸಕರಾದ ಎನ್.ಮಹೇಶ್, ಅಶ್ವಿನ್‍ಕುಮಾರ್, ಅನಿಲ್ ಚಿಕ್ಕಮಾದು, ಕೆ.ಅನ್ನದಾನಿ ಇನ್ನಿತರರು ಸಭೆಯಲ್ಲಿದ್ದರು.