ಮಧ್ಯಂತರ ಚುನಾವಣೆ ಸನ್ನಿವೇಶ ನಿರ್ಮಾಣವಾಗಿಲ್ಲ
ಮೈಸೂರು

ಮಧ್ಯಂತರ ಚುನಾವಣೆ ಸನ್ನಿವೇಶ ನಿರ್ಮಾಣವಾಗಿಲ್ಲ

June 25, 2019

ಮೈಸೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇಲ್ಲ. ಮೈತ್ರಿ ಸರ್ಕಾರವೇ ಐದು ವರ್ಷ ಪೂರ್ಣಗೊಳಿಸುತ್ತದೆ ಎಂದು ಉಪ ಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಂದಿಲ್ಲಿ ಪ್ರತ್ಯೇಕವಾಗಿ ತಿಳಿಸಿದರು.

ಮಧ್ಯಂತರ ಚುನಾವಣೆ ನಡೆಯುವ ಸನ್ನಿವೇಶ ರಾಜ್ಯದಲ್ಲಿ ನಿರ್ಮಾಣವಾಗಿಲ್ಲ. ಮುಂದಿನ ನಾಲ್ಕು ವರ್ಷ ಮೈತ್ರಿ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸುತ್ತೂರಿನಲ್ಲಿಂದು ತಿಳಿಸಿದರು. ಮಾಧ್ಯಮ ದವರಿಗೆ ಪ್ರತಿಕ್ರಿಯಿಸಿದ ಅವರು, ಐದು ವರ್ಷಗಳು ಉತ್ತಮ ಆಡಳಿತ ನೀಡುವುದು ನಮ್ಮ ಮೈತ್ರಿ ಸರ್ಕಾರದ ಉದ್ದೇಶ. ಹೀಗಾಗಿ ಮುಂದಿನ ನಾಲ್ಕು ವರ್ಷಗಳು ಮೈತ್ರಿ ಸರ್ಕಾರ ಯಶಸ್ವಿಯಾಗಿ ನಡೆಯಲಿದ್ದು, ಮಧ್ಯಂತರ ಚುನಾವಣೆ ನಡೆಯುವ ಸನ್ನಿವೇಶವಿಲ್ಲ. ಸರ್ಕಾರದ ಬಗ್ಗೆ ಹಲವರು ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರೆ ಅದೆಲ್ಲವೂ ಅವರವರ ವೈಯಕ್ತಿಕ ಅಭಿಪ್ರಾಯ.

ಇದೆಲ್ಲವೂ ಸಹಜ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಣ್ಣಪುಟ್ಟ ವ್ಯತ್ಯಾಸ ಇದ್ದೇ ಇರುತ್ತವೆ. ವೈಯಕ್ತಿಕ ಅಭಿಪ್ರಾಯಕ್ಕೆ ಯಾವುದೇ ಮನ್ನಣೆ ಇಲ್ಲ. ಪಕ್ಷದ ವರಿಷ್ಠರ ಅಭಿಪ್ರಾಯವೇ ಇಲ್ಲಿ ಅಂತಿಮ ಎಂದು ಹೇಳಿದರು. ಸಿಎಂ ಗ್ರಾಮ ವಾಸ್ತವ್ಯದ ಶ್ರೇಯಸ್ಸು ಜೆಡಿಎಸ್ ಪಕ್ಷಕ್ಕೆ ಮಾತ್ರ ದೊರೆಯುತ್ತದೆ ಎನ್ನಲಾಗು ತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅಂದರೆ ಜೆಡಿಎಸ್‍ಗೆ ಮಾತ್ರ ಮುಖ್ಯಮಂತ್ರಿ ಅಲ್ಲ. ಇಡೀ ರಾಜ್ಯಕ್ಕೆ ಮುಖ್ಯ ಮಂತ್ರಿ. ಆದ್ದರಿಂದ ಅವರ ಗ್ರಾಮ ವಾಸ್ತವ್ಯದ ಶ್ರೇಯಸ್ಸು ಮೈತ್ರಿ ಸರ್ಕಾರಕ್ಕೆ ಸಲ್ಲುತ್ತದೆ. ಸಿಎಂ ಗ್ರಾಮ ವಾಸ್ತವ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ನಾವು ಮಾಡಿದಾಗ ಅವರೂ ಭಾಗವಹಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾನೂ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ. ಸಿಎಂ ಗ್ರಾಮ ವಾಸ್ತವ್ಯ, ಜನಸಂಪರ್ಕ ಸಭೆ ಏನು ಮಾಡಿದರೂ ಟೀಕೆ ಮಾಡುತ್ತಾರೆ. ಆಡಳಿತ ಜನಸಮುದಾಯಕ್ಕೆ ತಲುಪಿಸಲು ಇವುಗಳು ಪರಿಣಾಮಕಾರಿ ಮಾರ್ಗ. ಈ ಅರ್ಥದಲ್ಲಿ ಇವುಗಳನ್ನು ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಬೇರೆ ಅರ್ಥ ಕಲ್ಪಿಸಿ ಟೀಕಿಸಿದರೆ ಅವರು ಯಾವ ರೀತಿಯ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಟೀಕಕಾರರಿಗೆ ತಿರುಗೇಟು ನೀಡಿದರು.

ಇದಕ್ಕೂ ಮುನ್ನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಡಾ.ಜಿ.ಪರಮೇಶ್ವರ್ ಅವರಿಗೆ ಪೊಲೀಸ್ ಇಲಾಖೆಯಿಂದ ಗಾಡ್ ಆಫ್ ಆನರ್ ನೀಡಿ ಸ್ವಾಗತ ಕೋರಲಾಯಿತು. ಬಳಿಕ ಡಾ.ಜಿ.ಪರಮೇಶ್ವರ್ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಿದ್ದರಾಮಯ್ಯ ಸ್ಪಷ್ಟನೆ: ರಾಮಕೃಷ್ಣನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯನ್ನು ವಿಸರ್ಜಿಸಲಾಗಿದೆ. ಮುಂದೆ ಹೊಸ ಮತ್ತು ಅನುಭವಿ ಮುಖಗಳನ್ನು ಸೇರ್ಪಡೆ ಮಾಡಿಕೊಂಡು ಕೆಪಿಸಿಸಿಯನ್ನು ಪುನಾರಚಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬಿಎಸ್‍ವೈ ಹಗಲುಗನಸು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಳೆದ ಒಂದು ವರ್ಷದಿಂದಲೂ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಅವರ ಕನಸಿಗೆ ಉತ್ತರ ನೀಡದಿರುವುದೇ ಲೇಸು ಎಂದು ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

Translate »