ಶ್ರಮ ವಹಿಸಿದರೆ ಯಾರೇ ಆದರೂ ಸಾಧಿಸಬಹುದು
ಮೈಸೂರು

ಶ್ರಮ ವಹಿಸಿದರೆ ಯಾರೇ ಆದರೂ ಸಾಧಿಸಬಹುದು

July 15, 2019

ಮೈಸೂರು, ಜು.14(ಪಿಎಂ)- ಬಾಲ್ಯ ದಲ್ಲೇ ಭವಿಷ್ಯದ ಜೀವನದ ಬಗ್ಗೆ ಸ್ಪಷ್ಟ ಕಲ್ಪನೆ ಇಟ್ಟುಕೊಂಡು ಮುನ್ನಡೆಯಿರಿ. ಯಾವುದೇ ವೃತ್ತಿಯಾದರೂ ಆರಂಭದಲ್ಲಿ ಕಷ್ಟ ಎದು ರಾಗುವುದು ಸಹಜ. ಅದಕ್ಕೆ ಅಂಜಬೇಡಿ ಎಂದು ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಹೇಳಿದರು.

ಮೈಸೂರಿನ ಮಹಾರಾಜ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದ ಕೃಷ್ಣರಾಜ ಸಭಾ ಮಂಟಪದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ ಗಳ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥೆ ಸಂಸ್ಥಾಪಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 226ನೇ ಜನ್ಮ ದಿನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯ ಹಳೆ ವಿದ್ಯಾರ್ಥಿಯೂ ಆದ ಎಂ.ಎಸ್.ಸತ್ಯು, ಶ್ರಮ ವಹಿಸಿದರೆ ಯಾರೇ ಆದರೂ ಸಾಧನೆ ಮಾಡಬಹುದು. ಕಾರ್ಮಿಕ, ರೈತ ಸೇರಿದಂತೆ ಯಾವುದೇ ವೃತ್ತಿಯಾ ದರೂ ಆರಂಭದಲ್ಲಿ ಕಷ್ಟದ ದಿನಗಳು ಇದ್ದೇ ಇರುತ್ತವೆ. ಕಷ್ಟ ಎಂದು ಹಿಂಜರಿದರೆ ಸೋಲು ಕಟ್ಟಿಟ್ಟ ಬುತ್ತಿ. ಯಾವುದೇ ಕೆಲಸವಾದರೂ ಪ್ರಾಮಾಣಿಕವಾಗಿ ತೊಡಗಿಸಿಕೊಂಡರೆ ಅದರಲ್ಲಿ ಯಶಸ್ಸು ಕಾಣಬಹುದು. ಶಾಲೆ ಯಲ್ಲಿ ಕಲಿಯುವುದೊಂದೇ ಮುಖ್ಯವಲ್ಲ. ಮುಂದಿನ ವೃತ್ತಿ ಬದುಕಿಗೂ ತಯಾರು ಗೊಳ್ಳುವುದೂ ಅಷ್ಟೇ ಮುಖ್ಯವಾಗುತ್ತದೆ ಎಂದು ನುಡಿದರು.

ನೀವು ವ್ಯಾಸಂಗ ಮಾಡಿದ ವಿದ್ಯಾ ಸಂಸ್ಥೆಗೆ ಒಮ್ಮೆಯಾದರೂ ಭೇಟಿ ನೀಡಿ ಎಂದು ಹಲವು ಬಾರಿ ನನಗೆ ಆಹ್ವಾನ ಇದ್ದರೂ ಕಾರ್ಯದೊತ್ತಡದಿಂದ ಇಲ್ಲಿಗೆ ಬರಲಾಗಿರ ಲಿಲ್ಲ. ಆದರೆ ಇಂದು ಕಾಲಕೂಡಿ ಬಂದಿತು. ಕಲೆಯಲ್ಲಿ ಹೆಚ್ಚು ಆಸಕ್ತಿ ಇದ್ದ ಹಿನ್ನೆಲೆ ಯಲ್ಲಿ ಇಲ್ಲಿ ನಾನು ಕಲಿಕಾ ವಿಚಾರದಲ್ಲಿ ಅಂತಹ ಬುದ್ಧಿವಂತ ವಿದ್ಯಾರ್ಥಿ ಆಗಿರ ಲಿಲ್ಲ. ಆಗ ನೃತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೆ. ಹಲವು ಸಾಂಸ್ಕøತಿಕ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದೆ. ಬಳಿಕ ಬೆಂಗ ಳೂರಿನಲ್ಲಿ ಬಿಎಸ್‍ಸಿಗೆ ಸೇರಿಕೊಂಡೆ. ಆದರೆ ಅರ್ಧಕ್ಕೆ ವ್ಯಾಸಂಗ ಮೊಟಕುಗೊಳಿಸಿ ಮುಂಬಯಿಗೆ ತೆರಳಿದೆ. ಅಲ್ಲಿ ರಂಗ ಭೂಮಿ, ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿ ಕೊಂಡೆ ಎಂದು ಹಳೆ ನೆನಪಿಗೆ ಜಾರಿದರು.

ಇದೇ ವೇಳೆ ಎಂ.ಎಸ್.ಸತ್ಯು ಅವ ರನ್ನು ಸನ್ಮಾನಿಸಲಾಯಿತು. ಅಲ್ಲದೆ, ಮಹಾರಾಜ ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿಯಲ್ಲಿ ವಾರ್ಷಿಕ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾ ಯಿತು. ಇದಕ್ಕೂ ಮುನ್ನ ಮುಮ್ಮಡಿ ಕೃಷ್ಣ ರಾಜ ಒಡೆಯರ್ ಫೋಟೋಗೆ ಎಂ.ಎಸ್. ಸತ್ಯು ಸೇರಿದಂತೆ ಇತರ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಅಲ್ಲದೆ, ಕಾಲೇಜು ಆವರಣದ ಮುಂಭಾಗದಲ್ಲಿರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಪುತ್ಥಳಿಗೂ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ಎಸ್. ಶ್ರೀಧರರಾಜೇ ಅರಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು, ಮಾಜಿ ಉಪ ಮೇಯರ್ ಕೃಷ್ಣ, ಆದಿತ್ಯ ಆಸ್ಪತ್ರೆ ಮುಖ್ಯಸ್ಥ ಡಾ.ಚಂದ್ರಶೇಖರ್, ಸಾರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಎಂ.ಎಸ್.ಬಾಲ ದೇವರಾಜೇ ಅರಸ್, ಸಿಎಫ್‍ಟಿಆರ್‍ಐ ನಿವೃತ್ತ ಉಪ ನಿರ್ದೇಶಕ ಬಿ.ಆರ್. ಶ್ರೀಹರಿ, ಪ್ರೌಢಶಾಲೆ ಉಪಪ್ರಾಂಶುಪಾಲ ಡಾ.ಡಿ. ಮಹೇಶ ಮತ್ತಿತರರು ಹಾಜರಿದ್ದರು.

Translate »