ಮೈಸೂರು, ಜು.15(ಆರ್‍ಕೆ)- ಸಾವಿರಾರು ಮಂದಿಯಿಂದ ಸಂಗ್ರಹಿಸಿದ ಠೇವಣಿ ಹಣ ಹಿಂತಿರುಗಿಸದೆ ಕೋಟ್ಯಾಂತರ ರೂ. ವಂಚಿಸಿದ್ದ ಮೆ. ಲ್ಯಾನ್ಸರ್ ಫೈನಾನ್ಸ್ ಕಂಪನಿ ಪ್ರೈ.ಲಿ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರ ಆದೇಶ ನೀಡಿದೆ.
ಈ ಸಂಬಂಧ ಜೂನ್ 20ರಂದು ಅಧಿಸೂಚನೆ ಹೊರಡಿಸಿರುವ ಕಂದಾಯ ಇಲಾಖೆ (ವಿಶೇಷ ಘಟಕ) ಅಧೀನ ಕಾರ್ಯದರ್ಶಿ ಕೆ.ಆರ್. ರವಿಕುಮಾರ್ ಅವರು, ಠೇವಣಿ ವಂಚಿಸಿರುವ ಲ್ಯಾನ್ಸರ್ ಫೈನಾನ್ಸ್ ಕಂಪನಿಯ ಟಿ.ಸಿ. ರಾಜೇಂದ್ರ, ಪತ್ನಿ ಅನಿತಾ ಹಾಗೂ ಇ.ಎಸ್. ಅಶೋಕ್ ಅವರ ಪತ್ನಿ ವಿನೋದಾ ಅವರಿಗೆ ಸೇರಿದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಿದ್ದಾರೆ.
ಮೈಸೂರು ಜಿಲ್ಲೆ, ನಂಜನಗೂಡು ತಾಲೂಕಿನ ಯಚಗಳ್ಳಿ ಗ್ರಾಮದ ಸರ್ವೆ ನಂ. 172/2ರಲ್ಲಿ 1.04 ಎಕರೆ, 172/5ರಲ್ಲಿ 1.13 ಎಕರೆ ಭೂಮಿ ಮೈಸೂರು ನಗರದ ಯಾದವಗಿರಿ 3ನೇ ಮೇನ್‍ನಲ್ಲಿರುವ 2 ಕಟ್ಟಡ, ದಟ್ಟಗಳ್ಳಿ 3ನೇ ಹಂತದ ನಿವೇಶನ, ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರಂನಲ್ಲಿರುವ 5 ಗುಂಟೆ ಜಾಗ, ಕೊಪ್ಪ ತಾಲೂಕಿನ ಅಡ್ಡಳ ಗ್ರಾಮದ ಸರ್ವೆ ನಂ. 305ರಲ್ಲಿ 4.35 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ತಿಳಿಸಲಾಗಿದೆ.
ಮೈಸೂರು ಉಪ ವಿಭಾಗಾಧಿಕಾರಿಗಳನ್ನು ಈ ಪ್ರಕ್ರಿಯೆಗೆ ಅಧಿಕೃತ ಅಧಿಕಾರಿ ಯನ್ನಾಗಿ ನೇಮಕ ಮಾಡಲಾಗಿದ್ದು, ಠೇವಣಿದಾರರ ಹಿತದೃಷ್ಟಿಯಿಂದ ಹಣಕಾಸು ಸಂಸ್ಥೆಗಳ ಠೇವಣಿದಾರರ ರಕ್ಷಣಾ ಕಾಯ್ದೆ 2004ರ ರೀತ್ಯಾ ಕ್ರಮ ವಹಿಸ ಬೇಕೆಂದು ರವಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.